ದೇಶ

ಡೋಕ್ಲಾಮ್ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸಿಕ್ಕಿಂ ಗಡಿ ಸೇನೆಯ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಯತ್ನಿಸುತ್ತಿದ್ದು, ಡೋಕ್ಲಾಮ್ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ...

ಡೋಕ್ಲಾಮ್ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಬಿಪಿನ್ ರಾವತ್
Published On :
ಪುಣೆ: ಸಿಕ್ಕಿಂ ಗಡಿ ಸೇನೆಯ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಯತ್ನಿಸುತ್ತಿದ್ದು, ಡೋಕ್ಲಾಮ್ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಶನಿವಾರ ಹೇಳಿದ್ದಾರೆ. 
ಪುಣೆಯ ಸಾವಿತ್ರಿಭಾಯ್ ಫುಲೆ ವಿಶ್ವವಿದ್ಯಾನಿಲಯದ ರಕ್ಷಣಾ ಇಲಾಖೆ ಮತ್ತು ಜಿಯೋ-ಸ್ಟ್ರಾಟೆಜಿಕ್ ಸ್ಟಡೀಸ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿರುವ ರಾವತ್ ಅವರು, ಡೋಕ್ಲಾಮ್ ಬಿಕ್ಕಟ್ಟು ಬಿಗಡಾಯಿಸಲು ಚೀನಾ ಸೇನೆಯೇ ಕಾರಣ. ಸಿಕ್ಕಿಂ ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಯತ್ನ ನಡೆಸುತ್ತಿದ್ದು, ಡೋಕ್ಲಾಮ್ ಗಡಿ ವಿವಾದ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ವಿವಾದ ಭೂ ಪ್ರದೇಶದ ಹಕ್ಕು ಕುರಿತ ಹೋರಾಟ ಈಗಲೂ ಅಸ್ತಿತ್ವದಲ್ಲಿಯೇ ಇದ್ದು, ವಾಸ್ತವಿಕ ಗಡಿ ನಿಯಂತ್ರಣ ರೇಖೆ ಕುರಿತಂತೆ ಆಗಾಗ ತಪ್ಪುಗ್ರಹಿಕೆಗಳು ಉಂಟಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಜಂಟಿ ಕಾರ್ಯವಿಧಾನಗಳನ್ನು ಹೊಂದಿರುತ್ತೇವೆ. ಜೂ.16 ಡೋಕ್ಲಾಮ್ ಬಿಕ್ಕಟ್ಟು ಬಿಗಡಾಯಿಸುವುದಕ್ಕೂ ಮೊದಲೇ ಚೀನಾ ಅಧಿಕಾರಿಗಳೊಂದಿಗೆ ನಡೆಸಿದ್ದ ಧ್ವಜ ಸಭೆ ಸಂದರ್ಭದಲ್ಲಿ ಗಡಿಯಲ್ಲಿ ಎರಡೂ ಸೇನೆಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳಬೇಕೆಂದು ಭಾರತ ಒತ್ತಾಯಿಸಿತ್ತು. ಆದರೆ, ಈ ವರೆಗೂ ಈ ಬಗ್ಗೆ ಚೀನಾ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. 

