ಭಾರತದ ರಸ್ತೆಗಳಲ್ಲಿ ಪ್ರತಿ ಗಂಟೆಗೆ 17 ಜನ ಅಪಘಾತದಲ್ಲಿ ದುರ್ಮರಣ!
ಭಾರತ ದೇಶದ ರಸ್ತೆಗಳು 2015ರಲ್ಲಿ ಅತೀ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ಗಂಟೆಗೆ 17 ಸಾವು ಸಂಭವಿಸುತ್ತಿವೆ...

ನವದೆಹಲಿ: ಭಾರತ ದೇಶದ ರಸ್ತೆಗಳು 2015ರಲ್ಲಿ ಅತೀ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತದಲ್ಲಿ ಪ್ರತಿ ಗಂಟೆಗೆ 17 ಸಾವು ಸಂಭವಿಸುತ್ತಿವೆ.
ನಿನ್ನೆಯಷ್ಟೇ ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದ ರಸ್ತೆ ಅಪಘಾತ-2015ರ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಪ್ರತಿ ಗಂಟೆಗೆ 57 ಅಪಘಾತಗಳು ಸಂಭವಿಸುತ್ತಿದ್ದು, ಇದರಂತೆ ಪ್ರತಿ ಗಂಟೆಗೆ 17 ಜನರು ಸಾವನ್ನಪ್ಪುತ್ತಿದ್ದಾರೆಂದು ಹೇಳಿದ್ದಾರೆ.
ಕಳೆದ ವರ್ಷ ಬರೋಬ್ಬರಿ 5 ಲಕ್ಷದಷ್ಟು ಅಪಘಾತಗಳು ಸಂಭವಿಸಿದ್ದು, 145,000 ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂರುಪಟ್ಟು ಜನ ಗಾಯಾಗೊಂಡಿದ್ದಾರೆ. ಇನ್ನು 2014ರಲ್ಲಿ ಶೇ.2.5ರಷ್ಟು ಅಪಘಾತಗಳು ಸಂಭವಿಸಿತ್ತು. ಇದರಲ್ಲಿ ಬಹುತೇಕ ಅಪಘಾತಗಳು ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
2015ರಲ್ಲಿ ಸಂಭವಿಸಿದ್ದ ಶೇ. 54 ರಷ್ಟು ಅಪಘಾತದಲ್ಲಿ ಬಹುತೇಕ ಅಪಘಾತಗಳಲ್ಲಿ 15-34ನೇ ವಯಸ್ಸಿನ ಅಂತರದಲ್ಲಿರುವವರೇ ಸಾವನ್ನಪ್ಪಿರಿವುದು ಆತಂಕದ ವಿಚಾರವಾಗಿದೆ ಎಂದು ಕೇಂದ್ರ ಹೇಳಿದೆ.
ಇನ್ನು ರಸ್ತೆ ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದ ಸಂಭವಿಸುತ್ತಿರುವುದಾಗಿ ತಿಳಿದುಬಂದಿದ್ದು, ಚಾಲಕರಿಂದ ಶೇ.77.1ರಷ್ಟು ಅಪಘಾತಗಳು ಸಂಭವಿಸಿರುವುದಾಗಿ ವರದಿಗಳು ತಿಳಿಸಿವೆ. 2014ರಲ್ಲಿ ಚಾಲಕರಿಂದ ಶೇ.78.8ರಷ್ಟು ಅಪಘಾತಗಳು ಸಂಭವಿಸಿತ್ತು. ಚಾಲಕರ ಅತಿಯಾದ ವೇಗದಿಂದಾಗಿ ಶೇ.61 ರಿಂದ.62.2 ರಷ್ಟು ಅಪಘಾತಗಳು ಸಂಭವಿಸುತ್ತಿವೆ.
ಕಳೆದ ವರ್ಷದ 1,974ರಷ್ಟು ರಸ್ತೆ ಅಪಘಾತಗಳು ಸಂಭವಿಸಿದ್ದು, ಪ್ರತಿ ರಸ್ತೆಯಲ್ಲಿ ಸಂಭವಿಸಿದ್ದ ಅಂಕಿ ಅಂಶಗಳಲ್ಲಿ ಒಟ್ಟಾರೆಯಾಗಿ ಸಾವನ್ನಪ್ಪಿದ್ದವರ ಸಂಖ್ಯೆ 400ರಷ್ಟಿದೆ. ಅಪಘಾತಗಳ ಅಂಕಿಅಂಶಗಳಂತೆ ಅಧಿಕಾರಿಗಳು ಟಾಪ್ 10 ರಾಜ್ಯಗಳಿಗೆ ಸ್ಥಾನ ನೀಡಿದ್ದಾರೆ. ಇದರಂತೆ ಗರಿಷ್ಟ ಮಟ್ಟದ ಅಪಘಾತದ ಟಾಪ್ 5 ನಲ್ಲಿ ಕರ್ನಾಟಕ ಕೂಡ ಸೇರಿದ್ದು, 4ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ರಾಜ್ಯದಲ್ಲಿ 44,011ರಷ್ಟು ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳ ಪೈಕಿ ತಮಿಳುನಾಡು ಮುಂಚೂಣಿಯಲ್ಲಿದ್ದು 69,059 ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ 63,805, ಮಧ್ಯಪ್ರದೇಶ 54,947 ಮತ್ತು ಕೇರಳ 5ನೇ ಸ್ಥಾನ ಪಡೆದುಕೊಂಡಿದೆ.
