ಮಾನವೀಯತೆ ಮರೆತ ಮಾನವ; ನಾಡಿಗೆ ಬಂದ ಕರಡಿಗೆ 100 ಗುಂಡೇಟು..!
ಆಹಾರ ಅರಸುತ್ತ ಕಾಡಿನಿಂದ ನಾಡಿಗೆ ಬಂದ ಕರಡಿಯೊಂದರ ಮೇಲೆ ಗುಂಡಿನ ಸುರಿಮಳೆ ಗೈಯ್ಯುವ ಮೂಲಕ ಅಮಾನವೀಯವಾಗಿ ಕೊಂದ ಕ್ರೂರ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ..

ರಾಯ್ಪುರ: ಆಹಾರ ಅರಸುತ್ತ ಕಾಡಿನಿಂದ ನಾಡಿಗೆ ಬಂದ ಕರಡಿಯೊಂದರ ಮೇಲೆ ಗುಂಡಿನ ಸುರಿಮಳೆ ಗೈಯ್ಯುವ ಮೂಲಕ ಅಮಾನವೀಯವಾಗಿ ಕೊಂದ ಕ್ರೂರ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಅಲ್ಲೊಂದು ದಟ್ಟಾರಣ್ಯ. ಅರಣ್ಯದಲ್ಲಿ ಶಸ್ತ್ರಸಜ್ಜಿತ ಹತ್ತಾರು ಮಂದಿ ಸಿಪಾಯಿಗಳು....ಇದೇನೋ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲ. ಬದಲಿಗೆ ಕರಡಿ ವಿರೋಧಿ ಕಾರ್ಯಾಚರಣೆ. ಹೌದು.. ಕಾಡಿನಿಂದ ನಾಡಿಗೆ ಬಂದ ಕರಡಿಯೊಂದನ್ನು ಹೊಡೆದುರುಳಿಸಲು ಛತ್ತೀಸ್ ಘಡದ ಪೊಲೀಸರು ಸಜ್ಜಾಗಿದ್ದ ರೀತಿಯಿದು. ಕಳೆದ ಶನಿವಾರ ಕಾಡಿನಿಂದ ಛತ್ತೀಸ್ ಘಡದ ಮಹಸಾಮುಂದ್ ಜಿಲ್ಲೆಯ ಗ್ರಾಮಗಳಿಗೆ ನುಗ್ಗಿದ್ದ ಹೆಣ್ಣು ಕರಡಿಯೊಂದು ಸ್ಥಳೀಯರ ಮೇಲೆ ದಾಳಿ ಮಾಡಿತ್ತು. ಕರಡಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸಾವನ್ನಪ್ಪಿದ್ದರು. ಇದರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದರು.
ಕರಡಿಯನ್ನು ಹಿಡಿಯಲು ಸ್ಥಳೀಯರಿಂದ ತೀವ್ರ ಒತ್ತಡ ಬಂದಿತ್ತು. ದಾಳಿ ಮಾಡಿದ್ದ ಕರಡಿಗಾಗಿ ಕಳೆದ ಮೂರು ದಿನಗಳಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಾದರೂ. ಕರಡಿ ಮಾತ್ರ ಅವರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿತ್ತು. ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ನೀಡಿ ಸೆರೆ ಹಿಡಿಯಲು ಬಯಸಿದ್ದರಾದರೂ, ತಪ್ಪಿಸಿಕೊಳ್ಳುತ್ತಿದ್ದ ಕರಡಿಯನ್ನು ಕೊಂದು ಹಾಕಲು ಅಲ್ಲಿನ ಪೊಲೀಸರು ನಿರ್ಣಯಿಸಿದ್ದರು. ಕರಡಿಯನ್ನು ಕೊಲ್ಲಬೇಕೇ ಅಥವಾ ಜೀವಂತ ಸೆರೆಹಿಡಿಯಬೇಕೆ ಎನ್ನುವ ಗೊಂದಲದ ನಡುವೆಯೇ ಪೊಲೀಸ್ ಸಿಬ್ಬಂದಿ ಕರಡಿಯನ್ನು ದಟ್ಟಾರಣ್ಯದಲ್ಲಿ ಕೊಂದು ಹಾಕಿದ್ದಾರೆ.
ಜಿಲ್ಲೆಯ ಸಮೀಪದ ದಟ್ಟಾರಣ್ಯದಲ್ಲಿ ಕರಡಿ ಕಾಣಿಸಿಕೊಂಡ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸೈನಿಕರೊಂದಿಗೆ ಸ್ಥಳಕ್ಕಾಗಮಿಸಿ ನೋಡನೋಡುತ್ತಿದ್ದಂತೆಯೇ ಕರಡಿ ಮೇಲೆ ಗುಂಡಿನ ಸುರಿಮಳೆಗರೆದಿದ್ದಾರೆ. ಸಿಪಾಯಿಗಳು ಮತ್ತು ಪೊಲೀಸರು ಕರಡಿ ಮೇಲೆ ಸುಮಾರು 100ಕ್ಕೂ ಅಧಿಕ ಸುತ್ತು ಗುಂಡು ಹಾರಿಸಿದ್ದು, ಈ ಪೈಕಿ ಸುಮಾರು 16 ಗುಂಡುಗಳು ಕರಡಿ ಮೈ ಹೊಕ್ಕಿವೆ ಎಂದು ತಿಳಿದುಬಂದಿದೆ.
ಇದೀಗ ಪೊಲೀಸರ ಈ ಕಾರ್ಯಾಚರಣೆ ವಿವಾದಕ್ಕೆ ಕಾರಣವಾಗಿದ್ದು, ಪ್ರಾಣಿದಯಾ ಸಂಘಟನೆಯ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಕರಡಿಯನ್ನು ಅರವಳಿಕೆ ನೀಡಿ ಜೀವಂತವಾಗಿ ಹಿಡಿದು ಅರಣ್ಯಕ್ಕೆ ಬಿಡಬಹುದಿತ್ತು. ಆದರೆ ಕ್ರೌರ್ಯ ಮೆರೆದ ಪೊಲೀಸರು ಅಮಾಯಕ ಜೀವವನ್ನು ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರ ಈ ಕರಡಿ ಕಾರ್ಯಾಚರಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್ ಘಡ ಪೊಲೀಸರು ಜನರ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿದ್ದ ಕರಡಿಯನ್ನು ಕೊಲ್ಲುವುದು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ತಮ್ಮ ಕ್ರೌರ್ಯಕ್ಕೆ ಸಮರ್ಥನೆ ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಸಾವನ್ನಪ್ಪಿದ ಕರಡಿ ಸುಮಾರು 6 ಅಡಿ ಉದ್ದ ಇದ್ದು, 140 ಕೆಜಿ ತೂಕ ಹೊಂದಿತ್ತು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


