ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ವಿಡಿಯೋದಲ್ಲಿ ಪ್ರತ್ಯಕ್ಷ!
2008 ರ ಡಿಸೆಂಬರ್ ನಲ್ಲಿ ನಡೆದಿದ್ದ ಬಾತ್ಲಾ ಹೌಸ್ ಏನ್ ಕೌಂಟರ್ ಪ್ರಕರಣದಲ್ಲಿ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ಬಿಡುಗಡೆ ಮಾಡಿರುವ ಭಾರತೀಯ ಜಿಹಾದಿಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.

ನವದೆಹಲಿ: 2008 ರ ಡಿಸೆಂಬರ್ ನಲ್ಲಿ ನಡೆದಿದ್ದ ಬಾತ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ಬಿಡುಗಡೆ ಮಾಡಿರುವ ಭಾರತೀಯ ಜಿಹಾದಿಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.
ಬಾತ್ಲಾ ಎನ್ ಕೌಂಟರ್ ಹೌಸ್ ಪ್ರಕರಣದಲ್ಲಿ ಕೂದಲೆಳೆ ಅಂಚಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಮೊಹಮ್ಮದ್ ಸಾಜಿದ್ ಅಲಿಯಾಸ್ ಬಡಾ ಸಾಜಿದ್ ಇತ್ತೀಚೆಗೆ ಇಸೀಸ್ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ವರದಿ ಪ್ರಕಟವಾಗಿದೆ.
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಆಜಂಘರ್ ಘಟಕದಲ್ಲಿದ್ದ ಸಾಜಿದ್ ನೇಪಾಳದ ಮೂಲಕ ದುಬೈ ಗೆ ಪರಾರಿಯಾಗಿದ್ದ. 10 ತಿಂಗಳ ಹಿಂದೆ ಅಮೆರಿಕ ನಡೆಸಿದ್ದ ದಾಳಿಯಲ್ಲಿ ಸಾಜಿದ್ ಸಾವನ್ನಪ್ಪಿದ್ದಾನೆ ಎಂದು ಭಾರತದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಂಬಿದ್ದರು. ಆದರೆ ಸಾವನ್ನಪ್ಪಿದ್ದ ಉಗ್ರ ಈಗ ಇಸೀಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೋದಲ್ಲಿ ಈ ಉಗ್ರ ಕಾಣಿಸಿಕೊಂಡಿರುವುದರಿಂದ ಇಸೀಸ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ವಿಡಿಯೋ ಹತ್ತು ತಿಂಗಳ ಹಿಂದೆ ಚಿತ್ರೀಕರಿಸಲಾಗಿರಬಹುದು ಎಂದು ಶಂಕಿಸಲಾಗಿದೆ. ಇನ್ನು ವಿಡಿಯೋದಲ್ಲಿದ್ದ ಉಳಿದ ನಾಲ್ಕು ಭಾರತೀಯರ ಗುರುತನ್ನು ಪತ್ತೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಈ ಪೈಕಿ ಇಬ್ಬರು ಐಎಂ ನ ಆಜಂಘರ್ ಘಟಕದ ಸದಸ್ಯರಾಗಿದ್ದರೆ ಮತ್ತೆ ಇಬ್ಬರು ಕಲ್ಯಾಣ್ ಘಟಕದ ಸದಸ್ಯರು ಎಂದು ಹೇಳಲಾಗಿದೆ.
ಇಬ್ಬರು ಉಗ್ರರಲ್ಲಿ ಅಬು ರಶೀದ್ ಅಲಿಯಾಸ್ ದಂಡ ಉತ್ತರ ಪ್ರದೇಶದ ಆಜಂಘರ್ ನವನಾಗಿದ್ದರೆ, ಮತ್ತೋರ್ವ ರೆಹಮಾನ್ ಎಂಬ ಉಗ್ರ ಹೈದರಾಬಾದ್ ಮೂಲದವನು ಹಾಗೂ ಫಾಹದ್ ತನ್ವೀರ್ ಎಂಬ ಮತ್ತೊಬ್ಬ ಉಗ್ರ ಮಹಾರಾಷ್ಟ್ರದವನು ಎಂದು ವರದಿ ಮೂಲಕ ತಿಳಿದುಬಂದಿದೆ. ಭಾರತದ ಜಿಹಾದಿಗಳು ಎಂದು ಹೇಳಲಾಗುವ ಉಗ್ರರು ಸಿರಿಯಾದಲ್ಲಿ ದಾಳಿ ನಡೆಸುತ್ತಿರುವ ವೀಡಿಯೋವನ್ನು ಇತ್ತೀಚೆಗಷ್ಟೇ ಇಸ್ಲಾಮಿಕ್ ಸ್ಟೇಟ್ (ಇಸಿಸ್) ಬಹಿರಂಗ ಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


