ಚೀನಾ ಮಿಲಿಟರಿ ವಿಸ್ತರಣಾವಾದಕ್ಕೆ ಪ್ರತಿತಂತ್ರ: ಭಾರತದಿಂದ ಕ್ರೂಸ್ ಕ್ಷಿಪಣಿ ಮಾರಾಟ ಮಾರುಕಟ್ಟೆ ವಿಸ್ತರಣೆ
ವಿಯೆಟ್ನಾಂ ಸೇರಿದಂತೆ ಕನಿಷ್ಠ 15 ರಾಷ್ಟ್ರಗಳಿಗೆ ಬ್ರಹ್ಮೋಸ್ ಸೇರಿದಂತೆ ಕ್ರೂಸ್ ಕ್ಷಿಪಣಿಗಳನ್ನು ಮಾರಾಟ ಮಾಡಲು ಭಾರತ ಸರ್ಕಾರ ಚಿಂತನೆ ನಡೆಸಿದೆ.

ನವದೆಹಲಿ: ಚೀನಾದ ಮಿಲಿಟರಿ ವಿಸ್ತರಣಾವಾದಕ್ಕೆ ಅಂಕುಶ ಹಾಕಲು ಭಾರತ ಮುಂದಾಗಿದ್ದು ವಿಯೆಟ್ನಾಂ ಸೇರಿದಂತೆ ಕನಿಷ್ಠ 15 ರಾಷ್ಟ್ರಗಳಿಗೆ ಬ್ರಹ್ಮೋಸ್ ಸೇರಿದಂತೆ ಕ್ರೂಸ್ ಕ್ಷಿಪಣಿಗಳನ್ನು ಮಾರಾಟ ಮಾಡಲು ಭಾರತ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ವಿದೇಶಗಳಲ್ಲಿ ತನ್ನ ಮಿಲಿಟರಿ ಉತ್ಪನ್ನಗಳ ಮಾರಾಟ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಭಾರತದ್ದಾಗಿದೆ.
ರಷ್ಯಾ-ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸೂಪರ್ ಸೋನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಮಾರಾಟ ಮಾಡುವುದರಿಂದ ವಿದೇಶಗಳೊಂದಿಗೆ ರಕ್ಷಣಾ ಸಂಬಂಧ ಸುಧಾರಣೆ ಜೊತೆಜೊತೆಗೇ ಆದಾಯ ಗಳಿಸುವುದು ಈ ಯೋಜನೆಯ ಗುರಿಯಾಗಿದ್ದರೆ, ಹಿಂದುಮಹಾಸಾಗರದ ಪ್ರದೇಶದಲ್ಲಿ ನೌಕಾ ಪಡೆ, ಮಿಲಿಟರಿ ಕ್ಷೇತ್ರದಲ್ಲಿ ಚೀನಾದ ವಿಸ್ತರಣಾವಾದವನ್ನು ತಡೆಗಟ್ಟುವುದೂ ಈ ಯೋಜನೆಗಳ ಉದ್ದೇಶಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
2011 ನಿಂದಲೂ ವಿಯೆಟ್ನಾಂ ಬ್ರಹ್ಮೋಸ್ ಕ್ಷಿಪಣಿ ಖರೀದಿಗಾಗಿ ಬೇಡಿಕೆ ಇಡುತ್ತಿತ್ತು. ಆದರೆ ಭಾರತ ವಿಯೆಟ್ನಾಂ ಗೆ ಬ್ರಹ್ಮೋಸ್ ಕ್ಷಿಪಣಿ ಮಾರಾಟ ಮಾಡಿದರೆ ಅದು ಚೀನಾವನ್ನು ಕೆರಳಿಸಲಿದ್ದು ಭಾರತ-ಚೀನಾದ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕಾಗಿ ಈ ಬೇಡಿಕೆಯನ್ನು ಭಾರತ ಮುಂದೂಡುತ್ತಿತ್ತು. ಆದರೆ ಈಗ, ವಿಯೆಟ್ನಾಂ, ಇಂಡೋನೇಷಿಯಾ, ದಕ್ಷಿಣ ಆಫ್ರಿಕಾ, ಚಿಲಿ, ಬ್ರೆಜಿಲ್ ಸೇರಿದಂತೆ 15 ರಾಷ್ಟ್ರಗಳಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡುವುದಕ್ಕೆ ಸಹಕಾರಿಯಾಗುವಂತೆ ಬ್ರಹ್ಮೋಸ್ ಕ್ಷಿಪಣಿಯ ಮಾರಾಟವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸೂಚನೆ ನೀಡಿದೆ ಎಂದು ರಾಯಟರ್ಸ್ ವರದಿ ಮಾಡಿದೆ.
