ವಿಕಲಾಂಗ ಕಾರ್ಯಕರ್ತೆಗೆ ಪ್ರಯಾಣ ನಿರಾಕರಿಸಿದ್ದ ಸ್ಪೈಸ್ ಜೆಟ್ ಗೆ ದಂಡ ಹಾಕಿದ ಕೋರ್ಟ್
ವಿಕಲಾಂಗ ಪ್ರಯಾಣಿಕರೊಬ್ಬರ ಜೊತೆ ಕ್ರೂರವಾಗಿ ನಡೆದುಕೊಂಡದ್ದಕ್ಕಾಗಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ...

ನವದೆಹಲಿ: ವಿಕಲಾಂಗ ಪ್ರಯಾಣಿಕರೊಬ್ಬರ ಜೊತೆ ಕ್ರೂರವಾಗಿ ನಡೆದುಕೊಂಡದ್ದಕ್ಕಾಗಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿ ಸುಪ್ರೀಂ ಕೋರ್ಟ್ ನಿನ್ನೆ ಆದೇಶ ನೀಡಿದೆ.
ಜೀಜಾ ಘೋಷ್ ಎಂಬ ವಿಕಲಾಂಗ ಹಕ್ಕು ಕಾರ್ಯಕರ್ತೆ ಪಾರ್ಶ್ವವಾಯು ಪೀಡಿತೆಯಾಗಿದ್ದು, 2012ರಲ್ಲಿ ಪ್ರಯಾಣಿಸಲು ಸ್ಪೈಸ್ ಜೆಟ್ ಏರಿದ್ದರು. ಆದರೆ ಸಿಬ್ಬಂದಿ ಆಕೆಯನ್ನು ಪ್ರಯಾಣಿಸಲು ಬಿಡದೆ ಕೆಳಗಿಳಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ಜೀಜಾ ಘೋಷ್ ದೂರು ನೀಡಿದ್ದರು.
ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ವಿಮಾನಯಾನ ಸಿಬ್ಬಂದಿ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ವಿಕಲಾಂಗರ ಜೊತೆ ಸೌಹಾರ್ದವಾಗಿ ನಡೆದುಕೊಳ್ಳಬೇಕು, ವಿಕಲಾಂಗರೆಂದು ಬೇಧ ಭಾವ ಮಾಡುವುದು ಸರಿಯಲ್ಲವೆಂದು ಕಂಪೆನಿಗೆ ಪರಿಹಾರ ನೀಡಲು ಎರಡು ತಿಂಗಳ ಕಾಲಾವಕಾಶ ನೀಡಿದೆ.
ವಿಕಲಾಂಗರನ್ನು ಕೂಡ ಸಮಾಜದ ಇತರರಂತೆಯೇ ಪರಿಗಣಿಸಬೇಕು. ಸಾಮಾನ್ಯ ಮನುಷ್ಯರಂತೆಯೇ ಅವರು ಕೂಡ ಬೆಳೆಯಬೇಕು. ಅವರೊಂದು ಕರುಣೆ ತೋರುವ ವಸ್ತು ಎಂದು ಭಾವಿಸದೆ, ನಿರ್ಲಕ್ಷ್ಯ ತೋರದೆ ನೋಡಿಕೊಳ್ಳಬೇಕು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಆರೋಗ್ಯವಂತ ಸಮಾಜದ ನಾಗರಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದೆ.
2012ರಲ್ಲಿ 40 ವರ್ಷದ ಜೀಜಾ ಘೋಷ್ ಅವರು ಗೋವಾದಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸಲೆಂದು ಕೋಲ್ಕತ್ತಾದಲ್ಲಿ ಸ್ಪೈಸ್ ಜೆಟ್ ವಿಮಾನ ಹತ್ತಿದ್ದರು. ಆದರೆ ವಿಕಲಾಂಗರು ವಿಮಾನದಲ್ಲಿ ಇದ್ದರೆ ಹಿತಕರವೆನಿಸುವುದಿಲ್ಲ ಎಂದು ವಿಮಾನದ ಸಿಬ್ಬಂದಿ ಅವರನ್ನು ಕೆಳಗಿಳಿಸಿದ್ದರು. ರದ್ದುಗೊಳಿಸಿದ ದರವನ್ನು ಹಿಡಿದುಕೊಂಡು ಉಳಿದ ಟಿಕೆಟ್ ದರವನ್ನು ಸಂಸ್ಥೆ ಹಿಂತಿರುಗಿಸಿತ್ತು.
ಈ ಬಗ್ಗೆ ಜೀಜಾ ಘೋಷ್ ನ್ಯಾಯಾಲಯದ ಮೊರೆ ಹೋಗಿದ್ದರು. ಘೋಷ್ ಅವರನ್ನು ವೈದ್ಯಕೀಯ ಪರೀಕ್ಷೆ ನಡೆಸದೆ, ಅವರ ದೈಹಿಕ ಆರೋಗ್ಯವನ್ನು ಪರಿಗಣಿಸದೆ ಸ್ವ ಪ್ರೇರಿತವಾಗಿ ತೀರ್ಮಾನ ತೆಗೆದುಕೊಂಡದ್ದು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


