ದೇಶ

ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದ ಸೋನಿಯಾ: ಸ್ವಾಮಿ ಆರೋಪ

2012ರಲ್ಲಿ ಯುಪಿಎ ಆಡಳಿತ ಸಂದರ್ಭದಲ್ಲಿ ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ಸೋನಿಯಾಗಾಂಧಿ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದ ಸೋನಿಯಾ: ಸ್ವಾಮಿ ಆರೋಪ
ಸುಬ್ರಮಣಿಯನ್ ಸ್ವಾಮಿ, ಸೋನಿಯಾ ಮತ್ತು ಕೇಜ್ರಿವಾಲ್ (ಸಂಗ್ರಹ ಚಿತ್ರ)
Published On :

ತಿರುವನಂತಪುರಂ: 2012ರಲ್ಲಿ ಯುಪಿಎ ಆಡಳಿತ ಸಂದರ್ಭದಲ್ಲಿ ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ಸೋನಿಯಾಗಾಂಧಿ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕೇರಳದಲ್ಲಿ ನಡೆದ ಇಂದಿದಾಗಾಂಧಿ ಅವರಿಂದು ತುರ್ತು ಪರಿಸ್ಥಿತಿ ಹೇರಿಕೆ 41 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಸಭೆ ಸಂಸದ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ವಾಗ್ದಾಳಿ ಮತ್ತು ಆರೋಪಗಳನ್ನು ಮುಂದುವರೆಸಿದ್ದಾರೆ. ಈ ವೇಳೆ ಸುಳ್ಳು ಹಿಂದೂ ಭಯೋತ್ಪಾದನೆ ಆರೋಪ ಹೊರಿಸಿ ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಸೋನಿಯಾಗಾಂಧಿ ಮುಂದಾಗಿದ್ದರು. ಆದರೆ ಅಂದಿನ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ರಾಮಮಂದಿರ ವಿಚಾರ ಪ್ರಸ್ತಾಪಿಸಿದ ಸ್ವಾಮಿ
ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಪ್ರಸ್ತಾಪಿಸಿದ ಸ್ವಾಮಿ, ಬಾಬ್ರಿ ಮಸೀದಿ ನಿರ್ಮಾಣಕ್ಕೆ ಸರಿಯೂ ನದಿಯ ದಡದಲ್ಲಿ ಜಾಗ ನೀಡಬೇಕು. ಅಂತೆಯೇ ಮುಸ್ಲಿಮರು ಕೃಷ್ಣಾ ಪ್ಯಾಕೇಜ್ ಗೆ ಅನುಮೋದನೆ ನೀಡಿ ಮೊಘಲ್ ಆಡಳಿತದಲ್ಲಿ ಧ್ವಂಸಗೊಂಡ ಹಿಂದೂದೇಗುಲಗಳು ಪ್ರಮುಖವಾಗಿ ಆಯೋಧ್ಯೆ, ಕಾಶಿ ಮತ್ತು ಮಥುರಾ ಮರು ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಕೇಳಿದರು.

"ಮಹಾಭಾರತದಲ್ಲಿ ಕೃಷ್ಣ ಸಂಧಾನದ ವೇಳೆ ಕೌರವರಿಗೆ ಕನಿಷ್ಠ 5 ಗ್ರಾಮಗಳನ್ನು ಪಾಂಡವರಿಗೆ ನೀಡುವಂತೆ ಕೇಳಿದ್ದ. ನಾನು ಮುಸ್ಲಿಮರಲ್ಲಿ ಈ ಮೂಲಕ ವಿವಾದಿತ ಸ್ಥಳದಲ್ಲಿ ಕನಿಷ್ಟ 3 ದೇಗುಲಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಂಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು. ಇದೇ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಾಜಿ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು ಕೂಡ ಅಸಹಜ ಎಂದು ಸ್ವಾಮಿ ವಾದಿಸಿದರು.

ದೆಹಲಿ ಸಿಎಂ ಐಐಟಿ ರ್ಯಾಂಕ್ ನಕಲಿ
ಇದೇ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಕಲಿ ಪ್ರದವಿ ಪ್ರಮಾಣ ಪತ್ರ ಕುರಿತು ಮಾತನಾಡಿದ ಸ್ವಾಮಿ, ತಮಗೆ ಲಭಿಸಿರುವ ಆರ್ ಟಿಐ ಮಾಹಿತಿಯನ್ವಯ ಕೇಜ್ರಿವಾಲ್ ಸ್ಪಧಾ೯ತ್ಮಕ ಪರೀಕ್ಷೆ ಮೂಲಕ ಐಐಟಿ ಪ್ರವೇಶ ಪಡೆದಿಲ್ಲ ಎ೦ದು ಸ್ಪಷ್ಟವಾಗಿದೆ. ಇದರೊಂದಿಗೆ ಕೇಜ್ರಿವಾಲ್ ಐಐಟಿಯಲ್ಲಿ ಯಾವುದೇ ರ್ಯಾ೦ಕ್ ಪಡೆದುಕೊ೦ಡಿಲ್ಲ ಎಂದು ಹೇಳಿದ್ದು, ಅಲ್ಲದೆ ಕೇಜ್ರಿವಾಲ್ ಮಾಮವಾರ್ಗದ ಮೂಲಕ ಐಐಟಿ ಪ್ರವೇಶ ಪಡೆದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ. ಆರ್ ಟಿಐ ಮಾಹಿತಿಯಲ್ಲಿನ ಕೊನೆಯ ಸಾಲಿನಲ್ಲಿ ಉಲ್ಲೇಖವಾಗಿರುವಂತೆ ಕೇಜ್ರಿವಾಲ್ ತಮ್ಮ ತಂದೆಯ ಪ್ರಭಾವ ಬಳಸಿ ಅಕ್ರಮವಾಗಿ ಐಐಟಿ ಖರಗ್ ಪುರದ ಪ್ರವೇಶ ಪಡೆದಿರಬಹುದು ಎಂದು ಸ್ವಾಮಿ ಹೇಳಿದ್ದಾರೆ.

ಅಲ್ಲದೆ ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ಜೇಟ್ಲಿ ವಿರುದ್ಧ ವಾಗ್ದಾಳಿ ಕುರಿತು ಸ್ವಾಮಿ ಸ್ಪಷ್ಟನೆ

ಇನ್ನು ತಮ್ಮದೇ ಪಕ್ಷದ ಸಚಿವ ಅರುಣ್ ಜೇಟ್ಲಿ ವಿರುದ್ಧದ ವಾಗ್ದಾಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸುಬ್ರಮಣಿಯನ್ ಸ್ವಾಮಿ ಅವರು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿರುವೆ. ಸರ್ಕಾರದಲ್ಲಿನ ಅವ್ಯವಸ್ಥೆಗಳನ್ನು ನೋಡಿಕೊಂಡು ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ. ನಾನು ಶಿಸ್ತಿನ ವ್ಯಕ್ತಿಯಾಗಿದ್ದರೆ ಖಂಡಿತ ವ್ಯವಸ್ಥೆ ಕೂಡ ಸರಿ ಇರುತ್ತದೆ. ನಾನೇ ಅಶಿಸ್ತಿನಿಂದ ಇದ್ದರೆ ಆಗ ಖಂಡಿತಾ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.