'ನಾನು ನಿಷ್ಠಾವಂತ ಭಾರತೀಯ, ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ': ಅಸದುದ್ದೀನ್ ಓವೈಸಿ
' ತಮ್ಮ ಗಂಟಲಿನ ಹತ್ತಿರ ಚೂರಿ ತಂದು ಇರಿಸಿದರೂ ಭಾರತ್ ಮಾತಾ ಕಿ ಜೈ' ಎಂದು ಹೇಳುವುದಿಲ್ಲ ಎಂದು ಹೇಳಿ ವಿವಾದ ಮತ್ತು ವಿರೋಧಕ್ಕೆ ಕಾರಣರಾಗಿದ್ದ...

ಲಕ್ನೋ: ' ತಮ್ಮ ಗಂಟಲಿನ ಹತ್ತಿರ ಚೂರಿ ತಂದು ಇಟ್ಟರೂ ಭಾರತ್ ಮಾತಾ ಕಿ ಜೈ' ಎಂದು ಹೇಳುವುದಿಲ್ಲ ಎಂದು ಹೇಳಿ ವಿವಾದ ಮತ್ತು ವಿರೋಧಕ್ಕೆ ಕಾರಣರಾಗಿದ್ದ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಈಗ ತಮ್ಮ ಉಲ್ಟಾ ಹೊಡೆದಿದ್ದಾರೆ.
ತಾವು ನಿಷ್ಠಾವಂತ ಭಾರತೀಯನಾಗಿದ್ದು, ಯಾರಿಂದಲೂ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪ್ರಮಾಣಪತ್ರ ಪಡೆಯಬೇಕಾಗಿಲ್ಲ ಎಂದು ಹೇಳಿದ್ದಾರೆ. ನಮಗೆ ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ. ನಾವು ನಮ್ಮ ರಕ್ತವನ್ನು ಈ ದೇಶಕ್ಕೆ ಕೊಟ್ಟಿದ್ದೇವೆ. ತಮ್ಮ ಪಕ್ಷ ಮುಸಲ್ಮಾನರದ್ದಲ್ಲ, ಭಾರತೀಯರದ್ದು ಎಂದು ಓವೈಸಿ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ನಾನು ಸ್ವತಃ ಈ ದೇಶದ ನಿಷ್ಠಾವಂತ ನಾಗರಿಕ ಎಂದು ಹೇಳಿದ ಅವರು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಿಂದೂಸ್ತಾನ್ ಜಿಂದಾಬಾದ್, ಜೈ ಹಿಂದ್ ಹೇಳುವಂತೆ ಸೂಚಿಸಿದರು. ಲಕ್ನೋದಲ್ಲಿ ಅವರು ಹೋದಲ್ಲೆಲ್ಲ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಅವರು, ತಮ್ಮ ದೇಶಭಕ್ತಿಯನ್ನು ಪ್ರಶ್ನಿಸುವವರೆಲ್ಲ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕಾಗಿದ್ದ ಸಂದರ್ಭದಲ್ಲಿ ಇರಲಿಲ್ಲ. ಇವರಿಗೇನು ಗೊತ್ತು ದೇಶಭಕ್ಕಿ ಎಂದರೇನೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಆರೋಪಿಸಿದ ಅವರು, ತಮ್ಮ ಸರ್ಕಾರದ ನಿಜಬಣ್ಣ ಬಯಲಾಗಬಹುದು ಎಂಬ ಭಯದಿಂದ ತಮಗೆ ರ್ಯಾಲಿ ನಡೆಸಲು ಬಿಡಲಿಲ್ಲ ಎಂದರು.
ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಆರ್ ಎಸ್ ಎಸ್ ಮುಖ್ಯಸ್ಥರನ್ನು ಉತ್ತರ ಪ್ರದೇಶ ರಾಜ್ಯಕ್ಕೆ ಬರಲು ಬಿಟ್ಟ ಸರ್ಕಾರ ತಾವು ಸಾರ್ವಜನಿಕ ರ್ಯಾಲಿ ನಡೆಸಲು ಬಿಡಲಿಲ್ಲ ಎಂದು ದೂರಿದರು. ಮುಂದಿನ ವರ್ಷ ಉತ್ತರ ಪ್ರದೇಶ ರಾಜ್ಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೀನಾಯವಾದ ಸೋಲು ಕಾಣಲಿದೆ ಎಂದು ಓವೈಸಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


