ದೇಶ

ಆರು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ಚಾಲನೆ

ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 6 ಹೊಸ ಅಣುಚಾಲಿತ ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ ಎನ್ನಲಾಗಿದೆ.

ಆರು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ಚಾಲನೆ
ಸಂಗ್ರಹ ಚಿತ್ರ
Published On :
ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 6 ಹೊಸ ಅಣುಚಾಲಿತ ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕೇಂದ್ರ ರಕ್ಷಣಾ ಇಲಾಖೆ ಮತ್ತು ಭಾರತೀಯ ನೌಕಾಪಡೆ ಆರು ಹೊಸ ಅಣುಚಾಲಿತ ಜಲಾಂರ್ಗಾಮಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಜಲಾಂತರ್ಗಾಮಿ ನಿರ್ಮಾಣ ಕಾರ್ಯ ರಹಸ್ಯ ಯೋಜನೆಯಾಗಿದ್ದು, ಈ  ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಆಡ್ಮಿರಲ್​ ಸುನಿಲ್​ ಲಾಂಬಾ ತಿಳಿಸಿದ್ದಾರೆ. ಅಂತೆಯೇ ಭಾರತೀಯ ಸೇನೆ ಹಿಂದೂ ಮಹಾಸಾಗರ ಮತ್ತು  ಫೆಸಿಫಿಕ್​ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾರತೀಯ ನೌಕಾಪಡೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್​ ನೌಕಾಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ನೌಕಾಪಡೆ  ಮುಖ್ಯಸ್ಥ ತಿಳಿಸಿದರು. 
ಸುದ್ದಿಗೋಷ್ಠಿ ವೇಳೆ ಭಾರತೀಯ ಸೇನೆಯ ಅಗತ್ಯತೆಗಳ ಕುರಿತು ಮಾತನಾಡಿದ ಸುನಿಲ್ ಲಾಂಬಾ ಅವರು, ಸಬ್ ಮೆರಿನ್ ಗಳ ನಿರ್ಮಾಣ ಮಾತ್ರವಲ್ಲದೇ ಹೊಸ ಯುದ್ಧ ನೌಕೆಗಳು, ಹೊಸ ಬಗೆಯ ಶಸ್ತ್ರಾಸ್ಚ್ರ ವ್ಯವಸ್ಥೆಗಳ ಸೇರ್ಪಡೆ  ಮತ್ತು ಸಾಂಪ್ರದಾಯಿಕ ಯುದ್ಧ ಮತ್ತು ಅಸಂಪ್ರದಾಯಿಕ ಬೆದರಿಕೆಗಳನ್ನು ಎದುರಿಸುವ ಕುರಿತ ಸೇನೆಯನ್ನು ಬಲಪಡಿಸುವ ಅಗತ್ಯತೆ ಇದೆ ಎಂದು ಹೇಳಿದರು. ಸಬ್ ಮೆರಿನ್ ಗಳ ನಿರ್ಮಾಣ ಯೋಜನೆಯನ್ನು ಕ್ಲಾಸಿಫೈಯ್ಡ್  ಯೋಜನೆ ಎಂದು ಬಣ್ಣಿಸಿದ ಸುನಿಲ್ ಲಾಂಬಾ, ಚೀನಾ ದೇಶದ ಕಡಲ್ಗಳ್ಳರ ನಿಯಂತ್ರಣಕ್ಕಾಗಿ ಸಬ್ ಮೆರಿನ್ ಗಳನ್ನು ನಿಯೋಜಿಸುತ್ತಿರುವುದಾಗಿ ಹೇಳಿದೆಯಾದರೂ, ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ. ದೇಶದ ಸಮುದ್ರಗಡಿ ರಕ್ಷಣೆ  ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಚೀನಾದ ಒಟ್ಟು 8 ನೌಕೆಗಳು ಕಾರ್ಯಾಚರಿಸುತ್ತಿವೆ, ಈ ಬಗ್ಗೆ ನಮಗೆ ಅರಿವಿದ್ದು, ಈ ಸಂಬಂಧ ತೆಗೆದುಕೊಳ್ಳಬೇಕಾದ ಎಲ್ಲ ಮುಂಜಾಗ್ರತಾ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದೇವೆ.  