ದೇಶ

ಗಂಗಾ ಶುದ್ಧಿ ಯೋಜನೆ: ನದಿ ದಡದ 150 ಕಾರ್ಖಾನೆಗಳು ಬಂದ್

ಸರ್ಕಾರದ ನಿರ್ದೇಶನವಿದ್ದರೂ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳದ ಹಿನ್ನಲೆಯಲ್ಲಿ ಗಂಗಾ ನದಿ ದಡದ ಸುಮಾರು 150 ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ...

ಗಂಗಾ ಶುದ್ಧಿ ಯೋಜನೆ: ನದಿ ದಡದ 150 ಕಾರ್ಖಾನೆಗಳು ಬಂದ್
ಗಂಗಾನದಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಸರ್ಕಾರದ ನಿರ್ದೇಶನವಿದ್ದರೂ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳದ ಹಿನ್ನಲೆಯಲ್ಲಿ ಗಂಗಾ ನದಿ ದಡದ ಸುಮಾರು 150 ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಬಂದ್  ಮಾಡಿದೆ.

ಹಲವು ಟೀಕೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೊಜನೆಯಾದ ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ನದಿ ತಟದಲ್ಲಿ  ತ್ಯಾಜ್ಯಜಲವನ್ನು ನದಿಗೆ ಬಿಡುತ್ತಿದ್ದ ಸುಮಾರು 150 ಕಾರ್ಖಾನೆಗಳನ್ನು ಮುಚ್ಚಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಪ್ರಕಾಶ್  ಜವಡೇಕರ್ ಅವರು, ಗಂಗಾನದಿ ತಟದಲ್ಲಿ ಸುಮಾರು 764 ಕಾರ್ಖಾನೆಗಳು ತ್ಯಾಜ್ಯಜಲವನ್ನು ನದಿಗೆ ಬಿಡುಗಡೆ ಮಾಡುತ್ತಿವೆ. ಈ ಪೈಕಿ, 514 ಕಾರ್ಖಾನೆಗಳು ಕೇಂದ್ರ ಸರ್ಕಾರದ ನಿರ್ದೇಶನದ  ಹಿನ್ನಲೆಯಲ್ಲಿ ನಿರಂತರ ಆನ್ ಲೈನ್ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆ (Online Continuous Effluent Monitoring System)ಯನ್ನು ಅಳವಡಿಸಿಕೊಂಡಿದೆ. 94 ಕಾರ್ಖಾನೆಗಳು ಈ  OCEMS ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ತಿಳಿಸಿದರು.

ಹೊಸ ನಿರಂತರ ಆನ್ ಲೈನ್ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆಯಿಂದಾಗಿ ನದಿ ಪಾತ್ರದ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮಾಲೀನ್ಯತೆ ಕುಸಿದಿದ್ದು, ನದಿಗೆ ಸೇರುತ್ತಿದ್ದ ಒಳಚರಂಡಿ  ನೀರನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಗಂಗಾನದಿ ಸ್ವಚ್ಛತೆಗಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಇಲಾಖೆ ಸಕ್ಕರೆ, ಪೇಪರ್ ಮತ್ತು ಪಲ್ಪ್,  ಡಿಸ್ಟಿಲರಿ, ಟೆಕ್ಸ್ ಟೈಲ್ ಮತ್ತು  ಒಳಚರಂಡಿ ಎಂಬ ಐದು ಪ್ರಮುಖ ಕೈಗಾರಿಕಾ ಕ್ಷೇತ್ರಗಳನ್ನು ವಿಭಜಿಸಿದೆ. ನದಿಗೆ ಬಿಡಲಾಗುವ ತ್ಯಾಜ್ಯ ಜಲ ಮತ್ತು ಜೈವಿಕ ತ್ಯಾಜ್ಯಗಳನ್ನು ನಿಯಂತ್ರಿಸುವುದೇ  ಈ ಯೋಜನೆಯ ಉದ್ದೇಶವಾಗಿದೆ.ಆನ್ ಲೈನ್ ವೀಕ್ಷಣಾ ವ್ಯವಸ್ಥೆಯಿಂದಾಗಿ ಇದನ್ನು ಪರಿಣಾಮಕಾರಿಯಾಗಿ ಮಾಡಬಹುದು. ಈ ವ್ಯವಸ್ಥೆಯಿಂದಾ ಕಾಲಕಾಲಕ್ಕೆ ಕಾರ್ಖಾನೆಗಳು ಬಿಡುತ್ತಿರುವ  ತ್ಯಾಜ್ಯಜಲದ ಪ್ರಮಾಣವನ್ನು ನಿಖರವಾಗಿ ಕಂಡುಹಿಡಿಯಬಹುದು ಎಂದು ಜವಡೇಕರ್ ತಿಳಿಸಿದರು.

ಇನ್ನು ಕೇಂದ್ರ ಪರಿಸರ ಇಲಾಖೆ ಗುರುತಿಸಿರುವಂತೆ 764 ಕಾರ್ಖಾನೆಗಳು ಯಥೇಚ್ಛ ಪ್ರಮಾಣದಲ್ಲಿ ಅಂದರೆ ಪ್ರತಿನಿತ್ಯ ಸುಮಾರು 501 ಮಿಲಿಯನ್ ಲೀಟರ್ ತ್ಯಾಜ್ಯಜಲವನ್ನು ಗಂಗಾ ನದಿ ಮತ್ತು  ಅದರ ಇತರೆ ಉಪನದಿಗಳಿಗೆ ಬಿಡುತ್ತಿವೆ. ಈ 764 ಕಾರ್ಖಾನೆಗಳ ಪೈಕಿ 687 ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿದ್ದು, 42 ಕಾರ್ಖಾನೆಗಳು ಉತ್ತರಾಖಂಡ ರಾಜ್ಯದಲ್ಲಿವೆ. 594 ಕಾರ್ಖಾನೆಗಳು  ಗಂಗಾ ನದಿಯ ಮುಖ್ಯ ಮಾರ್ಗದಲ್ಲಿಯೇ ಇದ್ದು, ಸರ್ಕಾರಕ್ಕೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಈ ಕಾರ್ಖಾನೆಗಳು ಪ್ರತಿನಿತ್ಯ ಸುಮಾರು 125 ಮಿಲಿಯನ್ ತ್ಯಾಜ್ಯಜಲವನ್ನು ನದಿಗೆ ಬಿಡುತ್ತಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.