ವಿಜಯ್ ಮಲ್ಯ ಬ್ಯಾಂಕ್ ಸಾಲಕ್ಕೆ ಮನಮೋಹನ್ ಸಿಂಗ್ ಶೂರಿಟಿ!
ದೇಶದ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದ ಸುಸ್ತಿದಾರ ಎನಿಸಿಕೊಂಡು ವಿದೇಶದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಕೇವಲ ಬ್ಯಾಂಕುಗಳಿಗೆ ಮಾತ್ರವಲ್ಲ ಇದೀಗ ಸಣ್ಣ ರೈತನೋರ್ವನ ಜೀವನದ ಮೇಲೂ ಗಂಭೀರ ಪರಿಣಾಮ ಬೀರಿದ್ದಾರೆ...

ನವದೆಹಲಿ: ದೇಶದ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದ ಸುಸ್ತಿದಾರ ಎನಿಸಿಕೊಂಡು ವಿದೇಶದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಕೇವಲ ಬ್ಯಾಂಕುಗಳಿಗೆ ಮಾತ್ರವಲ್ಲ ಇದೀಗ ಸಣ್ಣ ರೈತನೋರ್ವನ ಜೀವನದ ಮೇಲೂ ಗಂಭೀರ ಪರಿಣಾಮ ಬೀರಿದ್ದಾರೆ.
ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಮನಮೋಹನ್ ಸಿಂಗ್ ಶೂರಿಟಿ ಹಾಕಿದ್ದಾರಂತೆ. ಅರೇ ಇದೇನಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಲ್ಯ ಮಾಡಿರುವ ಸಾಲಕ್ಕೆ ಶೂರಿಟಿ ಹಾಕಿದ್ದಾರೆ ಎಂದು ನೀವು ಎಣಿಸಿದರೆ ನಿಮ್ಮ ಲೆಕ್ಕಾಚಾರ ತಪ್ಪು. ಏಕೆಂದರೆ ಮಲ್ಯ ಸಾಲಕ್ಕೆ ಶೂರಿಟಿ ಹಾಕಿರುವುದು ಮಾಜಿ ಪ್ರಧಾನಿ ಸಿಂಗ್ ಅಲ್ಲ ಬದಲಿಗೆ ಮನಮೋಹನ್ ಸಿಂಗ್ ಎಂಬ ಸಣ್ಣ ರೈತ. ಈ ಪ್ರಕರಣದ ಮತ್ತೊಂದು ರೋಚಕ ತಿರುವು ಎಂದರೆ ಮಲ್ಯ ಸಾಲಕ್ಕೆ ಶೂರಿಟಿ ಹಾಕಿರುವ ರೈತ ಮನಮೋಹನ್ ಸಿಂಗ್ ವಿಜಯ್ ಮಲ್ಯ ಯಾರೆಂದೇ ತಿಳಿದಿಲ್ಲ. ಕನಿಷ್ಟ ಪಕ್ಷ ಮಲ್ಯರನ್ನು ಆತ ಒಮ್ಮೆಯೂ ನೋಡಿಲ್ಲವಂತೆ. ಹೀಗಿದ್ದೂ ಮಲ್ಯ ಸಾಲಕ್ಕೆ ಇವರು ಹೇಗೆ ಶೂರಿಟಿ ಹಾಕಲು ಸಾಧ್ಯ? ಅದೇ ಈ ಪ್ರಕರಣದ ಟ್ವಿಸ್ಟ್..
ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಉತ್ತರಪ್ರದೇಶದ ಫಿಲಿಬಿಟ್ ಜಿಲ್ಲೆಯ ಖಜುರಿಯಾ ನವಿರಾಮ್ ಹಳ್ಳಿಯ ರೈತ ಮನಮೋಹನ್ ಸಿಂಗ್ ಜಾಮೀನು ನೀಡಿದ್ದಾನೆ ಎಂದು ಆರೋಪಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಆತನಿಗೆ ಇದೀಗ ನೋಟಿ ಜಾರಿ ಮಾಡಿದ್ದಾರೆ. ಕೇವಲ ನೋಟಿಸ್ ನೀಡಿದ್ದಷ್ಟೇ ಅಲ್ಲದೇ ರೈತನ ಬ್ಯಾಂಕ್ ಖಾತೆಯನ್ನು ರದ್ದು ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಆತನಿಗೆ ದೊರೆಯುತ್ತಿದ್ದ ಎಲ್ಲ ಸೌಲಭ್ಯಗಳಿಗೂ ಕತ್ತರಿ ಹಾಕಲಾಗಿದೆಯಂತೆ ಈ ವಿಚಾರವನ್ನು ಸ್ವತಃ ರೈತ ಮನಮೋಹನ್ ಸಿಂಗ್ ಹೇಳಿಕೊಂಡಿದ್ದು, ಯಾರೋ ಮಾಡಿದ ಫೋರ್ಜರಿ ಸಹಿಗೆ ಇದೀಗ ರೈತ ಮನಮೋಹನ್ ಸಿಂಗ್ ನ ಬದುಕು ಬರ್ಬಾದ್ ಆಗಿದೆ.
