"ಹಿಂದೂಸ್ತಾನ ತುಂಡು-ತುಂಡಾಗುತ್ತದೆ" ಘೋಷಣೆ ಕೂಗಿದ್ದು ಹೊರಗಿನವರು..!
ಇಡೀ ದೇಶಾದ್ಯಂತ ತೀವ್ರ ಚರ್ಚೆಗೀಡಾಗುತ್ತಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಹೊರಗಿನವರ ಕೈವಾಡ ಕುರಿತು ಶಂಕೆವ್ಯಕ್ತವಾಗುತ್ತಿದೆ.

ನವದೆಹಲಿ: ಇಡೀ ದೇಶಾದ್ಯಂತ ತೀವ್ರ ಚರ್ಚೆಗೀಡಾಗುತ್ತಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಹೊರಗಿನವರ ಕೈವಾಡ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ಫೆಬ್ರವರಿ 9ರಂದು ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದು ವಿದ್ಯಾರ್ಥಿಗಳಲ್ಲ. ಬದಲಿಗೆ ವಿಶ್ವವಿದ್ಯಾಲಯಕ್ಕೆ ಸಂಬಂಧಪಡದ ಹೊರಗಿನವರು ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಷೀದ್ ಹೇಳಿದ್ದಾರೆ. ದೂರವಾಣಿ ಮೂಲಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಘಟನೆ ವೇಳೆ ಕೆಲ ಅನಾಮಿಕ ವ್ಯಕ್ತಿಗಳು ತಡೆಗೋಡೆಯನ್ನು ಜಖಂಗೊಳಿಸಿ ವಿವಿ ಆವರಣ ಪ್ರವೇಶಿಸಿ ಅಲ್ಲಿ ದೇಶ ದ್ರೋಹ ಘೋಷಣೆಗಳನ್ನು ಕೂಗಿದರು ಎಂದು ಹೇಳಿದ್ದಾರೆ.
"ಜೆಎನ್ ಯು ವಿವಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳಿಗೂ ಮತ್ತು ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪೊಲೀಸ್ ತಡೆಗೋಡೆಯನ್ನು ಬೇಧಿಸಿ ಬಂದ ಕೆಲ ಅನಾಮಿಕರು "ಹಿಂದೂಸ್ತಾನ ತುಂಡುತುಂಡಾಗುತ್ತದೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಸಂಘಟನೆಯ ಕಾರ್ಯಕರ್ತರ ಆಕ್ರೋಶ ಕೂಡ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಶೆಹ್ಲಾ ರಷೀದ್ ಹೇಳಿದ್ದಾರೆ.
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಆಡಳಿತ ವಿಷಯದಲ್ಲಿ ಎಂಫಿಲ್ ಪದವಿ ವ್ಯಾಸಂಗ ಮಾಡುತ್ತಿರುವ ಶೆಹ್ಲಾ ರಷೀದ್ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಉಪಾಧ್ಯಕ್ಷರಾಗಿದ್ದಾರೆ. ಮೂಲತಃ ಕಾಶ್ಮೀರ ಮೂಲದವರಾದ ಅವರು ಫೆಬ್ರವರಿ 9ರಂದು ನಡೆದ ಘಟನೆ ವೇಳೆ ಸ್ಥಳದಲ್ಲಿಯೇ ಇದ್ದೆ ಎಂದು ಹೇಳಿಕೊಂಡಿದ್ದಾರೆ. "ನಿಜವಾಗಿ ಆ ಕಾರ್ಯಕ್ರಮವೊಂದು ಸಾಂಸ್ಕೃತಿಕ, ಕಲೆ ಮತ್ತು ಸಾಹಿತ್ಯಿಕ ಕಾರ್ಯಕ್ರಮವಾಗಿತ್ತು. " ಏ ಕಂಟ್ರಿ ವಿತೌಟ್ ಎ ಪೋಸ್ಚ್ ಆಫೀಸ್" ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ಸರ್ಕಾರದ ಕ್ರಮಗಳನ್ನು ಪಂದ್ಯಗಳ ಮೂಲಕ, ಹಾಡುಗಾರಿಕೆ ಮೂಲಕ, ಸಾಹಿತ್ಯದ ಮೂಲಕ ಮತ್ತು ಚರ್ಚೆಗಳ ಮೂಲಕ ವಿರೋಧಿಸುವುದು ನಮ್ಮ ಉದ್ದೇಶವಾಗಿತ್ತು. ಇದೇ ರೀತಿಯ ಪೋಸ್ಟರ್ ಗಳನ್ನು ನಾವು ಅಲ್ಲಿ ಸಿದ್ಧಪಡಿಸಿದ್ದೆವು. ಪೋಸ್ಟರ್ ಗಳಲ್ಲಿ ನಾವು ಯಾವುದೇ ನಿರ್ದಿಷ್ಟ ಸಂಘಟನೆಯ ಹೆಸರುಗಳನ್ನು ಹಾಕಿಸಿರಲಿಲ್ಲ. ಬದಲಿಗೆ ಉಮರ್ ಖಲೀದ್ ಸೇರಿದಂತೆ 10 ವಿದ್ಯಾರ್ಥಿ ಮುಖಂಡರ ಹೆಸರುಗಳನ್ನು ಹಾಕಿಸಿದ್ದೆವು. ಅದರಲ್ಲಿ ಕನ್ಹಯ್ಯ ಕುಮಾರ್ ಹೆಸರು ಕೂಡ ಇತ್ತು.
