ದೇಶ

ನೋಟು ನಿಷೆಧದ ಬಗ್ಗೆ ಎಕ್ಸ್ ಪ್ರೆಸ್ ಸಮೀಕ್ಷೆ: ಸೂಕ್ತ ಸಿದ್ಧತೆ ನಡೆಸಿಲ್ಲ ಎಂದ ಶೇ.41 ರಷ್ಟು ಮಂದಿ

ಪ್ರಧಾನಿ ನರೇಂದ್ರ ಮೋದಿ ನ.8 ರಂದು ಘೋಷಿಸಿಸಿದ 500, 1000 ರೂ ನೋಟುಗಳ ನಿಷೇಧದ ನಿರ್ಧಾರದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಕ್ಷಿಣ ಭಾರತದಾದ್ಯಂತ ಹಾಗೂ ಒಡಿಶಾದಲ್ಲಿ ಸಮೀಕ್ಷೆ ನಡೆಸಿದೆ.

ನೋಟು ನಿಷೆಧದ ಬಗ್ಗೆ ಎಕ್ಸ್ ಪ್ರೆಸ್ ಸಮೀಕ್ಷೆ: ಸೂಕ್ತ ಸಿದ್ಧತೆ ನಡೆಸಿಲ್ಲ ಎಂದ ಶೇ.41 ರಷ್ಟು ಮಂದಿ
ನೋಟು ನಿಷೇಧದ ಬಗ್ಗೆ ಎಕ್ಸ್ ಪ್ರೆಸ್ ಸಮೀಕ್ಷೆ (ಸಂಗ್ರಹ ಚಿತ್ರ)
Published On :
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನ.8 ರಂದು ಘೋಷಿಸಿಸಿದ 500, 1000 ರೂ ನೋಟುಗಳ ನಿಷೇಧದ ನಿರ್ಧಾರದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಕ್ಷಿಣ ಭಾರತದಾದ್ಯಂತ ಹಾಗೂ ಒಡಿಶಾದಲ್ಲಿ ಸಮೀಕ್ಷೆ ನಡೆಸಿದೆ. 
ಪ್ರಧಾನಿ ನರೇಂದ್ರ ಮೋದಿ ಆಪ್ ನಲ್ಲಿ ನೋಟು ನಿಷೇಧವನ್ನು ಶೇ.90 ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಹೇಳಲಾಗಿತ್ತು. ಇತ್ತ ವಿರೋಧ ಪಕ್ಷದವರು ಅತಿ ಹೆಚ್ಚು ಪ್ರಮಾಣದ ಜನರು ನೋಟು ನಿಷೇಧವನ್ನು ವಿರೋಧಿಸಿದ್ದಾರೆ ಎಂದು ಆರೋಪಿಸಿದ್ದವು. ಆದರೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ವಿಪಕ್ಷಗಳು ಆರೋಪಿಸುವಷ್ಟು ವಿರೋಧ, ಮೋದಿ ಹೇಳುವಷ್ಟು ಮೆಚ್ಚುಗೆಯೂ ಇಲ್ಲದಿರುವುದು ಬಹಿರಂಗವಾಗಿದ್ದು, ಶೇ.41 ರಷ್ಟು ಜನರು ಕೇಂದ್ರ ಸರ್ಕಾರ ನೋಟು ನಿಷೇಧದ ವಿಚಾರದಲ್ಲಿ ಸೂಕ್ತ ಸಿದ್ಧತೆ ನಡೆಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಶೇ.41 ರಷ್ಟು ಜನರು ನೋಟು ನಿಷೇಧ ಯೋಜನೆಯನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದು ಹೇಳಿದ್ದರೆ ಶೇ.40 ರಷ್ಟು ಜನರು ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಹೇಳಿದ್ದಾರೆ. ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 2,791 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ವೇತನ ಪಡೆಯುವ ನೌಕರ ವರ್ಗ, ಅಸಂಘಟಿತ ವರ್ಗ, ಸಣ್ಣ ವ್ಯಾಪರಿಗಳು, ನಿವೃತ್ತ ವ್ಯಕ್ತಿಗಳು ಹಾಗೂ ವಿದ್ಯಾರ್ಥಿ ವರ್ಗ ಸೇರಿದಂತೆ ನೋಟು ನಿಷೇಧದ ಪರಿಣಾಮವನ್ನು ಎದುರಿಸಿರುವ ಐದು ವರ್ಗದ ಜನರನ್ನು ಸಂದರ್ಶಿಸಲಾಗಿದೆ. 
ನೋಟು ನಿಷೆಧದ ಕ್ರಮದಿಂದ ಕಳೆದ 3 ವಾರಗಳಲ್ಲಿ ತಮಗೆ ಅನಾನುಕೂಲವಾಗಿದೆ ಎಂದು ಶೇ.42.5 ರಷ್ಟು ಜನರು ಅಭಿಪ್ರಾಯಪಟ್ಟಿದ್ದರೆ, ಮಧ್ಯಮ ವರ್ಗದ ಶೇ.28 ರಷ್ಟು ಜನರು ತಮಗೆ ಏನೂ ಸಮಸ್ಯೆಯೇ ಆಗಿಲ್ಲ ಎಂದಿದ್ದಾರೆ. ಆದರೆ ಶೇ.29 ರಷ್ಟು ಜನರು ಮಾತ್ರ ತಮಗೆ ಬಹಳ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಮಧ್ಯಮ ವರ್ಗದ ಜನರಿಗೇ ನಗದು ಅಭಾವ ಅತಿ ಹೆಚ್ಚು ಕಾಡಿದ್ದು, ಶೇ.48 ರಷ್ಟು ಜನರು ಮಧ್ಯಮ ವರ್ಗಕ್ಕೇ ಹೆಚ್ಚಿನ ಸಮಸ್ಯೆ ಉಂಟಾಗಿರುವುದು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ 6 ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚಿನ ಬೆಂಬಲ ದೊರೆತಿದ್ದು, ಶೇ.47.6 ರಷ್ಟು ಜನರು ಕಳೆದ ಮೂರು ವಾರಗಳಲ್ಲಿ ತಮಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದಿದ್ದಾರೆ. ಆದರೆ ತೆಲಂಗಾಣದಲ್ಲಿ ಅತಿ ಕಡಿಮೆ ಬೆಂಬಲ ದೊರೆತಿದ್ದು, ಶೇ.44 ರಷ್ಟು ಜನರು ತಮಗೆ ತುಂಬಾ ಸಮಸ್ಯೆಯಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.