ಸಯೀದ್ ಬಿಡುಗಡೆಗೆ ಆಗ್ರಹ: ಮರುನಾಮಾಂಕಿತ ಜೆಯುಡಿಯಿಂದ ಪಾಕ್'ನಲ್ಲಿ ಪ್ರತಿಭಟನೆ
26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಗೆ ಪಾಕಿಸ್ತಾನ ಸರ್ಕಾರ ಗೃಹ ಬಂಧನ ವಿಧಿಸಿರುವುದಕ್ಕೆ ಜಮಾತ್-ಉದ್-ದವಾದಿಂದ ಮರುನಾಮಾಂಕಿತಗೊಂಡಿರುವ ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (ತಜ್ಕ್) ವಿರೋಧ ವ್ಯಕ್ತಪಡಿಸಿದ್ದು...

ಲಾಹೋರ್; 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಗೆ ಪಾಕಿಸ್ತಾನ ಸರ್ಕಾರ ಗೃಹ ಬಂಧನ ವಿಧಿಸಿರುವುದಕ್ಕೆ ಜಮಾತ್-ಉದ್-ದವಾದಿಂದ ಮರುನಾಮಾಂಕಿತಗೊಂಡಿರುವ ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (ಟಿಎಜೆಕೆ) ವಿರೋಧ ವ್ಯಕ್ತಪಡಿಸಿದ್ದು, ಸಯೀದ್ ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಸರ್ಕಾರ ಗೃಹಬಂಧನದಲ್ಲಿರಿಸಿದ ಕೆಲವೇ ದಿನಗಳಲ್ಲಿ ಜಮಾತ್–ಉದ್–ದವಾ ಸಂಘಟನೆಯಲ್ಲಿ ಕೆಲಸ ಬದಲಾವಣೆಗಳು ಕಂಡುಬಂದಿತ್ತು. ಸಯೀದ್ ಗೃಹಬಂಧನಕ್ಕೆ ಒಳಪಡುವ ವಾರಕ್ಕೂ ಮೊದಲು ಸ್ವತಂತ್ರ ಕಾಶ್ಮೀರ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕುವ ಬಗ್ಗೆ ಸುಳಿವೊಂದನ್ನುನೀಡಿದ್ದ. ಇದರಂತೆ ಹಫೀಜ್ ಗೆ ಗೃಹ ಬಂಧನ ವಿಧಿಸುತ್ತಿದ್ದಂತೆಯೇ ಜಮಾತ್-ಉದ್-ದವಾ ಸಂಘಟನೆ 'ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ" ಎಂದು ಹೆಸರು ಬದಲಿಸಿಕೊಂಡಿತ್ತು.
ಇದೀಗ ಸಯೀದ್ ಬಂಧನಕ್ಕೆ ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (ಟಿಎಜೆಕೆ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಯೀದ್ ನನ್ನು ಕೂಡಲೇ ಬಂಧನದಿಂದ ವಿಮುಕ್ತಿಗೊಳಿಸಿರುವಂತೆ ಆಗ್ರಹಿಸಿ ಪಾಕಿಸ್ತಾನದ ಮೂಲೆಮೂಲೆಗಳಲ್ಲೂ ರ್ಯಾಲಿಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಲಾಹೋರ್ ನ ನಸ್ಸೆರ್ ಬಾಘ್ ಎಂಬಲ್ಲಿ ನಿನ್ನೆಯಷ್ಟೇ ಯಕ್ಜಾಹ್ತೀ (ಒಗ್ಗಟ್ಟು) ಕಾಶ್ಮೀರ ಕಾನ್ಫರೆನ್ಸ್'ನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜೆಯುಡಿ ಹಾಗೂ ಎಫ್ಐಎಫ್ ನ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ. ಭಾರತ ಮತ್ತು ಅಮೆರಿಕ ಸರ್ಕಾರ ಸಯೀದ್ ನನ್ನು ಬಂಧಿಸಿದೆ. ನವಾಜ್ ಷರೀಫ್ ಅವರು ನರೇಂದ್ರ ಮೋದಿಯವರೊಂದಿಗೆ ಸ್ನೇಹವನ್ನು ಉಳಿಸಿಕೊಳ್ಳುವ ಮೂಲಕ ಪಾಕಿಸ್ತಾನ ರಾಷ್ಟ್ರದ ವರ್ಚಸ್ಸನ್ನು ಹಾಳು ಮಾಡುತ್ತಿದ್ದಾರೆ. ಸಯೀದ್ ಬಿಡುಗಡೆಗಾಗಿ ಪಾಕಿಸ್ತಾನದ ಪ್ರಜೆಗಳು ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದು ಜೆಯುಡಿ ಕೇಂದ್ರೀಯ ನಾಯಕ ಹಫೀಜ್ ಅಬ್ದುಲ್ ರೆಹ್ಮಾನ್ ಮಕ್ಕಿ (ಸಯೀದ್ ಭಾವ) ಹೇಳಿದ್ದಾನೆ.
ಕಾಶ್ಮೀರ ವಿಚಾರ ಸಂಬಂಧ ಷರೀಫ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಕಾಶ್ಮೀರಿಗರಿಗಾಗಿ ಪಾಕಿಸ್ತಾನ ಪ್ರಾಮಾಣಿಕವಾಗಿದೆ ಎಂದು ಪಾಕಿಸ್ತಾನ ಜನತೆಗೆ ತಿಳಿಸಬೇಕಿದೆ ಎಂದು ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


