ಪಾಟ್ನಾ-ಇಂದೋರ್ ರೈಲು ದುರಂತ: 115ಕ್ಕೇರಿದ ಸಾವಿನ ಸಂಖ್ಯೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಭಾನುವಾರ ಮುಂಜಾನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಇಂದೋರ್-ಪಾಟ್ನಾ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 115ಕ್ಕೇರಿದ್ದು, ಗಾಯಾಳು ಸಂಖ್ಯೆ 200 ದಾಟಿದೆ.

ಲಖನೌ: ಭಾನುವಾರ ಮುಂಜಾನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಇಂದೋರ್-ಪಾಟ್ನಾ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 115ಕ್ಕೇರಿದ್ದು, ಗಾಯಾಳುಗಳ ಸಂಖ್ಯೆ 200 ದಾಟಿದೆ.
ಉತ್ತರ ಪ್ರದೇಶದ ಕಾನ್ಪುರದ ಪುಖರಾಯ ರೈಲ್ವೇ ನಿಲ್ದಾಣದ ಬಳಿ ದುರಂತ ಸಂಭವಿಸಿದ್ದು, ಒಟ್ಟು 14 ಬೋಗಿಗಳ ಪೈಕಿ 2 ಎಸಿ ಬೋಗಿಗಳು ನಜ್ಜುಗುಜ್ಜಾಗಿದೆ. ರೈಲಿನ ವೇಗ ಮತ್ತು ಅಪಘಾತದ ರಭಸಕ್ಕೆ ಎಸಿ ಬೋಗಿಯ ಹಿಂದೆ ಇದ್ದ ಎಸ್ ಸರಣಿಯ ಬೋಗಿಗಳು ಕೂಡ ಜಖಂ ಆಗಿದ್ದು, ಈ ಬೋಗಿಗಳಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅಪಘಾತದ ರಭಸಕ್ಕೆ ಭೋಗಿಗಳು ಒಂದಕ್ಕೊಂದು ಬಡಿದಿದ್ದು, ಭೋಗಿಗಳನ್ನು ಬೇರ್ಪಡಿಸಲು ಗ್ಯಾಸ್ ಕಟರ್ ಬಳಕೆ ಮಾಡಲಾಗುತ್ತಿದೆ.
ಇನ್ನು ನಜ್ಜುಗುಜ್ಜಾದ ಭೋಗಿಗಳನ್ನು ಬೇರ್ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭೋಗಿಗಳಲ್ಲಿ ಮತ್ತಷ್ಟು ಶವಗಳಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವರೆಗೂ ಅಪಘಾತದಲ್ಲಿ ಗಂಭೀರವಾಗಿ ಹಾನಿಯಾದ ಭೋಗಿಗೆ ರಕ್ಷಣಾ ಸಿಬ್ಬಂದಿಗಳು ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕ್ರೇನ್ ಗಳ ಸಹಾಯ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಈಗಾಗಲೇ ದೌಡಾಯಿಸಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಅಧಿಕಾರಿಗಳಿಂದ ತತ್ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಹಳಿಯಲ್ಲಿನ ಲೋಪವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಹಳಿಯಲ್ಲಿ ಲೋಪಕ್ಕೆ ಕಾರಣ ಏನು ಎಂದು ತನಿಖೆ ನಡೆಸಲಾಗುತ್ತಿದೆ.
ಕಳೆದ ಮಾರ್ಚ್ ನಲ್ಲಷ್ಟೇ ಉತ್ತರ ಪ್ರದೇಶದಲ್ಲಿ ರೈಲು ದುರಂತವೊಂದು ಸಂಭವಿಸಿ 39 ಮಂದಿ ಧಾರುಣ ಸಾವಿಗೀಡಾಗಿ 150 ಮಂದಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