ಎರಡು ಹಂತಗಳಲ್ಲಿ 15 ರಾಷ್ಟ್ರಗಳಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡುವ ಯೋಜನೆ ಹೊಂದಿದ್ದು, ಮೊದಲ ಪಟ್ಟಿಯಲ್ಲಿ ವಿಯೆಟ್ನಾಂ ಇಂಡೋನೇಷಿಯಾ, ದಕ್ಷಿಣ ಆಫ್ರಿಕಾ, ಚಿಲಿ, ಬ್ರೆಜಿಲ್ ಇದ್ದರೆ, ಎರಡನೇ ಪಟ್ಟಿಯಲ್ಲಿ ಫಿಲಿಪೀನ್ಸ್, ಮಲೇಷ್ಯಾ, ಯುಎಇ, ಥಾಯ್ಲೆಂಡ್ ಸೇರಿದಂತೆ 11 ರಾಷ್ಟ್ರಗಳಿವೆ.
ಚೀನಾ ವಿಸ್ತರಣಾವಾದಕ್ಕೆ ಅಂಕುಶ
ಜಾಗತಿಕವಾಗಿ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಬಹುತೇಕ ಭಾಗವನ್ನು ಚೀನಾ ತನ್ನದೆಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ, ಫಿಲಿಪೀನ್ಸ್ ಹಾಗೂ ಮಲೇಷ್ಯಾ ಗಳೊಂದಿಗೆ ವಿವಾದ ಎದುರಿಸುತ್ತಿದೆ. ಆದರೆ ದಕ್ಷಿಣ ಚೀನಾ ಸಮುದ್ರ ಪ್ರದೇಶದ ವಿವಾದದಲ್ಲಿ ಭಾರತ ಯಾವುದೇ ವಿವಾದ ಹೊಂದಿಲ್ಲ. ಆದರೆ ಚೀನಾದೊಂದಿಗೆ ಭೂಗಡಿಗೆ ಸಂಬಂಧಿಸಿದಂತೆ ವಿವಾದ ಎದುರಿಸುತ್ತಿದೆ ಹಾಗೂ ಹಿಂದು ಮಹಾಸಾಗರ ಪ್ರದೇಶದಲ್ಲಿ ನೌಕಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶತೃವಿನ ಶತೃ ಮಿತ್ರ ಎಂಬ ತತ್ವವನ್ನು ಪಾಲಿಸಲು ಭಾರತ ಮುಂದಾಗಿದ್ದು ಚೀನಾದ ಪ್ರಾಬಲ್ಯವನ್ನು ತಗ್ಗಿಸಲು ವಿಯೆಟ್ನಾಂ, ಮಲೇಷ್ಯಾ, ಫಿಲಿಪೀನ್ಸ್ ನೊಂದಿಗೆ ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಭಾಗವಾಗಿ ಬ್ರಹ್ಮೋಸ್ ಕ್ಷಿಪಣಿ ಮಾರಾಟಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕ ಹಾಗೂ ವಿಯೆಟ್ನಾಂ ನೊಂದಿಗೆ ರಕ್ಷಣಾ ಸಂಬಂಧಗಳನ್ನು ಭಾರತ ಉತ್ತಮಗೊಳಿಸಿಕೊಂಡರೆ ಅದು ಚೀನಾ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಅಭಿಪ್ರಾಯ ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿರುವ ಎನ್ ಡಿಎ ಸರ್ಕಾರ ರಕ್ಷಣಾ ಸಂಬಂಧಗಳನ್ನು ಉತ್ತಮಗೊಳಿಸುವುದಕ್ಕೆ ಚೀನಾ ವಿರುದ್ಧ ಇರುವ ಜಪಾನ್, ವಿಯೆಟ್ನಾಂ, ಅಮೆರಿಕ ದಂತಹ ರಾಷ್ಟ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರಿಂದ ಚೀನಾದ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಅನುಕೂಲವಾಗಲಿದ್ದು ಭಾರತ- ಚೀನಾದ ನಡುವೆ ಪರಿಣಾಮಕಾರಿ ಮಾತುಕತೆ ನಡೆಯಲು ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


