ಶಶಿಕಲಾ ಬಣಕ್ಕೆ ಚಿಹ್ನೆ ನೀಡಲು ಚುನಾವಣಾ ಆಯೋಗಕ್ಕೆ ಲಂಚ ಆರೋಪ; ಟಿಟಿವಿ ದಿನಕರನ್ ವಿರುದ್ಧ ಎಫ್ ಐಆರ್!
ಮಹತ್ವದ ಬೆಳವಣಿಗೆಯೊಂದರಲ್ಲಿ ತಮ್ಮ ಬಣಕ್ಕೇ ಎಐಎಡಿಎಂಕೆ ಪಕ್ಷ ಚಿನ್ಹೆ ಎರಡು ಎಲೆಗಳ ಗುರುತನ್ನು ನೀಡಬೇಕು ಎಂದು ಹೇಳಿ ಟಿಟಿವಿ ದಿನಕರನ್ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇರೆಗೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ತಮ್ಮ ಬಣಕ್ಕೇ ಎಐಎಡಿಎಂಕೆ ಪಕ್ಷ ಚಿನ್ಹೆ ಎರಡು ಎಲೆಗಳ ಗುರುತನ್ನು ನೀಡಬೇಕು ಎಂದು ಹೇಳಿ ಟಿಟಿವಿ ದಿನಕರನ್ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇರೆಗೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಎಐಎಡಿಎಂಕೆ ಪಕ್ಷ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಚೆನ್ನೈನ ವಿವಿಧೆಡೆ ದಾಳಿ ಮಾಡಿದ್ದ ಅಧಿಕಾರಿಗಳು ಅಪಾರ ಪ್ರಮಾಣದ ಹಣವನ್ನು ಜಪ್ತಿ ಮಾಡಿದ್ದರು. ಈ ವೇಳೆ ಚುನಾವಣಾ ಆಯೋಗದ ಮಧ್ಯವರ್ತಿ ಎಂದು ಹೇಳಲಾಗುತ್ತಿರುವ ಸುಖೇಶ್ ಚಂದ್ರಶೇಖರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಆತ ಶಶಿಕಲಾ ಬಣದಿಂದ ಲಂಚ ಪಡೆದಿರುವುದಾಗಿ ಹೇಳಿಕೆ ನೀಡಿದ್ದ. ಈ ಸಂಬಂಧ ಇದೀಗ ಶಶಿಕಲಾ ಬಣದ ಟಿಟಿವಿ ದಿನಕರನ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಶಶಿಕಲಾ ಬಣ ಹಾಗೂ ಪನ್ನೀರೆ ಸೆಲ್ವಂ ಬಣ ಎಐಎಡಿಎಂಕೆ ಪಕ್ಷದ ಗುರುತು ಎರಡು ಎಲೆಗಾಗಿ ಬಿಗಿ ಪಟ್ಟು ಹಿಡಿದಿದ್ದು, ಯಾವ ಬಣಕ್ಕೆ ಚಿನ್ಹೆ ನೀಡಬೇಕು ಎಂದು ಚುನಾವಣಾ ಆಯೋಗ ನಿರ್ಧರಿಸಲಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಆಯೋಗ ಸಭೆ ನಗದಿ ಪಡಿಸಿರುವಂತೆಯೇ ಮಧ್ಯವರ್ತಿ ಸುಖೇಶ್ ಬಂಧನವಾಗಿದ್ದು, ಪ್ರಕರಣ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಇದೇ ಲಂಚದ ಆರೋಪ ಕಾರಣದಿಂದಾಗಿ ಈ ಹಿಂದೆ ನಿಗದಿಯಾಗಿದ್ದ ಜಯಲಲಿತಾ ಅವರ ಸ್ವಕ್ಷೇತ್ರ ಆರ್ ಕೆ ನಗರ ಉಪ ಚುನಾವಣೆ ಮುಂದೂಡಲಾಗಿದ್ದು. ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಅಪಾರ ಪ್ರಮಾಣದ ಹಣ ಹಂಚಲಾಗಿತ್ತು. ಇದಕ್ಕೆ ಇಂಬು ನೀಡುವಂತೆ ವಿವಿಧೆಡೆ ದಾಳಿ ನಡೆಸಿದ್ದ ಅಧಿಕಾರಿಗಳು ಅಪಾರ ಪ್ರಮಾಣದ ಹಣ ಜಪ್ತಿ ಮಾಡಿದ್ದರು.ಟ
ಆರೋಪ ನಿರಾಕರಿಸಿದ ದಿನಕರನ್!
ಇನ್ನು ಚಿನ್ಹೆ ಪಡೆಯಲು ಆಯೋಗಕ್ಕೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಟಿಟಿವಿ ದಿನಕರನ್ ತಳ್ಳಿ ಹಾಕಿದ್ದಾರೆ. ಪ್ರಕರಣದಲ್ಲಿ ಸುಖಾಸುಮ್ಮನೆ ತಮ್ಮ ಹೆಸರನ್ನು ತಳುಕು ಹಾಕಲಾಗುತ್ತಿದ್ದು, ನಾನು ಸುಖೇಶ್ ಎಂಬುವವರೊಂದಿಗೆ ಮಾತನಾಡಿಲ್ಲ. ಇವೆಲ್ಲ ಸತ್ಯಕ್ಕೆ ದೂರವಾದ ಮಾತು. ಪ್ರಕರಣ ಸಂಬಂಧ ನನ್ನ ವಕೀಲರೊಂದಿಗೆ ಮಾತ್ರ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


