ದೇಶ

ಸಂಸತ್ ಭದ್ರತಾ ತಪಾಸಣಾ ಪ್ರಕ್ರಿಯೆ ವಿಡಿಯೋ; ಲೋಕಸಭೆಯಲ್ಲಿ ಕೋಲಾಹಲ

2001ರಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ಸಂಸತ್ ಭವನದಲ್ಲಿ ಭದ್ರತಾ ತಪಾಸಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ ಆಪ್ ಸಂಸದ..

ಸಂಸತ್ ಭದ್ರತಾ ತಪಾಸಣಾ ಪ್ರಕ್ರಿಯೆ ವಿಡಿಯೋ; ಲೋಕಸಭೆಯಲ್ಲಿ ಕೋಲಾಹಲ
ಲೋಕಸಭೆ ಕಲಾಪ (ಸಂಗ್ರಹ ಚಿತ್ರ)
Published On :

ನವದೆಹಲಿ: 2001ರಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ಸಂಸತ್ ಭವನದಲ್ಲಿ ಭದ್ರತಾ ತಪಾಸಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ  ಹರಿಬಿಟ್ಟಿದ್ದ ಆಪ್ ಸಂಸದ ಇದೀಗ ವಿವಾದಕ್ಕೀಡಾಗಿದ್ದು, ವಿಡಿಯೋ ಮಾಡಿದ ಪ್ರಕರಣ ಇದೀಗ ಸಂಸತ್ ಕಲಾಪಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪರಿಸಿದ ಬಿಜೆಪಿ ಸಂಸದ ಸೋಮಯ್ಯ ಅವರು, ವಿಡಿಯೋ ಮಾಡಿದ ಆಪ್ ಸಂಸದ ಭಗವಂತ ಮಾನ್ ರನ್ನು ಉಚ್ಛಾಟನೆ ಮಾಡಬೇಕು ಎಂದು  ಆಗ್ರಹಿಸಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ಸಂಸದ ಆರ್ ಕೆ ಸಿಂಗ್ ಅವರು, ಆಪ್ ಸಂಸದರು ಮಾಡಿರುವ ವಿಡಿಯೋ ಸಂಸತ್ ನ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ  ಪ್ರಶ್ನೆಯನ್ನು ಹಾಕಿದ್ದು, ಈ ಬಗ್ಗೆ ಕಠಿಣ ನಿಲುವು ತಳೆಯುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇನ್ನು ಅಕಾಲಿದಳ ಸಂಸದ ನರೇಶ್ ಗುಜರಾಲ್ ಅವರು ಮಾತನಾಡಿ ವಿಡಿಯೋ ಅಸಂಬದ್ಧ ನಡೆ ಎಂದು ಟೀಕಿಸಿದ್ದಾರೆ. ಬಳಿಕ ಸಭೆಯಲ್ಲಿ ಮಾತನಾಡಿದ ವಿಡಿಯೋ ಮಾಡಿದ ಆಪ್ ಸಂಸದ  ಭಗವಂತ್ ಮಾನ್, ತಾವು ಭದ್ರತಾ ಲೋಪದೋಷಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದ್ದೇನೆ ಅಷ್ಟೇ. ಇದು ತಪ್ಪು ಎಂದು ಸ್ಪೀಕರ್ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದರೆ ಖಂಡಿತಾ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಸದಸ್ಯರ ಚರ್ಚೆ ಬಳಿಕ ಮಾತನಾಡಿದ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, 2001ರ ಸಂಸತ್ ದಾಳಿಯಲ್ಲಿ 13 ಮಂದಿ ಸತ್ತ ಘಟನೆ ಇನ್ನೂ ನಮ್ಮ ಕಣ್ಣಮುಂದೆ ಹಾಗೆಯೇ ಇದೆ.  ವಿಚಾರ ತುಂಬಾ ಗಂಭೀರವಾದದ್ದು ಎಂದು ನನಗೆ ತಿಳಿದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಸದನದ ಶಿಷ್ಟಾಚಾರವನ್ನು ಎಲ್ಲ ಸಂಸದರೂ ಪಾಲಿಸಬೇಕು ಎಂದು  ಹೇಳಿರುವ ಅವರು ಸಂಸತ್ ನ ಶಿಷ್ಟಾಚಾರ ಮೀರಿದ್ದಕ್ಕಾಗಿ ಭಗವಂತ್ ಮಾನ್ ಅವರಿಗೆ ನೋಟಿಸ್ ನೀಡಿ, ಕಲಾಪವನ್ನು ಮುಂದೂಡಿದ್ದಾರೆ.

ನಿನ್ನೆಯಷ್ಟೇ ಆಪ್ ಸಂಸದ ಭಗವಂತ್ ಮಾನ್ ಅವರು ಸಂಸತ್‌ ಭವನದಲ್ಲಿನ ಭದ್ರತಾ ತಪಾಸಣೆ ಹೇಗಿರುತ್ತದೆ ಎಂಬ ಬಗ್ಗೆ ವಿವರಿಸಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಕ್ಕೆ  ಹರಿಬಿಟ್ಟಿದ್ದರು. ವಿಡಿಯೋದಲ್ಲಿ ಮನೆಯಿಂದ ಸಂಸತ್‌ನ ಒಳಗೆ ಬರುವವರೆಗೂ ವಿಧಿಸಿರುವ ನಿಯಮಾವಳಿಯನ್ನು ಮಾನ್ ವಿವರಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ನಾಳೆಯೂ ಇದೇ ರೀತಿ  ವಿಡಿಯೋ ಮಾಡಿ ಪ್ರಕಟಿಸುತ್ತೇನೆ ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.