ನಮ್ಮ ಸೈನಿಕರು ಸತ್ತಿದ್ದು ಭಾರತೀಯ ಸೈನಿಕರ ದಾಳಿಯಿಂದಾಗಿ ಅಲ್ಲ: ಪಾಕಿಸ್ತಾನ ಸ್ಪಷ್ಟನೆ
ಎಲ್ ಒಸಿ ದಾಟಿ ಪಾಕ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ ವಿಚಾರ ವೈರಲ್ ಆಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಅಂತಹ ಘಟನೆ ನಡೆದಿಲ್ಲ ಎಂದು ವಾದ ಮುಂದಿಟ್ಟಿದೆ.

Published On :
ಇಸ್ಲಾಮಾಬಾದ್: ಎಲ್ ಒಸಿ ದಾಟಿ ಪಾಕ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ ವಿಚಾರ ವೈರಲ್ ಆಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಅಂತಹ ಘಟನೆ ನಡೆದಿಲ್ಲ ಎಂದು ವಾದ ಮುಂದಿಟ್ಟಿದೆ.
ಈ ಬಗ್ಗೆ ಪಾಕಿಸ್ತಾನ ರಕ್ಷಣಾ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಮೂವರು ಸೈನಿಕರು ಸತ್ತಿರುವುದು ನಿಜ. ಆದರೆ ಅವರು ಭಾರತೀಯ ಸೈನಿಕರ ದಾಳಿಯಿಂದಾಗಿ ಸತ್ತಿಲ್ಲ. ಬದಲಿಗೆ ವಿದೇಶಿ ದಾಳಿಕೊರರಿಂದ ಸತ್ತಿರಬಹುದು ಎಂದು ಹೇಳಿದೆ. ಅಂತೆಯೇ ರಾಖಿಕ್ರಿ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದು, ಈ ಬಗ್ಗೆ ಭಾರತೀಯ ಸೇನಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದೂ ಪಾಕಿಸ್ತಾನ ಹೇಳಿದೆ.
ಇನ್ನು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ಸೇನಾ ಪೋಸ್ಟ್ ಗಳನ್ನು ಧ್ವಂಸಗೊಳಿಸಿ ಮೂವರು ಸೈನಿಕರನ್ನು ಹತ್ಯೆಗೈದ ಕುರಿತು ಭಾರತೀಯ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿದ್ದು, ಈ ಸುದ್ದಿಗಳು ಸತ್ಯಕ್ಕೆ ದೂರವಾದದ್ದು. ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ಬಂದಿಲ್ಲ ಎಂದೂ ಪಾಕಿಸ್ತಾನ ಸ್ಪಷ್ಟನೆ ನೀಡಿದೆ. ಅಂತೆಯೇ ಪಾಕ್ ಗಡಿಯೊಳಗೆ ನುಗ್ಗಿದ ಕುರಿತು ಭಾರತ ನೀಡುತ್ತಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು. ಭಾರತದ ಈ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಇದರಿಂದ ಪ್ರಾದೇಶಿಕ ಅಶಾಂತಿ ತಲೆದೋರುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಲು ಭಾರತ ಪ್ರಯತ್ನಿಸುತ್ತಿದೆ ಎಂದೂ ಪಾಕಿಸ್ತಾನ ಆರೋಪಿಸಿದೆ.
ಈ ಹಿಂದೆಯೂ ಕೂಡ ಪಾಕಿಸ್ತಾನ ಹಲವು ಬಾರಿ ಇಂತಹ ಹೇಳಿಕೆ ನೀಡಿದ್ದು, ಈ ಹಿಂದೆ ಭಾರತ ಪಿಒಕೆಯೊಳಗೆ ನುಗ್ಗಿ ಅಲ್ಲಿದ್ದ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿತ್ತು. ಅಲ್ಲದೆ ಹತ್ತಾರು ಉಗ್ರರನ್ನು ಹತ್ಯೆಗೈದಿತ್ತು. ಆಗಲೂ ಕೂಡ ಪಾಕಿಸ್ತಾನ ಇದೇ ಹೇಳಿಕೆಯನ್ನು ನೀಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಗಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಇಂತಹ ಹೇಳಿಕೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyPakistan Armyಪಾಕಿಸ್ತಾನ ಸೇನೆಕದನ ವಿರಾಮ ಉಲ್ಲಂಘನೆಭಾರತೀಯ ಸೇನೆLoCಎಲ್ ಒಸಿcease fire violationSurgical strikeಸರ್ಜಿಕಲ್ ಸ್ಟ್ರೈಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


