ರಾಹುಲ್ ಗಾಂಧಿ ಸದನದಲ್ಲಿ ನಿದ್ದೆ ಮಾಡಲಿಲ್ಲ: ಕಾಂಗ್ರೆಸ್ ಸಮರ್ಥನೆ
ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ...

Published On :
ನವದೆಹಲಿ: ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಗಂಭೀರವಾದ ಚರ್ಚೆ ನಡೆಯುತ್ತಿರುವಾಗ ರಾಹುಲ್ ಗಾಂಧಿ ನಿದ್ದೆ ಮಾಡುತ್ತಿದ್ದರು ಎಂಬ ಟೀಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಟಿವಿ ಮಾಧ್ಯಮಗಳಲ್ಲಿ ಇಂದು ರಾಹುಲ್ ಗಾಂಧಿ ಬೆಳಗಿನ ಕಲಾಪದ ವೇಳೆ ತಲೆ ಬಗ್ಗಿಸಿಕೊಂಡು ಕಣ್ಣು ಮುಚ್ಚಿದ ಸ್ಥಿತಿಯನ್ನು ತೋರಿಸುತ್ತಿತ್ತು. ಮಾಧ್ಯಮಗಳು ರಾಹುಲ್ ಗಾಂಧಿ ನಿದ್ದೆ ಮಾಡುತ್ತಿದ್ದರು ಎಂದು ಹೇಳಿದರೆ ಕಾಂಗ್ರೆಸ್ ನಾಯಕರು ತಮ್ಮ ನಾಯಕನ ಪರ ಮಾತನಾಡಿದ್ದಾರೆ.
ಅವರು ಮೊಬೈಲ್ ನಲ್ಲಿ ಮೆಸೇಜ್ ಚೆಕ್ ಮಾಡುತ್ತಿದ್ದರು. ಮೊಬೈಲ್ ಚೆಕ್ ಮಾಡುವುದು ಅಪರಾಧವಲ್ಲ ಎಂದಿದ್ದಾರೆ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ.
ಇನ್ನು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹವಾಮಾನವನ್ನು ದೂರಿದ್ದಾರೆ. ಹೊರಗೆ ಬಿಸಿಲು ಇದೆ. ಹಾಗಿರುವಾಗ ಸಂಸತ್ತಿನ ಒಳಗೆ ಹೋದವರು ಹವಾ ನಿಯಂತ್ರಿತ ಕೊಠಡಿಯೊಳಗೆ ಕಣ್ಣುಮುಚ್ಚಿ ರಿಲ್ಯಾಕ್ಸ್ ಮಾಡಿಕೊಳ್ಳೋಣ ಎನಿಸುತ್ತದೆ. ಸದನದ ಒಳಗೆ ಆ ಗಲಾಟೆ ಮಧ್ಯೆ ಯಾರಿಗಾದರೂ ನಿದ್ದೆ ಬರುತ್ತದೆಯೇ? ಖಂಡಿತಾ ಸಾಧ್ಯವಿಲ್ಲ ಎಂದು ರೇಣುಕಾ ಚೌಧರಿ ಹೇಳಿದರು.
2014ರಲ್ಲಿ ಕೂಡ ಇದೇ ರೀತಿ ರಾಹುಲ್ ಗಾಂಧಿ ನಿದ್ದೆ ಮಾಡುವ ಭಂಗಿಯಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಆಗ ಅಗತ್ಯ ವಸ್ತುಗಳ ಬೆಲೆಯೇರಿಕೆ, ಹಣದುಬ್ಬರ ಕುರಿತು ಸದನದಲ್ಲಿ ಚರ್ಚೆಯಾಗುತ್ತಿತ್ತು.
ಇನ್ನು ಕಾಂಗ್ರೆಸ್ ಬೆಂಬಲಿಗ ಮತ್ತು ಅಂಕಣಕಾರ ತೆಹ್ಸೀನ್ ಪೂನವಲ್ಲ ಟ್ವೀಟ್ ಮಾಡಿ, ''ಮಾಧ್ಯಮ ಮತ್ತು ಬಿಜೆಪಿ ಮಿತ್ರರೇ, ರಾಹುಲ್ ಗಾಂಧಿಯವರು ಧ್ಯಾನ ಮಾಡುತ್ತಿದ್ದರು. ಸದನದಲ್ಲಿ ಸ್ಪೀಕರ್ ಮಾತನ್ನು ಸರಿಯಾಗಿ ಕೇಳಲು ಇರುವ ಉತ್ತಮ ಮಾರ್ಗವೆಂದರೆ ಕಣ್ಣುಗಳನ್ನು ಮುಚ್ಚಿ ಉಸಿರಾಡಿ ನಂತರ ಕೇಳಿಸಿಕೊಳ್ಳುವುದು, ರಾಹುಲ್ ಗಾಂಧಿಯವರು ಅದನ್ನು ಮಾಡಿದ್ದಾರೆ'' ಎಂದಿದ್ದಾರೆ.
ಉತ್ತರ ಪ್ರದೇಶದ ಮಾಡಿ ಮುಖ್ಯಮಂತ್ರಿ, ಬಿಎಸ್ ಪಿ ನಾಯಕಿ ಮಾಯಾವತಿ ಮಾತ್ರ ಟೀಕಿಸಿದ್ದಾರೆ. ರಾಹುಲ್ ಗಾಂಧಿಯವರು ಹಗುರವಾಗಿ ಅಲ್ಪನಿದ್ರೆ ಮಾಡುತ್ತಿದ್ದರು. ಕೆಳಜಾತಿಯ ರಕ್ಷಣೆಗೆ ಹೋರಾಡುವಲ್ಲಿ ಪಕ್ಷದ ನಿರಾಸಕ್ತಿಯನ್ನು ಇದು ತೋರಿಸುತ್ತದೆ.
ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಆ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಆ ವಿಷಯವನ್ನು ಸದನದಲ್ಲಿ ಎತ್ತುವಲ್ಲಿ ವಿಫಲವಾಗಿದೆ. ತಾವು ಸಂಸತ್ತಿನಲ್ಲಿ ಆ ವಿಷಯವನ್ನು ಎತ್ತಿದ ಬಳಿಕವಷ್ಟೇ ಕಾಂಗ್ರೆಸ್ ಜಾಗೃತವಾಗಿದ್ದು ಎಂದು ಅವರು ಸಾರಿದರು.
ದಲಿತರ ಮೇಲೆ ಹಲ್ಲೆ ನಡೆದ ಗುಜರಾತ್ ನ ಉನಾ ಪ್ರದೇಶಕ್ಕೆ ರಾಹುಲ್ ಗಾಂಧಿ ನಾಳೆ ಭೇಟಿ ನೀಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅವರು ನಿದ್ರೆಗೆ ಜಾರಿದ್ದು ಎಲ್ಲರನ್ನೂ ಅಚ್ಚರಿಯುಂಟುಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


