ದೇಶ

ನಾಪತ್ತೆಯಾದ ಯುವತಿಯರನ್ನು ಹುಡುಕಿಕೊಟ್ಟ ಸುರೇಶ್ ಪ್ರಭು "ಟ್ವೀಟ್"!

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಾಡಿದ ಒಂದೇ ಒಂದು ಟ್ವೀಟ್ ನಿಂದಾಗಿ ನಾಪತ್ತೆಯಾಗಿದ್ದ ಯುವತಿಯರಿಬ್ಬರು ಸುರಕ್ಷಿತವಾಗಿ ತಮ್ಮ-ತಮ್ಮ ಮನೆ ಸೇರುವಂತಾಗಿದೆ..

ನಾಪತ್ತೆಯಾದ ಯುವತಿಯರನ್ನು ಹುಡುಕಿಕೊಟ್ಟ ಸುರೇಶ್ ಪ್ರಭು "ಟ್ವೀಟ್"!
ಕೇಂದ್ರ ಸಚಿವ ಸುರೇಶ್ ಪ್ರಭು (ಸಂಗ್ರಹ ಚಿತ್ರ)
Published On :

ಮುಂಬೈ: ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಾಡಿದ ಒಂದೇ ಒಂದು ಟ್ವೀಟ್ ನಿಂದಾಗಿ ನಾಪತ್ತೆಯಾಗಿದ್ದ ಯುವತಿಯರಿಬ್ಬರು ಸುರಕ್ಷಿತವಾಗಿ ತಮ್ಮ-ತಮ್ಮ ಮನೆ  ಸೇರುವಂತಾಗಿದೆ.

ಆಶ್ಚರ್ಯವಾದರೂ ಇದು ಸತ್ಯ..ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ದ್ವಿತೀಯ ಪಿಯುಸಿ ಸಿಬಿಎಸ್ ಇ ಫಲಿತಾಂಶದಲ್ಲಿ ಕಡಿಮೆ ಅಂಕಗಳು ಬಂದಿವೆ ಎಂದು ಮನೆಯವರು ಬೈದ ಕಾರಣದಿಂದ  ಮನನೊಂದ ಪಶ್ಚಿಮ ಬಂಗಾಳದ 24 ಪರಗಣದ ಇಬ್ಬರು ಯುವತಿಯರು ಮನೆ ಬಿಟ್ಟು ಹೋಗಿದ್ದರು. ಯುವತಿಯರ ಪತ್ತೆಗಾಗಿ ಅವರ ಪೋಷಕರು ಸಾಕಷ್ಚು ಪ್ರಯತ್ನಿಸಿದ್ದರಾದರೂ, ಯುವತಿಯರು  ಮಾತ್ರ ಪತ್ತೆಯಾಗಲಿಲ್ಲ. ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟೇಲಿರಿದರೂ ಯುವತಿಯರ ಪತ್ತೆಯಾಗಲಿಲ್ಲ. ಇದರಿಂದ ಬೇಸತ್ತ ಯುವತಿಯರ ಪೋಷಕರೊಬ್ಬರು ಟ್ವಿಟರ್ ನಲ್ಲಿ ಕೇಂದ್ರ  ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪೋಷಕರ ಟ್ವೀಟ್ ಉತ್ತರಿಸಿದ್ದ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ತಮ್ಮ ಕೈಲಾಗುವ ಪ್ರಯತ್ನ ಮಾಡುವುದಾಗಿ ಪ್ರತಿಕ್ರಿಯಿಸಿದ್ದರು. ಬಳಿಕ ತಮ್ಮ ರೈಲ್ವೇ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದ  ಸುರೇಶ್ ಪ್ರಭು ಅವರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಅಧಿಕಾರಿಗಳು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು  ರಾಜ್ಯಗಳಲ್ಲಿ ಅಲರ್ಟ್ ಘೋಷಣೆ ಮಾಡಿ ಯುವತಿಯರಿಗಾಗಿ ಶೋಧ ನಡೆಸಿದ್ದರು.

ಅಂತಿಮವಾಗಿ ಅಧಿಕಾರಿಗಳ ಶೋಧ ಫಲಪ್ರಭವಾಗಿ ಮುಂಬೈನ ಸಿಎಸ್ ಟಿ ರೈಲು ನಿಲ್ದಾಣದಲ್ಲಿ ಯುವತಿಯರು ಪತ್ತೆಯಾಗಿದ್ದರು. ಮುಂಬೈನ ಸಿಎಸ್ ಟಿ ನಿಲ್ದಾಣದ ರೈಲ್ವೇ ಪೊಲೀಸ್ ಪಡೆಯ  ಯೋಧರು ಯುವತಿಯರನ್ನು ವಶಕ್ಕೆ ಪಡೆದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮುಂಬೈಗೆ ಆಗಮಿಸಿದ ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಪಡೆದು ತಮ್ಮ  ಸ್ವಗ್ರಾಮಕ್ಕೆ ತೆರಳಿದ್ದಾರೆ.

ಒಟ್ಟಾರೆ ಸುರೇಶ್ ಪ್ರಭು ಅವರ ಒಂದೇ ಒಂದು ಟ್ವೀಟ್ ಇದೀಗ ಅಪಾಯದಲ್ಲಿ ಸಿಲುಕಿದ್ದ ಇಬ್ಬರು ಯುವತಿಯರು ಮತ್ತೆ ತಮ್ಮ ಪೋಷಕರ ಮಡಿಲು ಸೇರುವಂತೆ ಮಾಡಿದೆ. ಈ ಹಿಂದೆಯೂ ಇದೇ  ಸುರೇಶ್ ಪ್ರಭು ಅವರ ಒಂದು ಟ್ವೀಟ್ ನಿಂದಾಗಿ ನಾಪತ್ತೆಯಾಗಿದ್ದ ಐದು ವರ್ಷದ ಪುಟ್ಟ ಬಾಲಕಿಯನ್ನು ಹುಡುಕಿ ಕೊಡುವಲ್ಲಿ ನೆರವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.