ದೇಶ

ಬನ್ಸಾಲ್ ಆತ್ಮಹತ್ಯೆ ಪ್ರಕರಣ: ಸಿಬಿಐ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಡಿಸಿಡಬ್ಲ್ಯೂ

ಕಾರ್ಪೊರೇಟ್‌ ವ್ಯವಹಾರಗಳ ಮಾಜಿ ಮಹಾ ನಿರ್ದೇಶಕ ಬಿ.ಕೆ.ಬನ್ಸಾಲ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್...

ಬನ್ಸಾಲ್ ಆತ್ಮಹತ್ಯೆ ಪ್ರಕರಣ: ಸಿಬಿಐ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಡಿಸಿಡಬ್ಲ್ಯೂ
ಬಿ.ಕೆ.ಬನ್ಸಾಲ್‌
Published On :

ನವದೆಹಲಿ: ಕಾರ್ಪೊರೇಟ್‌ ವ್ಯವಹಾರಗಳ ಮಾಜಿ ಮಹಾ ನಿರ್ದೇಶಕ ಬಿ.ಕೆ.ಬನ್ಸಾಲ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಮಾಡಿರುವುದಾಗಿ ಗುರುವಾರ ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಅವರು, ಬನ್ಸಾಲ್ ಅವರು ಭ್ರಷ್ಟರಾಗಿದ್ದರೋ ಇಲ್ಲವೋ ಎಂಬುದರ ಬಗ್ಗೆ ನಾವು ಮಾತನಾಡುತ್ತಿಲ್ಲ. ಆದರೆ, ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಬೇಸರವನ್ನುಂಟು ಮಾಡಿದೆ. ಹೀಗಾಗಿ ಸಿಬಿಐ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ನೋಟಿಸ್ ನಲ್ಲಿ ತಪ್ಪಿತಸ್ಥ ಸಿಬಿಐ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೀರೋ, ಇಲ್ಲವೋ ಎಂಬುದರ ಸ್ಪಷ್ಟತೆಯನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.

ಬನ್ಸಾಲ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಡೆತ್ ನೋಟ್ ನ್ನು ಬರೆದಿದ್ದು, ಪ್ರಕರಣ ಸಂಬಂಧ ಸ್ವತಂತ್ರವಾಗಿ ನಡೆಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಾಗಿದ್ದ ಬನ್ಸಾಲ್ ಅವರು ಔಷಧ ಕಂಪನಿಯೊಂದರಿಂದ ರು.90 ಲಕ್ಷ ಹಣವನ್ನು ಲಂಚ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಜುಲೈ 16 ರಂದು ಬಂಧನಕ್ಕೊಳಪಡಿಸಿದ್ದರು. ಬನ್ಸಾಲ್ ಅವರ ಮನೆಯ ಮೇಲೆ ದಾಳಿ ಮಾಡಿದ್ದ ಸಿಬಿಐ ಅಧಿಕಾರಿಗಳು, ಮನೆಯಲ್ಲಿದ್ದ ರು.60 ಲಕ್ಷ ನಗದು ಹಾಗೂ 20 ಆಸ್ಪಿಪಾಸ್ತಿಗಳ ದಾಖಲೆ ಪತ್ರಗಳು, 60 ಬ್ಯಾಂಕ್ ಖಾತೆ ಪುಸ್ಕತಗಳನ್ನು ವಶಕ್ಕೆ ಪಡೆದಿತ್ತು.

ಬನ್ಸಾಲ್ ಅವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲೇ ಅವರ ಪತ್ನಿ ಸತ್ಯಬಾಲಾ ಅವರು ಮಗಳು ನೇಹಾ ಜೊತೆಗೆ ಪೂರ್ವ ದೆಹಲಿಯ ನೀಲಕಂಠ ಅಪಾರ್ಟ್ ಮೆಂಟ್ ವೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಇದರಂತೆ ಕಳೆದ ಮಂಗಳವಾರ ಬನ್ಸಾಲ್ ಅವರೂ ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಡೆತ್ ನೋಟ್ ಬರೆದಿಟ್ಟು ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದರು.

ಬನ್ಸಾಲ್ ಅವರು ಬರೆದಿಟ್ಟ ಡೆತ್ ನೋಟ್ ನಲ್ಲಿದ್ದ ಸತ್ಯಗಳು ನಿನ್ನೆಯಷ್ಟೇ ಬಹಿರಂಗಗೊಂಡಿದ್ದವು. ಸಿಬಿಐ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳವೇ ಕುಟುಂಬದೊಂದಿಗೆ ಆತ್ಮಹತ್ಯೆಗೆ ಶರಣಾಗಲು ಕಾರಣ ಎಂದು ಬನ್ಸಾಲ್ ಅವರು ಹೇಳಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತು.

ಜೈಲಿನಲ್ಲಿದ್ದಾಗ ಸಿಬಿಐನ ಇಬ್ಬರು ಮಹಿಳಾ ಅಧಿಕಾರಿಗಳು ನನ್ನ ಪತ್ನಿ ಹಾಗೂ ಮಗಳ ಕೆನ್ನೆಗೆ ಹೊಡೆದಿದ್ದರು. ನಿನ್ನ ಪತಿ ಹಾಗೂ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ನಾಯಿಗಳಿಗೆ ತಿನ್ನಿಸುತ್ತೇವೆಂದು ಹೇಳಿದ್ದರು. ನನ್ನ ಪತ್ನಿಗೆ ಕಿರುಕುಳ ನೀಡಬೇಡಿ ಎಂದು ಹಿರಿಯ ಅಧಿಕಾರಿಗೆ ಮನವಿ ಮಾಡಿದೆ. ಈ ವೇಳೆ ಕಿರುಕುಳ ನೀಡದಿದ್ದರೆ, ನಾನು ಅಧಿಕಾರಿಯಾಗಲು ಸಾಧ್ಯವಿಲ್ಲ. ನಾನು ಆಡಳಿತಾರೂಢ ಪಕ್ಷದ ರಾಜಕೀಯ ಗಣ್ಯರೊಂದಿಗೆ ಸಂಪರ್ಕವನ್ನು ಹೊಂದಿದ್ದು, ಏನನ್ನು ಬೇಕಾದರೂ ಮಾಡಬಲ್ಲೆ ಎಂದು ಬೆದರಿಕೆ ಹಾಕಿದರು ಎಂದು ಬನ್ಸಾಲ್ ಡೆತ್ ನೋಟ್ ನಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಮೂವರು ಅಧಿಕಾರಿಗಳ ಹೆಸರನ್ನೂ ಸೂಚಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.