ದೇಶ

ಕಾಶ್ಮೀರವನ್ನು ಹೊತ್ತಿ ಉರಿಸುತ್ತಿರುವ ವನಿಯ ಉಗ್ರಕಥೆ ತಲೆತಗ್ಗಿಸುವಂತಿದೆ ಮತ್ತೊಬ್ಬ ವನಿಯ ಯಶೋಗಾಥೆ!

ಕಾಶ್ಮೀರದ ಯುವಕರಿಗೆ ಸ್ಫೂರ್ತಿಯಾಗಬಲ್ಲ ಉದಾಹರಣೆಯೊಂದಿದೆ. ಇದು ಕಾಶ್ಮೀರದ ಯುವಕರ ಮತ್ತೊಂದು ಮುಖವನ್ನು ಅನಾವರಣಗೊಳಿಸುವಂತಹ ಉದಾಹರಣೆಯೂ ಹೌದು.

ಕಾಶ್ಮೀರವನ್ನು ಹೊತ್ತಿ ಉರಿಸುತ್ತಿರುವ ವನಿಯ ಉಗ್ರಕಥೆ ತಲೆತಗ್ಗಿಸುವಂತಿದೆ ಮತ್ತೊಬ್ಬ ವನಿಯ ಯಶೋಗಾಥೆ!
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನಬೀಲ್ ಅಹ್ಮದ್ ವನಿ
Published On :

ನವದೆಹಲಿ: ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ವನಿಯ ಹತ್ಯೆ ಇಡೀ ಕಾಶ್ಮೀರವನ್ನು ಗಲಭೆ ಪರಿಸ್ಥಿತಿಗೆ ದೂಡಿದ್ದರೆ, ಇತ್ತ ಕಾಶ್ಮೀರದ ಯುವಕರಿಗೆ ಸ್ಫೂರ್ತಿಯಾಗಬಲ್ಲ ಉದಾಹರಣೆಯೊಂದಿದೆ. ಇದು ಕಾಶ್ಮೀರದ ಯುವಕರ ಮತ್ತೊಂದು ಮುಖವನ್ನು ಅನಾವರಣಗೊಳಿಸುವಂತಹ ಉದಾಹರಣೆಯೂ ಹೌದು.

ಆತನ ಹೆಸರು ನಬೀಲ್ ಅಹ್ಮದ್ ವನಿ, 26 ವರ್ಷದ ಈ ಯುವಕ ಬಿಎಸ್ ಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ್ದು, ಸೇನೆ ಸೇರಲು ಸಿದ್ಧವಾಗಿದ್ದಾರೆ. ಬಿಎಸ್ ಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿರುವ ನಬೀಲ್ ಅಹ್ಮದ್ ವನಿ ಅವರನ್ನು ಬಿಎಸ್ ಎಫ್ ನ ನಿರ್ದೇಶಕ ಕೆಕೆ ಶರ್ಮಾ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪರಿಚಯ ಮಾಡಿಸಿದ್ದು, ರಾಜನಾಥ್ ಸಿಂಗ್ ಅವರು ತಮ್ಮೊಂದಿಗೆ ಕಾಶ್ಮೀರಕ್ಕೆ ಆಗಮಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರಿಗೂ ಪರಿಚಯ ಮಾಡಿಸಿದ್ದು, ಗರಿಷ್ಠ ಅಂಕ ಗಳಿಸಿದ್ದಕ್ಕೆ ಅಭಿನಂದಿಸಿದ್ದಾರೆ. ನಬೀಲ್ ಅಹ್ಮದ್ ವನಿ ಯಶಸ್ಸು ರಾಜ್ಯದ ಯುವಕರಿಗೆ ಸ್ಫೂರ್ತಿದಾಯಕ ಎಂದು ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜನಾಥ್ ಸಿಂಗ್ ಅವರೊಂದಿಗಿನ ಭೇಟಿಯಲ್ಲಿ ಕಾಶ್ಮೀರದ ವಿಷಯವಾಗಿ ಮಾತನಾಡಿರುವ ನಬೀಲ್ ಅಹ್ಮದ್ ವನಿ, ಕಾಶ್ಮೀರ ಯುವಕರನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಇದನ್ನು ಶಿಕ್ಷಣದ ಮೂಲಕವಷ್ಟೇ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ಉಧಂಪುರ್ ಮೂಲದ ನಬೀಲ್ ಅಹ್ಮದ್ ವನಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸೇನೆ ಸೇರಿ ದೇಶ ಸೇವೆ ಮಾಡುವುದು ತಮ್ಮ ಮಹತ್ವಾಕಾಂಕ್ಷೆಯಾಗಿತ್ತು ಎಂದು ಹೇಳಿದ್ದಾರೆ.

ಹೆಚ್ಚು ಶಿಕ್ಷಣ ಗಳಿಸಿದಷ್ಟು ಒಳ್ಳೆಯ ಉದ್ಯೋಗ ಸಿಗುತ್ತದೆ. ಕಲ್ಲು ತೂರಾಟ ನಡೆಸುವುದರಿಂದ ಹೆಚ್ಚಿನ ಶಿಕ್ಷಣ ಗಳಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಗಳಿಸಬೇಕಾದರೆ ಕಲ್ಲು ಹಿಡಿಯುವ ಬದಲು ಪೆನ್ ಹಿಡಿಯಬೇಕು ಎಂದು ನಬೀಲ್ ಕಾಶ್ಮೀರದ ಯುವಕರಿಗೆ ಕರೆ ನೀಡಿದ್ದಾರೆ. ಕಾಶ್ಮೀರಕ್ಕೆ ಕಪ್ಪುಚುಕ್ಕೆಯಾಗಿದ್ದ ಉಗ್ರ ಬುರ್ಹಾನ್ ವನಿ ಉಗ್ರ ಸಂಘಟನೆ ಪರವಾಗಿ ಗನ್ ಹಿಡಿದಿದ್ದ, ಆದರೆ ಕಾಶ್ಮೀರದ ಮತ್ತೊಬ್ಬ ವನಿ ದೇಶದ ರಕ್ಷಣೆಗಾಗಿ ಬಂದೂಕು ಹಿಡಿದು ಬಿಎಸ್ಎಫ್ ಗೆ ಸೇರಲು ಸಿದ್ಧಗೊಂಡಿದ್ದಾರೆ. ಎರಡು ವೈರುಧ್ಯಗಳ ನಡುವೆ ಕಾಶ್ಮೀರದ ಯುವಕರು ನಬೀಲ್ ಅಹ್ಮದ್ ವನಿಯಂತಹ ಯುವಕರಿಂದ ಸ್ಫೂರ್ತಿ ಪಡೆಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.