ಯೋಗಿ ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕಾ ಪ್ರಹಾರ, ದುರಂತ ರಾಜಕೀಯಗೊಳಿಸದಂತೆ ಬಿಜೆಪಿ ಮನವಿ
ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ದುರಂತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಆಡಳಿತಾ ರೂಢ ಬಿಜೆಪಿ ಸರ್ಕಾರ ವಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಸರ್ಕಾರದ ನಿರ್ಲಕ್ಷ್ಯದ ಧೋರಣೆಯೇ ಮಕ್ಕಳ ಸಾವಿಗೆ ಕಾರಣ ಎಂದು ವಿಪಕ್ಷಗಳು ಜರಿದಿವೆ.

ಲಖನೌ: ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ದುರಂತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಆಡಳಿತಾ ರೂಢ ಬಿಜೆಪಿ ಸರ್ಕಾರ ವಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಸರ್ಕಾರದ ನಿರ್ಲಕ್ಷ್ಯದ ಧೋರಣೆಯೇ ಮಕ್ಕಳ ಸಾವಿಗೆ ಕಾರಣ ಎಂದು ವಿಪಕ್ಷಗಳು ಜರಿದಿವೆ.
ಈ ಬಗ್ಗೆ ಟ್ವಿಟರ್ ನಲ್ಲಿ ಯೋಗಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು, ಮಕ್ಕಳ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಬಂದಿದ್ದ ಪೋಷಕರು ತಮ್ಮ ಮಕ್ಕಳ ಶವದೊಂದಿಗೆ ಮನೆಗೆ ಮರಳುತ್ತಿದ್ದಾರೆ. ದುರಂತವೆಂದರೆ ಸಾವಿಗೀಡಾದ ಮಕ್ಕಳ ಮರಣೋತ್ತರ ಪರೀಕ್ಷೆಯನ್ನೂ ಕೂಡ ಮಾಡದೇ ಮೃತದೇಹಗಳನ್ನು ಮನೆಗೆ ಕಳುಹಿಸಲಾಗುತ್ತಿದೆ. ಇದು ಯೋಗಿ ಸರ್ಕಾರದ ಆಡಳಿತ ವೈಫಲ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ದುರಂತದ ಹಿಂದೆ ಯಾರದೇ ಕೈವಾಡವಿದ್ದರೂ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲೇಶ್ ಆಗ್ರಹಿಸಿದ್ದಾರೆ.
ಇದೇ ವೇಳೆ ದುರಂತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೂ ಕೂಡ ಆಘಾತ ವ್ಯಕ್ತಪಡಿಸಿದ್ದು, ರೋಗಿಗಳ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಲವರ ನಿರ್ಲಕ್ಷ್ಯದಿಂದಾಗಿ ಅಮಾಯಕ ಮಕ್ಕಳು ಸಾವಿಗೀಡಾಗಿದ್ದು, ಯುಪಿ ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕು. ಅಂತೆಯೇ ಸಂತ್ರಸ್ತರ ಪರವಾಗಿ ನಿಲ್ಲಬೇಕು ಎಂದು ಸೋನಿಯಾ ಹೇಳಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಕ್ಕಳ ಸಾವು ನೋವುತಂದಿದೆ. ಸಂತ್ರಸ್ತ ಕುಟುಂಬಗಳೊಂದಿಗೆ ನಾವಿದ್ದು, ಅಮಾಯಕ ಮಕ್ಕಳ ಸಾವಿಗೆ ಬಿಜೆಪಿ ಸರ್ಕಾರವೇ ಕಾರಣ. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿ,ಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದುರಂತ ರಾಜಕೀಯಗೊಳಿಸದಂತೆ ಬಿಜೆಪಿ ಮನವಿ
ಏತನ್ಮಧ್ಯೆ ದುರಂತಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಅವರು ಮಾತನಾಡಿ ದುರಂತ ರಾಜಕೀಯಗೊಳಿಸುವುದು ಬೇಡ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯಾನಾಥ್ ಸೇರಿದಂತೆ ನಾವೂ ಕೂಡ ಖುದ್ಧು ಮೇಲ್ವಿಚಾರಣೆ ನಡೆಸಿದ್ದೇವೆ. ಮಕ್ಕಳ ಸಾವು ಏರಿಕೆಯಾಗದಂತೆ ತಡೆಯಲು ಕೈಗೊಳ್ಳಬೇಕಾದ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಸ್ವತಃ ಗೋರಕ್ ಪುರಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