ಹೆಚ್ಚು ಅಪಘಾತದ ಸಂಭವಿಸಿರುವ ನಗರಗಳ ಪೈಕಿ ಬೆಂಗಳೂರು ಕೂಡ ಟಾಪ್ 5 ಸ್ಥಾನದಲ್ಲಿದ್ದು, 5ನೇ ಸ್ಥಾನ ಪಡೆದುಕೊಂಡಿದೆ. ಮುಂಬೈ ನಗರಿ ಮೊದಲ ಸ್ಥಾನ ಪಡೆದುಕೊಂಡಿದ್ದು, ದೆಹಲಿ 2ನೇ ಸ್ಥಾನ, ಚೆನ್ನೈ ಮೂರನೇ ಸ್ಥಾನ, ಇಂದೋರ್ ಗೆ ನಾಲ್ಕನೇ ಸ್ಥಾನವನ್ನು ನೀಡಲಾಗಿದೆ. ಇದರಲ್ಲಿ ಬಹುತೇಕ ಸಂಖ್ಯೆಗಳ ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಸಂಭವಿಸಿರುವುದು ವರದಿಯಲ್ಲಿ ತಿಳಿದುಬಂದಿದೆ.
ಇನ್ನು ಅಪಘಾತದ ವರದಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಗಡ್ಕರಿ ಅವರು, ದೇಶದಲ್ಲಿ ಪ್ರತಿ ಗಂಟೆಗೆ 57 ಅಪಘಾತಗಳು ಸಂಭವಿಸಿ 17 ಜನರು ಸಾವನ್ನಪ್ಪುತ್ತಿದ್ದಾರೆ. ಸಾವನ್ನಪ್ಪಿದ್ದವರಲ್ಲಿ ಶೇ.54 ರಷ್ಟು ಮಂದಿ 15ರಿಂದ 34 ವರ್ಷದೊಳಗಿನ ಯುವಕರು ಎಂಬುದು ಅತ್ಯಂತ ನೋವು ತರುತ್ತಿರುವ ವಿಚಾರವಾಗಿದೆ ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ಚಾಲಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಚಾಲಕರಿಂದಾಗಿ ಶೇ.77.1 ರಷ್ಟು ಅಪಘಾತಗಳು ಕಳೆದ ವರ್ಷ ಸಂಭವಿಸಿದೆ. ಇನ್ನು ಇಂಜಿನಿಯರ್ ಗಳ ತಪ್ಪುಗಳು ಎದ್ದು ಕಾಣುತ್ತಿದ್ದು, ರಸ್ತೆ ನಿರ್ಮಾಣ ಕಾರ್ಯದಲ್ಲಿ ಅವರು ಮಾಡಿರುವ ತಪ್ಪುಗಳಿಂದಾಗಿ ಬಹುತೇಕ ಅಪಘಾತಗಳು ಸಂಭವಿಸಿವೆ.
ಯುದ್ಧ ಅಥವಾ ಸಾಂಕ್ರಾಮಿಕ ರೋಗಳಿಂದಳೂ ದೇಶದಲ್ಲಿ ಇಷ್ಟೊಂದು ಪ್ರಮಾಣದ ಜನ ಸಾವನ್ನಪ್ಪುವುದಿಲ್ಲ. ರಸ್ತೆಗಳಲ್ಲಿ ಸ್ಥಿತಿ ಸುಧಾರೆಣೆಗೆ ಕಳೆದ 2 ವರ್ಷಗಳಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದೆರೆ, ಇವು ಫಲಕೊಟ್ಟಿಲ್ಲ ಎಂದು ಬೇಸರ ಸಂಗತಿ. ಆದರೆ, ನಮ್ಮ ಪ್ರಯತ್ನವನ್ನು ನಾವು ಮುಂದುವರೆಸುತ್ತೇವೆ. 2020ರ ವೇಳೆಗೆ ಶೇ.50ರಷ್ಟು ಅಪಘಾತ ಸಂಖ್ಯೆ ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


