ಎಐಎಡಿಎಂಕೆ ವಿಲೀನಕ್ಕೆ ಶಶಿಕಲಾ ಬಣದ ಸಡ್ಡು: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ!
ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ವಿಲೀನವಾದ ಬೆನ್ನಲ್ಲೇ ಪಳನಿ ಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಶಶಿಕಲಾ ಬಣ ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಚೆನ್ನೈ: ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ವಿಲೀನವಾದ ಬೆನ್ನಲ್ಲೇ ಪಳನಿ ಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಶಶಿಕಲಾ ಬಣ ಹಿಂಪಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇಂದು ಬೆಳಗ್ಗೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿದ್ದ ಶಶಿಕಲಾ ಮತ್ತು ಟಿಟಿವಿ ದಿನಕರನ್ ಬಣದ 19 ಶಾಸಕರು ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ಮನವಿ ಪತ್ರ ಕೂಡ ನೀಡಿರುವ 19 ಶಾಸಕರು, ಸಿಎಂ ಪಳನಿ ಸ್ವಾಮಿ ಪಕ್ಷಪಾತ ಮಾಡುತ್ತಿದ್ದು, ಅವರ ವಿರುದ್ಧ ತಮಗೆ ವಿಶ್ವಾಸವಿಲ್ಲ, ಹೀಗಾಗಿ ತಾವು ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.
ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಬಳಿಕ 2 ಬಣಗಳಾಗಿ ಇಬ್ಭಾಗವಾಗಿದ್ದ ಎಐಎಡಿಎಂಕೆ ನಿನ್ನೆಯಷ್ಟೇ ವಿಲೀನವಾಗಿತ್ತು. ಶಶಿಕಲಾ ಬಣದಿಂದ ದೂರ ಸರಿದಿದ್ದ ಪನ್ನೀರ್ ಸೆಲ್ವಂ ಬಣ ಹಲವು ಷರತ್ತುಗಳ ಮೇರೆಗೆ ವಿಲೀನಕ್ಕೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ ನಿನ್ನೆಯಷ್ಟೇ ಪನ್ನೀರ್ ಸೆಲ್ವಂ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ತಾವೇ ಮುಖ್ಯಮಂತ್ರಿ ಮಾಡಿದ್ದ ಪಳನಿ ಸ್ವಾಮಿ ವಿರುದ್ಧವೇ ಶಶಿಕಲಾ ಬಣ ತಿರುಗಿಬಿದ್ದಿದ್ದು, ಅವಿಶ್ವಾಸ ನಿರ್ಣಯ ಮಂಡಿಸಿ ಬೆಂಬಲ ವಾಪಸ್ ಪಡೆದಿದೆ.
ಪಳನಿ ಸ್ವಾಮಿ ಸರ್ಕಾರಕ್ಕೆ ಧಕ್ಕೆ ಇಲ್ಲ
ತಮಿಳುನಾಡು ವಿಧಾನಸಭೆ ಒಟ್ಟು 235 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಅಗತ್ಯವಾಗಿದೆ. 2016 ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾ ರೂಢ ಎಐಎಡಿಎಂಕೆ ಒಟ್ಟು 135 ಸ್ಥಾನಗಳನ್ನು ಗೆದ್ದಿದೆ. ಇನ್ನು ಪ್ರಸ್ತುತ ಶಶಿಕಲಾ ಬಣದ 19 ಶಾಸಕರು ಸರ್ಕಾರ ನೀಡಿರುವ ಬೆಂಬಲ ವಾಪಸ್ ಪಡೆದರೂ ಕೂಡ ಪಳನಿ ಸ್ವಾಮಿ ಸರ್ಕಾರಕ್ಕೆ ಅಪಾಯವಿಲ್ಲ. ಟಿಟಿವಿ ದಿನಕರನ್ ಬಣದ ವಿರೋಧ ಹೊರತಾಗಿಯೂ ಪಳನಿ ಸ್ವಾಮಿ ಸರ್ಕಾರಕ್ಕೆ 116 ಶಾಸಕರ ಬೆಂಬಲವಿದ್ದು, ಇಬ್ಬರು ಪಕ್ಷೇತರ ಶಾಸಕರು ಅಥವಾ ಬಿಜೆಪಿ ಪಕ್ಷ ಬೆಂಬಲ ನೀಡಿದರೆ ಬಹುಮತ ಸಾಬೀತಾಗುತ್ತದೆ.
ಇದಕ್ಕೂ ಮೊದಲ ಇಂದು ಬೆಳಗ್ಗೆ ಚೆನ್ನೈನಲ್ಲಿರುವ ಟಿಟಿವಿ ದಿನಕರನ್ ನಿವಾಸದಲ್ಲಿ ಎಲ್ಲ 19 ಶಾಸಕರು ಸುಧೀರ್ಘ ಚರ್ಚೆ ನಡೆಸಿದರು. ಇದೇ ವೇಳೆ ಟಿಟಿವಿ ದಿನಕರನ್, ಎಐಎಡಿಎಂಕೆ ಸಂಸದ ವೈತಿಲಿಂಗಮ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ತಿಳಿದುಬಂದಿದೆ. ಪನ್ನೀರ್ ಸೆಲ್ವಂ ಬಣ ಹಾಗೂ ಪಳನಿ ಸ್ವಾಮಿ ಬಣ ವಿಲೀನವಾಗುತ್ತಿರುವ ಹೊತ್ತಿನಲ್ಲೇ ಸಂಸದ ವೈಥಿಲಿಂಗಮ್ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುತ್ತದೆ ಎಂದು ಹೇಳಿಕೆ ನೀಡಿ ಟಿಟಿವಿ ದಿನಕರನ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ದಿನಕರನ್ ಆದೇಶಕ್ಕೆ ಮಾನ್ಯತೆ ಇಲ್ಲ
ಇನ್ನು ಸಂಸದ ವೈಥಿಲಿಂಗಮ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಹಕ್ಕು ದಿನಕರನ್ ಅವರಿಗೆ ಇಲ್ಲ. ದಿನಕರನ್ ಅವರನ್ನು ಈಗಾಗಲೇ ಪಕ್ಷಗ ಉಪ ಕಾರ್ಯದರ್ಶಿ ಹುದ್ದೆಯಿಂದ ಮಾತ್ರವಲ್ಲ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಹೀಗಾಗಿ ಅವರ ಆದೇಶಕ್ಕೆ ಮಾನ್ಯತೆ ಇಲ್ಲ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


