ಶಾಸಕರನ್ನು ಒತ್ತೆ ಇರಿಸಿಕೊಂಡಿಲ್ಲ; ಪಕ್ಷ ಒಡೆಯಲು ಡಿಎಂಕೆ ಸಂಚು: ಶಶಿಕಲಾ
ಎಐಎಡಿಎಂಕೆಯ ಯಾವುದೇ ಶಾಸಕರನ್ನೂ ತಾವು ಒತ್ತೆಯಾಳುಗಾಳಾಗಿರಿಸಿಕೊಂಡಿಲ್ಲ. ಶಾಸಕರೆಲ್ಲರೂ ರೆಸಾರ್ಟ್ ನಿಂದ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.

ಚೆನ್ನೈ: ಎಐಎಡಿಎಂಕೆಯ ಯಾವುದೇ ಶಾಸಕರನ್ನೂ ತಾವು ಒತ್ತೆಯಾಳುಗಾಳಾಗಿರಿಸಿಕೊಂಡಿಲ್ಲ. ಶಾಸಕರೆಲ್ಲರೂ ರೆಸಾರ್ಟ್ ನಿಂದ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.
ಶಾಸಕರು ತಂಗಿರುವ ಕೂವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ತೆರಳಿ ಶಾಸಕರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕಲಾ, ತಾವಾಗಲಿ ಅಥವಾ ತಮ್ಮ ಬಣದ ನಾಯಕರಾಗಲೀ ಯಾವುದೇ ಶಾಸಕರನ್ನೂ ಒತ್ತೆಯಾಳುಗಳಾಗಿ ಇರಿಸಿಕೊಂಡಿಲ್ಲ. ಶಾಸಕರು ಇಚ್ಚಿಸಿದರೆ ಅವರು ರೆಸಾರ್ಟ್ ಬಿಟ್ಟು ಹೊರಗೆ ತೆರಳಲು ಸ್ವತಂತ್ರರು ಎಂದು ಹೇಳಿದ್ದಾರೆ.
"ಪನ್ನೀರ್ ಸೆಲ್ವಂ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ತಾವೇ ಶಾಸಕರನ್ನು ಬಲವಂತವಾಗಿ ಒತ್ತೆ ಇಟ್ಟಿಕೊಂಡಿರುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದಲ್ಲಿನ ಭಿನ್ನಮತಕ್ಕೆ ಡಿಎಂಕೆ ಪಕ್ಷವೇ ನೇರಕಾರಣವಾಗಿದ್ದು, ಪಕ್ಷವನ್ನು ಒಡೆಯುವ ಮೂಲಕ ತಾನು ಅಧಿಕಾರ ಹಿಡಿಯಲು ಡಿಎಂಕೆ ಹವಣಿಸುತ್ತಿದೆ. ಆದರೆ ಪಕ್ಷ ಇಬ್ಭಾಗವಾಗಲು ನಾನು ಬಿಡುವುದಿಲ್ಲ. ಜಯಲಲಿತಾ ಅವರಿರುವಾಗ ಎಐಎಡಿಎಂಕೆ ಪಕ್ಷ ಹೇಗೆ ಅಖಂಡವಾಗಿತ್ತೋ ಈಗಲೂ ಪಕ್ಷ ಅಖಂಡವಾಗಿರುತ್ತದೆ. ಯಾವುದೇ ಹಿತಾಸಕ್ತಿಗಳಿಂದ ಪಕ್ಷ ಬೇರ್ಪಡಿಸಲು ಸಾಧ್ಯವಿಲ್ಲ".
ಪನ್ನೀರ್ ಸೆಲ್ವಂ ಬಣದ ನಾಯಕರು ಪಕ್ಷ ಮಹಿಳಾ ಶಾಸಕಿಯರಿಗೆ ಬೆದರಿಕೆ ಹಾಕುವ ಮೂಲಕ ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಶಶಿಕಲಾ ಆರೋಪಿಸಿದರು.
ಶಾಸಕರೊಂದಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿರುವ ಚಿನ್ನಮ್ಮ
ಇನ್ನು ಇಂದು ರಾತ್ರಿ ಶಾಸಕರೊಂದಿಗೆ ರೆಸಾರ್ಟ್ ನಲ್ಲೇ ತಂಗಲು ಚಿನ್ನಮ್ಮ ಶಶಿಕಲಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಶಾಸಕರು ತಂಗಿರುವ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ತಂಗಲು ಶಶಿಕಲಾ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಳೆ ಬೆಳಗ್ಗೆ ಸುಮಾರು 10.30ಕ್ಕೆ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಲಿದ್ದು, ತೀರ್ಪಿನ ಮೇಲೆ ಇದೀಗ ತಮಿಳುನಾಡು ರಾಜಕೀಯ ಬಿಕ್ಕಟ್ಟಿನ ಭವಿಷ್ಯ ಆಧಾರವಾಗಿದೆ. ಒಂದು ವೇಳೆ ನಾಳೆ ಶಶಿಕಲಾ ಅವರಿಗೆ ಶಿಕ್ಷೆಯಾದರೆ, ಆಗ ಪನ್ನೀರ್ ಸೆಲ್ವಂ ಅವರ ದಾರಿ ಸುಗಮವಾಗಲಿದೆ. ಒಂದು ವೇಳೆ ಶಶಿಕಲಾ ಪರವಾಗಿ ತೀರ್ಪು ಬಂದರೆ ಆಗ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಲು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರಿಗೆ ಸೂಚಿಸುವ ಸಾಧ್ಯತೆ ಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