ಪ್ರಮುಖವಾಗಿ ಅತ್ತ ಡೊಕ್ಲಾಂ ವಿವಾದ ಭುಗಿಲೆದ್ಧ ಬಳಿಕ ಚೀನಾ ದೇಶ ತನ್ನ ಸಬ್ ಮೆರಿನ್ ಗಳನ್ನು ಗಡಿಯಲ್ಲಿ ನಿಯೋಜಿಸಿದೆ, ಕಳೆದ 2 ತಿಂಗಳುಗಳಿಂದ ಚೀನಾ ಸಬ್ ಮೆರಿನ್ ಗಳು ಆಯಕಟ್ಟಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದು, ಈ  ಬಗ್ಗೆ ನೌಕಾಪಡೆ ಮಾಹಿತಿ ನಿರಂತರವಾಗಿ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಿದರು.
ಅಂತೆಯೇ ಭಾರತೀಯ ನೌಕಾಪಡೆ ಶೀಘ್ರದಲ್ಲೇ ಗಲ್ಫ್ ಅಡೆನ್  ನಿಂದ ಪಶ್ಚಿಮ ಪೆಸಿಫಿಕ್ ಸಾಗರದವರೆಗೂ ಯುದ್ಧ ನೌಕೆಗಳು, ಯುದ್ಥ ವಿಮಾನಗಳನ್ನು ನಿಯೋಜಿಸಲಿದೆ. ಭಾರತ ಮತ್ತು ಸಿಂಗಾಪುರ ನಡುವೆ ಸರಕು ಸಾಗಣಿಕಾ  ಒಪ್ಪಂದವೂ ಸೇರಿದಂತೆ ದ್ವಿಪಕ್ಷೀಯ ನೌಕಾ ಒಪ್ಪಂದವಾಗಿದ್ದು, ಅಮೆರಿಕದದಿಂದ ಕಳೆದ ಮೂರು ತಿಂಗಳಿನಿಂದ ಇಂಧನ ಪೂರೈಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಇನ್ನು ಭಾರತೀಯ ನೌಕಾ ಅಧಿಕಾರಿಗಳು ರಷ್ಯಾ ನಿರ್ಮಿತ ಐಎನ್ ಎಸ್ ಚಕ್ರಾ ಜಲಾಂತರ್ಗಾಮಿ ವೀಕ್ಷಣೆಗೆ ಅಮೆರಿಕದ ತಜ್ಞರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ವಿವಾದ ಸಂಬಂಧ ಮಾತನಾಡಿದ ಲಾಂಬಾ, ಯಾವುದೇ  ಅಮೆರಿಕ ಅಧಿಕಾರಿಗಳು ಮತ್ತು ತಜ್ಞರು ಐಎನ್ ಎಸ್ ಚಕ್ರ ನೌಕೆಯನ್ನು ವೀಕ್ಷಿಸಿಲ್ಲ. ಇದಕ್ಕೆ ನಾವು ಅನುವು ಕೂಡ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಐಎನ್ ಎಸ್ ಚಕ್ರಾ ರಷ್ಯಾ ನಿರ್ಮಿತ ಅಣು ಚಾಲಿತ  ಜಲಾಂತರ್ಗಾಮಿಯಾಗಿದ್ದು, ಪ್ರಸ್ತುತ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ಲಂಗರು ಹಾಕಿದೆ. ಜಲಾಂತರ್ಗಾಮಿಯ ಸೋನಾರ್ ವ್ಯವಸ್ಥೆ ಹಾಳಾಗಿದ್ದು, ಇನ್ನು ಮೂರು ತಿಂಗಳ ಕಾಲ ನೌಕೆಯ ದುರಸ್ತಿ ಕಾರ್ಯ ನಡೆಯಲಿದೆ.
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಭುತ್ವ ಸಾಧಿಸಲು ಚೀನಾ ಹವಣಿಸುತ್ತಿದ್ದು, ಈಗಾಗಲೇ ದಕ್ಷಿಣ ಚೀನಾ ಸಮುದ್ರವನ್ನು ಚೀನಾ ಬಹುತೇಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹೀಗಾಗಿ ನೆರೆಯ ಚೀನಾ ದೇಶದ ಪ್ರಾಬಲ್ಯ  ಹತ್ತಿಕ್ಕಲು ಸಮುದ್ರದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಲೇ ಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದ್ದು, ಇದೇ ಕಾರಣಕ್ಕೆ 6 ಅಣುಶಕ್ತಿ ಚಾಲಿತ  ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.