ನಮ್ಮ ಮತ್ತು ಕಾರ್ಯಕ್ರಮದ ಅಜೆಂಡಾ ಒಂದೇ ಆಗಿತ್ತು. ಅದು ಅಫ್ಜಲ್ ಗುರು ಮತ್ತು ಮಖ್ಬೂಲ್ ಭಟ್ ನ ನ್ಯಾಯಾಂಗ ಸಾವಿನ ಕುರಿತು ಚರ್ಚಿಸುವುದು.
ಫೆಬ್ರವರಿ 5ರ ಸಂಜೆ ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲಿದ್ದಾರೆ ಎಂಬ ಕುರಿತು ಕರೆ ಬಂದಿತ್ತು. ಹೀಗಾಗಿ ನಾನು ಕಾರ್ಯಕ್ರಮದ ಆಹ್ವಾನವಿರದಿದ್ದರೂ ಕ್ಯಾಂಪಸ್ ನಲ್ಲಿ ಯಾವುದೇ ಅಹಿತಕ ಘಟನೆ ನಡೆಯದಿರಲಿ ಎಂದು ಹೋದೆ. ಅಲ್ಲಿ ದೇಶ ವಿರೋಧಿ ಘೋಷಣೆಗಳು ಕೂಗಿದ್ದು ನಿಜ ಆದರೆ ಆ ಘೋಷಣೆಗಳನ್ನು ಕೂಗಿದ್ದು ಖಂಡಿತ ಹೊರಗಿನವರು. ಎಬಿವಿಪಿ ಕಾರ್ಯಕರ್ತರು ಬೇಕೆಂದೇ ತಮ್ಮ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತಿದ್ದರು. ಪ್ರಕರಣ ಸಂಬಂಧ ಈಗಾಗಲೇ 8 ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಮೂವರು ಜೆಎನ್ ಯು ವಿದ್ಯಾರ್ಥಿ ಸಂಘಟನೆಯವರು. ಹೀಗಾಗಿ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಯುವ ಅಗತ್ಯವಿದೆ.
ಕಾಶ್ಮೀರ ಹೇಗಿದೆ ಎಂಬುದನ್ನೇ ನೋಡದ ಕನ್ಹಯ್ಯಾ ಅವರನ್ನು ಕಾಶ್ಮೀರದೊಂದಿಗೆ ಸಂಬಂಧವಿದೆಯೇ ಎಂದು ಪ್ರಶ್ನಿಸುತ್ತಾರೆ. ಪಾಸ್ ಪೋರ್ಟ್ ಕೂಡ ಇಲ್ಲದ ಉಮರ್ ಖಲೀದ್ ಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆಯೇ ಪ್ರಶ್ನಿಸುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ. ಅವರನ್ನು ಯಾರಾದರೂ ನಿಮಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆಯೇ ಎಂದು ಪ್ರಶ್ನಿಸಿದ್ದಾರೆಯೇ ಎಂದು ಶೆಹ್ಲಾ ರಷೀದ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


