ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್ ಗೆ 10 ವರ್ಷ ಅಲ್ಲ, 20 ವರ್ಷ ಜೈಲು ಶಿಕ್ಷೆ
ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ....

Published On :
ಚಂಡೀಗಢ: ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಮುಂಚೆ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ಮಾಡಲಾಗಿತ್ತು. ಆದರೆ ತೀರ್ಪಿನ ಪ್ರತಿಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಲಾ 10 ವರ್ಷ ಜೈಲು ಜೈಲು ಶಿಕ್ಷೆ ವಿಧಿಸಲಾಗಿದ್ದು, ಅಪರಾಧಿ ಒಟ್ಟು 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ಇಬ್ಬರು ಸಂತ್ರಸ್ಥ ಮಹಿಳೆಯರಿಗೆ ಡೇರಾ ಮುಖ್ಯಸ್ಥ ತಲಾ 15 ಲಕ್ಷ ರುಪಾಯಿ ದಂಡ ನೀಡಬೇಕು ಎಂದು ಆದೇಶಿಸಲಾಗಿದೆ.
ಕಳೆದ ಶುಕ್ರವಾರ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ಅಪರಾಧಿ ಬಾಬಾಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಾಬಾ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಪಂಚಕುಲದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ವತಃ ನ್ಯಾಯಾಧೀಶರೇ ಅಪರಾಧಿ ಇರುವ ರೋಹ್ಟಕ್ ಜೈಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಜೈಲಿನಲ್ಲಿಯೇ ವಾದ-ಪ್ರತಿ ವಾದ ಆಲಿಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ರಾಮ್ ರಹೀಮ್ ಸಿಂಗ್ ಪರ ವಾದ ಮಂಡಿಸಿದ ಎಸ್ ಕೆ ಗಾರ್ಗ್ ಅವರು ಬಾಬಾ ಸಾಮಾಜಿಕ ಸೇವೆ ಮತ್ತು ಜನಾಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅವರ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಸಿಬಿಐ ಪರ ವಕೀಲರು ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಅತ್ಯಾಚಾರ ಪ್ರಕರಣದ ಕುರಿತಂತೆ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪು ಓದಲು ಆರಂಭಿಸಿದಾಗ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ತನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ ಕುಸಿದು ಬಿದ್ದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
2002ರಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಡೇರಾದ ಇಬ್ಬರು ಸಾದ್ವಿಯರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಪತ್ರದ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
rape caseಅತ್ಯಾಚಾರ ಪ್ರಕರಣRam Rahim Singh20 years in jailRamRahim Verdict. ರಾಮ್ ರಹೀಮ್ ಸಿಂಗ್20 ವರ್ಷ ಜೈಲು ಶಿಕ್ಷೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


