ದೇಶ

ಅತ್ಯಾಚಾರ ಆರೋಪಿಗೆ ಸಾರ್ವಜನಿಕವಾಗಿ "ಚಪ್ಪಲಿ ಸೇವೆ" ಮಾಡಿದ ತೃಪ್ತಿ ದೇಸಾಯಿ

ಮದುವೆಯಾಗುವುದಾಗಿ ಹೇಳಿ ಯುವತಿ ಮೇಲೆ ಅತ್ಯಾಚಾರ ಗೈದು ಬಳಿಕ ಆಕೆಗೆ ಮೋಸ ಮಾಡಲು ಯತ್ನಿಸಿದ ಆರೋಪಿಯೋರ್ವನಿಗೆ ಭೂಮಾತಾ ಬ್ರಿಗೇಡ್ ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಸಾರ್ವಜನಿಕ ಚಪ್ಪಲಿ ಸೇವೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಅತ್ಯಾಚಾರ ಆರೋಪಿಗೆ ಸಾರ್ವಜನಿಕವಾಗಿ "ಚಪ್ಪಲಿ ಸೇವೆ" ಮಾಡಿದ ತೃಪ್ತಿ ದೇಸಾಯಿ
ಯುವಕನಿಗೆ ಚಪ್ಪಲಿಯಿಂದ ಥಳಿಸುತ್ತಿರುವ ತೃಪ್ತಿ ದೇಸಾಯಿ (ಟ್ವಿಟರ್ ಚಿತ್ರ)
Published On :

ಪುಣೆ: ಮದುವೆಯಾಗುವುದಾಗಿ ಹೇಳಿ ಯುವತಿ ಮೇಲೆ ಅತ್ಯಾಚಾರ ಗೈದು ಬಳಿಕ ಆಕೆಗೆ ಮೋಸ ಮಾಡಲು ಯತ್ನಿಸಿದ ಆರೋಪಿಯೋರ್ವನಿಗೆ ಭೂಮಾತಾ ಬ್ರಿಗೇಡ್ ಸಂಘಟನೆಯ ಸಾಮಾಜಿಕ  ಕಾರ್ಯಕರ್ತೆ ತೃಪ್ತಿ ದೇಸಾಯಿ ಸಾರ್ವಜನಿಕ ಚಪ್ಪಲಿ ಸೇವೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ಹಿಂದೆ ಶನಿ ಸಿಂಗಣಾಪುರ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಸುದ್ದಿಗೆ ಗ್ರಾಸವಾಗಿದ್ದ ತೃಪ್ತಿ ದೇಸಾಯಿ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಯುವತಿಗೆ  ಮೋಸ ಮಾಡಿ ಗರ್ಭಪಾತಕ್ಕೆ ಮುಂದಾಗಿದ್ದ 25 ವರ್ಷದ ಯುವಕನನ್ನು ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುವ ದುಷ್ಕರ್ಮಿಗಳಿಗೆ ಇದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಪುಣೆ ಸಮೀಪದ ಗ್ರಾಮವೊಂದರಲ್ಲಿ 24 ವರ್ಷದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ಹೇಳಿ ಆಕೆ ಗರ್ಭಿಣಿಯಾಗುವಂತೆ ಮಾಡಿ ಗರ್ಭಪಾತ ಮಾಡಿಸಲು ಮುಂದಾಗಿದ್ದ  ದುಷ್ಕರ್ಮಿಯೋರ್ವನನ್ನು ಹಿಡಿದು ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಲಾಗಿದೆ. ಆರೋಪಿ ಯುವಕನನ್ನು 25 ವರ್ಷದ ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಆತನನ್ನು ಪೊಲೀಸರ  ವಶಕ್ಕೆ ನೀಡಲಾಗಿದೆ. ಇದೇ ವೇಳೆ ಶ್ರೀಕಾಂತ್ ಯುವತಿಗೆ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಲು ಮುಂದಾಗಿದ್ದ ಎಂದೂ ಆರೋಪಿಸಲಾಗಿದೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಭೂಮಾತಾ ಬ್ರಿಗೇಡ್ ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಮತ್ತು ಸಂಘಟನೆಯ ಮತ್ತೋರ್ವ ಸದಸ್ಯೆ ವ್ಯಕ್ತಿಗೆ ಚಪ್ಪಲಿಯಿಂದ  ಹೊಡೆಯುತ್ತಿರುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಶೇರ್ ಮಾಡಿರುವ ತೃಪ್ತಿ ದೇಸಾಯಿ, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಆರಂಭದಲ್ಲಿ ನಾನು ಆ ಯುವತಿಯನ್ನು  ಮದುವೆಯಾಗುವಂತೆ ಯುವಕ ಮತ್ತು ಆತನ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಅಲ್ಲದೆ ಸಂತ್ರಸ್ತ ಯುವತಿಗೆ ಹಣ ನೀಡುವುದಾಗಿ ಹೇಳಿ ಪ್ರಕರಣದಿಂದ  ನುಣುಚಿಕೊಳ್ಳಲು ಯತ್ನಿಸಿದರು. ಹೀಗಾಗಿ ಅವರ ವಿರುದ್ಧ ಸಿಟ್ಟು ಬಂದು ಹೀಗೆ ಮಾಡಿದೆ. ಈ ಘಟನೆ ಎಲ್ಲ ಅತ್ಯಾಚಾರಿಗಳಿಗೆ ಪಾಠವಾಗಬೇಕು. ಎಲ್ಲರೂ ನೋಡುತ್ತಿದ್ದಂತೆಯೇ ಅತ್ಯಾಚಾರಿಗೆ  ಥಳಿಸಿದರೆ, ಮತ್ತೋರ್ವ ಅತ್ಯಾಚಾರಿ ಹೆದರುತ್ತಾನೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ತಾವು ಕಾನೂನು ಕೈಗೆತ್ತಿಕೊಳ್ಳಲು ಸಿದ್ಧ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.