"ಎಂಬ್ರೇಯರ್" ಹಗರಣ: ರಕ್ಷಣಾ ಇಲಾಖೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಆರಂಭ
ಬಹುಕೋಟಿ ಎಂಬ್ರೇಯರ್ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತನಿಖೆ ಆರಂಭಿಸಿರುವ ಕೇಂದ್ರೀಯ ಅಪರಾಧ ದಳ(ಸಿಬಿಐ)ದ ಅಧಿಕಾರಿಗಳು ಹಗರಣದಲ್ಲಿ ಕಿಕ್ ಪಡೆದ ಆರೋಪದ ಮೇರೆಗೆ ರಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ನವದೆಹಲಿ: ಬಹುಕೋಟಿ ಎಂಬ್ರೇಯರ್ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತನಿಖೆ ಆರಂಭಿಸಿರುವ ಕೇಂದ್ರೀಯ ಅಪರಾಧ ದಳ(ಸಿಬಿಐ)ದ ಅಧಿಕಾರಿಗಳು ಹಗರಣದಲ್ಲಿ ಕಿಕ್ ಪಡೆದ ಆರೋಪದ ಮೇರೆಗೆ ರಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2008ರಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಬಹುಕೋಟಿ ವಿಮಾನ ಖರೀದಿ ಹಗರಣವನ್ನು ಶನಿವಾರ ಅಧಿಕೃತವಾಗಿ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು, ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಎಂಬ್ರೇಯರ್ ವಿಮಾನ ಖರೀದಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಕೂಡ ಭಾಗಿಯಾಗಿದ್ದು, ತಾನು ಸಂಶೋಧಿಸಿದ್ದ ರಾಡಾರ್ ಗಳನ್ನು ಈ ವಿಮಾನಗಳಿಗೆ ಅಳವಡಿಸಲು ಡಿಆರ್ ಡಿಒ ಮುಂದಾಗಿತ್ತು. ಹೀಗಾಗಿ ಡಿಆರ್ ಡಿಒ ಅಧಿಕಾರಿಗಳನ್ನು ಕೂಡ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ವಿಮಾನ ಖರೀದಿಯಲ್ಲಿ ನೇರ ಮತ್ತು ಪರೋಕ್ಷವಾಗಿ ಸಂಬಂಧ ಹೊಂದಿರುವ ಸಂಸ್ಥೆಯ ಷೇರುದಾರರು, ಕಚ್ಛಾ ಸಾಮಗ್ರಿ ವಿತರಕರ ಮೇಲೂ ಸಿಬಿಐ ನಿಗಾ ವಹಿಸಿದ್ದು, ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಂಗ್ರಹಕ್ಕೆ ಸಿಬಿಐ ಮುಂದಾಗಿದೆ. ಸಿಬಿಐ ಮೂಲಗಳ ಪ್ರಕಾರ ಪ್ರಸ್ತುತ ಅಧಿಕಾರಿಗಳು ಹಗರಣ ಸಂಬಂಧ ಅಧಿಕೃತವಾಗಿ ತನಿಖೆ ಆರಂಭಿಸಿದ್ದರೂ, ಇದೂ ಕೇವಲ ಪ್ರಾಥಮಿಕ ತನಿಖೆಯಾಗಿದೆ. ಹೀಗಾಗಿ ಈ ಹಂತದಲ್ಲಿ ಯಾವುದೇ ರೀತಿಯ ದಾಳಿಯಾಗಲಿ ಅಥವಾ ಅಧಿಕಾರಿಗಳಿಂದ ಹೇಳಿಕೆ ಪಡೆಯುವುದನ್ನು ಅಧಿಕಾರಿಗಳು ಮಾಡುವುದಿಲ್ಲ. ಕೇವಲ ಹಗರಣ ಸಂಬಂಧ ದತ್ತಾಂಶಗಳನ್ನು ಮಾತ್ರ ಕಲೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.
ಡಿಆರ್ ಡಿಒ ವಿಜ್ಞಾನಿಗಳು ಸಂಶೋಧಿಸಿದ್ದ ನೂತನ ರಾಡಾರ್ ಗಳನ್ನು ವಿಮಾನಕ್ಕೆ ಅಳವಡಿಸುವ ಸಲುವಾಗಿ 2008ರಲ್ಲಿ ಭಾರತ ಬ್ರೆಜಿಲ್ ಮೂಲದ ಎಂಬ್ರೇಯರ್ ವಿಮಾನ ತಯಾರಿಕಾ ಸಂಸ್ಥೆಯಿಂದ 208 ಮಿಲಿಯನ್ ಡಾಲರ್ ಮೊತ್ತದಲ್ಲಿ ವಿಮಾನಗಳನ್ನು ಖರೀದಿಸಿತ್ತು. ಈ ಒಪ್ಪಂದವನ್ನು ಕುದುರಿಸಲು ಭಾರತ ಮೂಲದ ಬ್ರಿಟನ್ ಪ್ರಜೆ ಭಾರಿ ಪ್ರಮಾಣದಲ್ಲಿ ಎಂಬ್ರೇಯರ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆದಿದ್ದ ಎಂದು ಬ್ರೆಜಿಲ್ ನ ಖ್ಯಾತ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬ್ರೆಜಿಲ್ ಮೂಲದ ಎಂಬ್ರೇಯರ್ ಸಂಸ್ಥೆಯಿಂದ ಸ್ಪಷ್ಟನೆ ಕೇಳಿದ್ದರು. ಅಲ್ಲದೆ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐ ಸಂಸ್ಥೆಯನ್ನೂ ಕೇಳಿದ್ದರು.
ಇದೀಗ ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


