ಎಂಬ್ರೇಯರ್ ಖರೀದಿಯಲ್ಲಿ ಭಾರತ ಮೂಲದ ಬ್ರಿಟನ್ ಮಧ್ಯವರ್ತಿಯ ಕೈವಾಡ?
ಬ್ರೆಜಿಲ್ ನಿಂದ ಭಾರತ ಖರೀದಿಸಿದ್ದ ಎಂಬ್ರೇಯರ್ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ.

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಅಕ್ರಮ ಬಯಲಿಗೆ ಬಂದ ಬಳಿಕ ಅಂತಹುದೇ ಮತ್ತೊಂದು ಹಗರಣ ರಕ್ಷಣಾ ಇಲಾಖೆಯಲ್ಲಿ ಮಾರ್ಧನಿಸುತ್ತಿದ್ದು, ಬ್ರೆಜಿಲ್ ನಿಂದ ಭಾರತ ಖರೀದಿಸಿದ್ದ ಎಂಬ್ರೇಯರ್ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಆರೋಪಗಳ ಕುರಿತಂತೆ ಬ್ರೆಜಿಲ್ ಮೂಲದ ಎಂಬ್ರೇಯರ್ ವಿಮಾನ ತಯಾರಿಕಾ ಸಂಸ್ಥೆಯಿಂದ ವರದಿ ಕೇಳಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಆಡಳಿತಾವಧಿಯಲ್ಲಿ 2008ರಲ್ಲಿ ಸುಮಾರು 208 ಮಿಲಿಯನ್ ಡಾಲರ್ ಮೊತ್ತದ ಈ ವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಹಗರಣದಲ್ಲಿ ಭಾರತ ಮೂಲದ ಬ್ರಿಟನ್ ಮಧ್ಯವರ್ತಿಯ ಕೈವಾಡದ ಕುರಿತು ಶಂಕೆ ವ್ಯಕ್ತವಲಾಗುತ್ತಿದ್ದು, ಬ್ರೆಜಿಲ್ ಮೂಲದ ಎಂಬ್ರೇಯರ್ ಸಂಸ್ಥೆಗೆ ಒಪ್ಪಂದವಹಿಸಲು ನೂರಾರು ಕೋಟಿ ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಹಗರಣವನ್ನು ಸಿಬಿಐ ತನಿಖೆಗೆ ನೀಡಲು ರಕ್ಷಣಾ ಇಲಾಖೆ ಮುಂದಾಗಿದೆ. ಈ ಕುರಿತು ಸಿಬಿಐ ಅಧಿಕಾರಿಗಳನ್ನು ರಕ್ಷಣಾ ಇಲಾಖೆ ಸಂಪರ್ಕಿಸಿದ್ದು, ಶೀಘ್ರದಲ್ಲಿಯೇ ಹಗರಣದ ತನಿಖೆ ಕುರಿತು ಸಿಬಿಐ ತನ್ನ ನಿರ್ಧಾರ ಪ್ರಕಟಿಸಲಿದೆ.
ವಾಯುಪಡೆಗೆ ಪೂರೈಸುವ ಸಲುವಾಗಿ ಮೂರು ವಿಮಾನಗಳನ್ನು 208 ಮಿಲಿಯನ್ ಡಾಲರ್ ವೆಚ್ಚದಲ್ಲಿ ಖರೀದಿಸುವ ಸಂಬಂಧ ಬ್ರೆಜಿಲ್‌ನ ಎಂಬ್ರೇಯರ್ ಕಂಪನಿ ಜತೆ 2008ರಲ್ಲಿ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಒಪ್ಪಂದ ಮಾಡಿಕೊಂಡಿತ್ತು. ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದ ರಾಡಾರ್‌ಗಳನ್ನು ಈ ವಿಮಾನಗಳಿಗೆ ಅಳವಡಿಸಿ, ಹಾರಾಡುತ್ತಲೇ ಮುನ್ಸೂಚನೆ ಪಡೆವ ವಿಮಾನ ಹೊಂದುವ ಯೋಜನೆ ಭಾರತದ್ದಾಗಿತ್ತು. ಈಗಾಗಲೇ ಎಂಬ್ರೇಯರ್ ಕಂಪನಿ ಭಾರತ ಹಾಗೂ ಸೌದಿ ಅರೇಬಿಯಾಕ್ಕೆ ವಿಮಾನಗಳನ್ನು ಪೂರೈಸಿದ್ದು, ಆ ವ್ಯವಹಾರ ಕುದುರಿಸಲು ಕಂಪನಿ ದಲ್ಲಾಳಿಯೊಬ್ಬನಿಗೆ ಲಂಚ ನೀಡಿದೆ ಎಂಬ ಆರೋಪ ವ್ಯಕ್ತವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