ಪ್ರಸ್ತುತ ಎದುರಾಗಿರುವ ಬಿಕ್ಕಟ್ಟಿಗೆ ಚೀನಾ ಸೈನಿಕರೇ ಕಾರಣ. ಬಿಕ್ಕಟ್ಟು ಬಗೆಹರಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಿಲ್ಲ. ಬಿಕ್ಕಟ್ಟು ಪರಿಹಾರ ಚೀನಾಗೆ ಬೇಡವಾಗಿದೆ. ಭವಿಷ್ಯದಲ್ಲಿ ಡೋಕ್ಲಾಮ್ ವಿವಾದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ವಿವಾದ ಇದೀಗ ರಾಜತಾಂತ್ರಿಕ ಹಾಗೂ ರಾಜಕೀಯ ಮಟ್ಟಕ್ಕೆ ಹೋಗಿದೆ. ಹೀಗಾಗಿ ಸಮಸ್ಯೆಯನ್ನು ರಾಜತಾಂತ್ರಿಕ ಹಾಗೂ ರಾಜಕೀಯ ನೇತೃತ್ವದಲ್ಲಿಯೇ ಬಗೆಹರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ತನ್ನ ಸ್ವಾಯತ್ತ ಪ್ರದೇಶ ಟಿಬೆಟ್ ನಲ್ಲಿ ಚೀನಾ ಕಾರ್ಯಾಚರಣೆಗಳ ಸನ್ನದ್ಧತೆ ಹಾಗೂ ಹಲವಾರು ಸಿದ್ಧತೆಗಳನ್ನು ನಡೆಸುತ್ತಿದ್ದು, ಇದರಿಂದಾಗಿ ಚೀನೆಯ ಪ್ರಾಬಲ್ಯತೆ ಪ್ರಬಲಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಡೋಕ್ಲಾಮ್ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಸೇನಾ ಶಕ್ತಿ ಕಡಿಮೆ ಇರುವ ಪ್ರದೇಶಗಳಲ್ಲು ನುಸುಳಿ ದಾಳಿ ನಡೆಸಲು ಚೀನಾ ಪ್ರಯತ್ನಿಸುತ್ತಿದೆ. ಹೀಗಾಗಿ ಸೇನೆ ಯಾವಾಗಲೂ ಸನ್ನದ್ಧವಾಗಿರಬೇಕಿದೆ. 

ಗಡಿ ಬಿಕ್ಕಟ್ಟು ಬಗೆ ಹರಿದಿದೆ ಎಂದು ಸೇನೆ ಯಾವಾಗಲೂ ಭಾವಿಸಬಾರದು. ಮುಂದಿನ ದಿನಗಳಲ್ಲಿ  ಚೀನಾ ಸೇನಾ ಪಡೆಗಳ ಗಡಿ ನುಸುಳುವಿಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಯಾವ ಕಾರಣಕ್ಕೂ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದಿದ್ದಾರೆ. 

ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆ ವಾರ್ಷಿಕ ಸಮರಾಭ್ಯಾಸ ನಡೆಸುವುದು ಸಾಮಾನ್ಯವಾಗಿರುತ್ತದೆ. ಒಂದು ವರ್ಷ ಭಾರತೀಯ ಸೇನೆ ನಡೆಸಿದ್ದರೆ, ಮತ್ತೊಂದು ವರ್ಷ ಚೀನೀ ಸೇನೆನಡೆಸುತ್ತಿದೆ. ಆದರೆ, ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ಸಮರಾಭ್ಯಾಸ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಾರಿ ಚೀನಾ ಸೈನಿಕರು ಸಮರಾಭ್ಯಾಸ ನಡೆಸಬೇಕಿದೆ. ಉಭಯ ರಾಷ್ಟ್ರಗಳ ನಡುವೆ ಗಡಿ ಬಿಕ್ಕಟ್ಟು ಎದುರಾಗಿರುವುದರಿಂದ ಚೀನೀ ಸೇನೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಅವರು, ಜಿಹಾದಿಗಳ ಮೇಲೆ ಪಾಕಿಸ್ತಾನ ಅವಲಂಬನೆಗೊಂಡಿದ್ದು, ಜಿಹಾದಿಗಳಿಗೆ ಬೆಂಬಲ ನೀಡುತ್ತಿದೆ. ಇಸ್ಲಾಂ ಸಿದ್ಧಾಂತ ಹಾಗೂ ತನ್ನ ಮೂಲಭೂತವಾದವನ್ನು ಹರಡಲು ಪಾಕಿಸ್ತಾನ ಯತ್ನಿಸುತ್ತಿದ್ದು, ಇದು ಕೇವಲ ಭಾರತಕ್ಕಷ್ಟೇ ಅಲ್ಲದೆ, ಚೀನಾ ಸೇರಿದಂತೆ ದಕ್ಷಿಣ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳಿಗೂ ಬೆದರಿಕೆಯಾಗಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.