ದೆಹಲಿ: ನೆಹರು ಪ್ಲೇಸ್ ಮೆಟ್ರೊ ಸ್ಟೇಷನ್ ಬಳಿ ಪೊಲೀಸರ ಗುಂಡಿನ ದಾಳಿ; ಗ್ಯಾಂಗ್ಸ್ಟರ್ ಬಂಧನ
ರಾಜಧಾನಿ ದೆಹಲಿಯಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಘಟನೆ ನೆಹರೂ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ನಡೆದಿದೆ...

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡು ಓರ್ವ ಗ್ಯಾಂಗ್'ಸ್ಟರ್'ನ್ನು ಬಂಧನಕ್ಕೊಳಪಡಿಸಿರುವ ಘಟನೆ ನೆಹರೂ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ನಡೆದಿದೆ.
ಬೆಳಗಿನ ಜಾವ 2.30ರ ಸುಮಾರಿಗೆ ಬುಲೆಟ್ ಗಾಡಿಯಲ್ಲಿ ಇಬ್ಬರು ಆರೋಪಿಗಳು ಬಂದಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಗಾಡಿ ನಿಲ್ಲಿಸುವಂತೆ ಹೇಳಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ವಾಹನದಲ್ಲಿ ಮತ್ತಷ್ಟು ವೇಗವಾಗಿ ಹೋಗಿದ್ದಾರೆ. ಈ ವೇಳೆ ಪೊಲೀಸರು ಗಾಡಿಯನ್ನು ಹಿಂಬಾಲಿಸಿದ್ದಾರೆ.
ನಂತರ ಆರೋಪಿಗಳನ್ನು ಸುತ್ತುವರೆದ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ದಾಳಿಗೆ ಪೊಲೀಸರು ಪ್ರತಿದಾಳಿ ನಡೆಸುವ ಮೂಲಕ ಅಕ್ಬರ್ ಎಂಬ ಒಬ್ಬ ಕುಖ್ಯಾತ ದರೋಡೆಕೋರನನ್ನು ಬಂಧನಕ್ಕೊಳಪಡಿಸಿದ್ದಾರೆ. ಸ್ಥಳದಲ್ಲಿ ಕತ್ತಲೆಯಿದ್ದರಿಂದಾಗಿ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಪ್ರಸ್ತುತ ಪೊಲೀಸರು ಬಂಧಿಸಿರುವ ಆರೋಪಿ, ಆರೋಪಿಯನ್ನು ಅಕ್ಬರ್ ಎಂದು ಗುರ್ತಿಸಲಾಗಿದ್ದು, ಈತನ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಈ ಹಿಂದೆ ಪೊಲೀಸರು ಈತನನ್ನು ಹಿಡಿದುಕೊಟ್ಟವರಿಗೆ ರೂ.25 ಸಾವಿರ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಘೋಷಿಸಿದ್ದರು.
ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ ಶೂಟೌಟ್ ನಲ್ಲಿ ಸುಮಾರು 13 ಸುತ್ತುಗಳ ಗುಂಡಿನ ಹಾರಾಟ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳು 8 ಸುತ್ತುಗಳ ಗುಂಡಿನ ಹಾರಾಟ ನಡೆಸಿದ್ದಾರೆ. ಇದರಂತೆ ಪೊಲೀಸರು ಕೂಡ 5 ಸುತ್ತಿನ ಗುಂಡು ಹಾರಾಟ ನಡೆಸಿದ್ದಾರೆ. ಪೊಲೀಸರು ಬುಲೆಟ್ ಪ್ರೂಫ್ ಜ್ಯಾಕೆಟ್ ಧರಿಸಿದ್ದರಿಂದಾಗಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡೆವು ಎಂದು ಪೊಲೀಸರು ಹೇಳಿದ್ದಾರೆ.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶಾಹಿದ್ ಎಂದು ಹೇಳಲಾಗುತ್ತಿದ್ದು. ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
2016ರ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ದೆಹಲಿಯ ಪುಲ್ ಪ್ರಹಲ್ದ್'ಪುರ್ ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಈತನನ್ನು ಹುಡುಕಿಕೊಟ್ಟವರಿಗೆ ರೂ.25 ಸಾವಿರ ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಲಾಗಿತ್ತು. ಶೂಟೌಟ್ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಬುಲೆಟ್ ಪ್ರೂಫ್ ಜ್ಯಾಕೆಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೂಟೌಟ್ ಬಳಿಕ ಅಕ್ಬರ್ ಅಲಿಯಾಸಾ ದಾನಿಶ್ ಎಂಬ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಅಕ್ಬರ್ ಒಬ್ಬ ಕುಖ್ಯಾತ ದರೋಡೆಕೋರನಾಗಿದ್ದು, ಸಾಕಷ್ಟು ದರೋಡೆ ಪ್ರಕರಣಗಳು, ಸರಗಳ್ಳತನ ಹಾಗೂ ಕೊಲೆ ಪ್ರಕರಣಗಳಲ್ಲಿ ವಾಟೆಂಡ್ ಕ್ರಿಮಿನಲ್ ಆಗಿದ್ದ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ ರೊಮಿಸ್ ಬಾನಿಯಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


