ಉರಿ ಸೆಕ್ಟರ್ ನಲ್ಲಿ ಪಾಕ್ ನಲ್ಲಿ ತಯಾರಾದ ಔಷಧಿಗಳ ಪತ್ತೆ: ಎನ್ ಐಎ ಅಧಿಕಾರಿಗಳ ತನಿಖೆ ತೀವ್ರ
18 ಸೈನಿಕರ ಸಾವಿಗೆ ಕಾರಣರಾಗಿದ್ದ ಉರಿ ದಾಳಿಕೋರ ಉಗ್ರರ ಬಳಿ ಪಾಕಿಸ್ತಾನ ನಿರ್ಮಿತ ಔಷಧಿಗಳು ಪತ್ತೆಯಾಗಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.

ಶ್ರೀನಗರ: 18 ಸೈನಿಕರ ಸಾವಿಗೆ ಕಾರಣರಾಗಿದ್ದ ಉರಿ ದಾಳಿಕೋರ ಉಗ್ರರ ಬಳಿ ಪಾಕಿಸ್ತಾನ ನಿರ್ಮಿತ ಔಷಧಿಗಳು ಪತ್ತೆಯಾಗಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.
ಭಾನುವಾರ ಮುಂಜಾನೆ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ದಾಳಿ ನಡೆದ ಉರಿ ಸೆಕ್ಟರ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಪತ್ತೆಯಾದ ಕೆಲ ಔಷಧಿಗಳು, ಹಸಿವಾದಾಗ ತಿನ್ನಲು ಉಗ್ರರು ತಂದಿದ್ದ ಹೈಪ್ರೊಟೀನ್ ಚಾಕಲೇಟ್ ಗಳು, ಸುಸ್ತಾದಾಗ ಸೇವಿಸಲು ತಂದಿದ್ದ ಒಆರ್ ಎಸ್ ಪ್ಯಾಕೆಟ್ ಗಳು ಪತ್ತೆಯಾಗಿದ್ದು, ಈ ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸೈನಿಕರಂತೆ ಕಾಣಲು ಗಡ್ಡ ಶೇವ್ ಮಾಡಿ, ಸೈನಿಕ ಸಮವಸ್ತ್ರ ಧರಿಸಿದ್ದ ಉಗ್ರರು
ಮತ್ತೊಂದು ಪ್ರಮುಖ ವಿಚಾರವೆಂದರೆ ದಾಳಿ ಮಾಡಲು ಆಗಮಿಸಿದ್ದ ಎಲ್ಲ ಉಗ್ರರು 20 ವರ್ಷದ ಆಸುಪಾಸಿನ ಯುವಕರಾಗಿದ್ದು, ಭಾರತೀಯ ಸೈನಿಕರಿಗೆ ಅನುಮಾನ ಬಾರದಿರಲಿ ಎಂದು ಸೇನಾಸಮವಸ್ತ್ರ ಧರಿಸಿದ್ದರಂತೆ. ಥೇಟ್ ಸೈನಿಕರಂತೆ ಕಾಣಲು ಮೂವರು ಉಗ್ರರು ತಮ್ಮ ಗಡ್ಡವನ್ನು ಶೇವ್ ಮಾಡಿದ್ದರು ಎಂಬ ವಿಚಾರವನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ನಿರ್ಮಿತ ಜಿಪಿಎಸ್ ಸೆಟ್ ವಶ, ತಪಾಸಣೆಗಾಗಿ ಅಮೆರಿಕಕ್ಕೆ ರವಾನೆ
ಇದೇ ವೇಳೆ ಘಟನಾ ಸ್ಥಳದಲ್ಲಿ ಉಗ್ರರು ಬಳಕೆ ಮಾಡಿದ್ದ ಜಿಪಿಎಸ್ ಸೆಟ್ ದೊರೆತಿದ್ದು, ಇದನ್ನು ಪರಿಶೀಲಿಸಿದಾಗ ಇದರ ಲೊಕೇಶನ್ ಪಾಕ್ ಆಕ್ರಮಿತ ಕಾಶ್ಮೀರದ ರಷಿಯಾಬಾದ್- ಮುಷಿರಾಬಾದ್ ಎಂದು ತೋರಿಸುತ್ತಿದೆ. ಹೀಗಾಗಿ ಇದರ ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಜಿಪಿಎಸ್ ಸೆಟ್ ಅನ್ನು ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಗೆ ಆಶ್ರಯ ನೀಡಿದ ಕುರಿಗಾಹಿಗಳ ತೀವ್ರ ವಿಚಾರಣೆ
ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಆರು ಮಂದಿ ಎನ್ ಐಎ ಅಧಿಕಾರಿಗಳ ತಂಡ ಉರಿ ಸೆಕ್ಟರ್ ನಲ್ಲಿದ್ದ ಮೂವರು ಕುರಿಗಾಹಿಗಳನ್ನು ವಶಕ್ಕೆ ಪಡೆದಿದ್ದು, ಉಗ್ರರಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರರು ದಾಳಿ ನಡೆಸುವ ಮುನ್ನ ಇದೇ ಕುರಿಗಾಹಿಗಳಿಂದ ನೆರವು ಪಡೆದಿದ್ದರು ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