ಘಟನೆ ವಿವರ
ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಉಧ್ಯಮಿ ವಿಜಯ್ ಮಲ್ಯಅವರ ಬ್ಯಾಂಕ್ ಸಾಲಕ್ಕೆ ಜಾಮೀನುದಾರ ಆಗಿರುವ ಹಿನ್ನೆಲೆಯಲ್ಲಿ ರೈತ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದ ಮನಮೋಹನ್ ಸಿಂಗ್ಗೆ ಈಗ ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಶಾಖೆ ನೋಟಿಸ್ ಜಾರಿ ಮಾಡಿದೆ. ಮುಂಬೈ ಶಾಖೆ ಸ್ಥಳೀಯ ಶಾಖೆಯ ಮ್ಯಾನೇಜರ್ಗೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿವೆ ಎಂದು ತಿಳಿದುಬಂದಿದೆ.
ನೋಟಿಸ್ ಜಾರಿಗೊಳಿಸಿರುವ ಬ್ಯಾಂಕ್, ವಿಜಯ್ ಮಲ್ಯಗೆ ಜಾಮೀನು ನೀಡಿದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ರೈತನಿಗೆ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನೂ ನಿಲ್ಲಿಸಿದೆ. ಬೆಳೆಗೆ ಸಿಗಬೇಕಾದ ಸಬ್ಸಿಡಿ ಸಹ ಇದರಿಂದ ಸ್ಥಗಿತಗೊಂಡಿದೆ. ಇದರಿಂದ ರೈತ ಮನಮೋಹನ್ ಸಿಂಗ್ ಕಂಗಾಲಾಗಿದ್ದು, ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ಎಂಟು ಎಕರೆ ಜಮೀನು ಹೊಂದಿರುವ ರೈತ ಮನಮೋಹನ್ ಸಿಂಗ್ ಹೇಳುವ ಪ್ರಕಾರ ಕಳೆದ ಡಿಸೆಂಬರ್ನಿಂದ ಎಲ್ಲಿಲ್ಲದ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
"ಈ ವಿಜಯ್ ಮಲ್ಯ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಇವೆಲ್ಲವೂ ಹೇಗೆ ನಡೆದಿದೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದೇನೂ ತಿಳಿದಿಲ್ಲ. ಮಲ್ಯ ಎನ್ನುವ ಹೆಸರಿನವರರು ಯಾರೂ ನನಗೆ ಪರಿಚಯವಿಲ್ಲ. ನನ್ನ ಜೀವನದಲ್ಲಿಯೇ ಒಮ್ಮೆಯೂ ನಾನು ಮುಂಬೈಗೆ ಭೇಟಿ ನೀಡಿಲ್ಲ. ಹೀಗಿರುವಾಗ ವಿಜಯ್ ಮಲ್ಯ ಎನ್ನುವವರ ಸಾಲಕ್ಕೆ ನಾನು ಹೇಗೆ ಶೂರಿಟಿ ನೀಡಲು ಸಾಧ್ಯ. ಮಲ್ಯ ಅವರ ಜಾಮೀನುದಾರ ಎಂದು ನನ್ನ ಬ್ಯಾಂಕ್ ಖಾತೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳ ಸವಲತ್ತಿನಿಂದ ನಾನು ವಂಚಿತನಾಗುತ್ತಿದ್ದೇನೆ. ನಾನು ಬೆಳೆದ ಎಲ್ಲಾ ಬೆಳೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದೇನೆ. ಬೆಂಬಲ ಬೆಲೆ, ಸಬ್ಸಿಡಿ ಸವಲತ್ತುಗಳು ನನ್ನ ಪಾಲಿಗೆ ಇಲ್ಲವಾಗಿದೆ. ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವ ಕಾರಣ ಅದೂ ಕೂಡ ನನಗೆ ಲಭ್ಯವಾಗುತ್ತಿಲ್ಲ. ನನ್ನ ಸಹಿಯನ್ನು ಫೋರ್ಜರಿ ಮಾಡಿ ಮೋಸ ಮಾಡಲಾಗಿದೆ ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತು ಮುಂಬೈ ಬ್ಯಾಂಕ್ ಶಾಖೆಗೆ ಪತ್ರ ಬರೆದಿರುವುದಾಗಿ ಸಿಂಗ್ ಹೇಳಿಕೊಂಡಿದ್ದಾರೆ.
ಒಟ್ಟಾರಿ ಫೋರ್ಜರಿ ಸಹಿ ಮಾಡುವ ಕಳ್ಳರಿಂದ ಇಲ್ಲಿ ಓರ್ವ ರೈತ ಕಂಗಾಲಾಗಿದ್ದು, ಮಾಡದ ತಪ್ಪಿಗೆ ಇದೀಗ ಶಿಕ್ಷೆ ಅನುಭವಿಸುತ್ತಿದ್ದಾನೆ. ಅರೆ ವಿಜಯ್ ಮಲ್ಯ ರಂತಹ ದೊಡ್ಡ ಉದ್ಯಮಿಗೆ ಮನಮೋಹನ್ ಸಿಂಗ್ ರಂತಹ ಸಣ್ಣ ರೈತ ಶೂರಿಟಿ ಹಾಕಲು ಹೇಗೆ ಸಾಧ್ಯ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ನೋಟಿಸ್ ಜಾರಿ ಮಾಡಿರುವ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯತನ ಕೂಡ ಇಲ್ಲಿ ಎದ್ದುಕಾಣುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


