ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಸಾಯುತ್ತೇನೆ: ಸಂಜಯ್ ದತ್
ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಸಾಯುತ್ತೇನೆಂದು ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಹೇಳಿದ್ದಾರೆ...

ಮುಂಬೈ; ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಸಾಯುತ್ತೇನೆಂದು ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಹೇಳಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ 42 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಟ ಸಂಜಯ್ ದತ್ ಅವರು ಗುರುವಾರ ಬಿಡುಗಡೆಯಾಗಿದ್ದರು. ಬಿಡುಗಡೆ ನಂತರ ಮುಂಬೈನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಭಾರತೀಯನೆಂದು ಹೇಳಿಕೊಳ್ಳುವುದಕ್ಕೆ ನನಗೆ ಗೌರವವಿದೆ. ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಸಾಯುತ್ತೇನೆ ಎಂದು ಹೇಳಿದ್ದಾರೆ.
"23 ವರ್ಷಗಳಲ್ಲಿ ನಾನು ಸಾಕಷ್ಟು ಸುಖ-ದುಃಖಗಳನ್ನು ಅನುಭವಿಸಿದ್ದೇನೆ. ನನಗಿಂತ ನನ್ನ ಪತ್ನಿ ಸಾಕಷ್ಟು ನೋವನ್ನು ಅನುಭವಿಸಿದ್ದಾಳೆ. ನನ್ನ ಇಷ್ಟು ದಿನದ ಸಂಘರ್ಷಕ್ಕೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಇಂದು ನನಗೆ ಸ್ವಾತಂತ್ರ್ಯ ಸಿಕ್ಕ ದಿನವೆಂದೇ ಹೇಳಬಹುದು. ಜೈಲಿನಿಂದ ಹೊರಬಂದ ತಕ್ಷಣ ಭೂಮಿ ತಾಯಿಗೆ ನಮಸ್ಕರಿಸಿದೆ ಮತ್ತು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದೆ.
ನ್ಯಾಯಾಲಯದಲ್ಲಿ ನಾನು ಉಗ್ರವಾದಿಯಲ್ಲ ಎಂದು ತೀರ್ಮಾನಿಸಲಾಯಿತು. ನನ್ನ ತಂದೆ ಇದ್ದಿದ್ದರೆ ಬಹಳ ಸಂತೋಷ ಪಡುತ್ತಿದ್ದರು. ನ್ಯಾಯಾಲಯದ ತೀರ್ಪು ನನ್ನ ಅತ್ಯಂತ ಸಂಸತದ ಕ್ಷಣ. ನಾನು ಮುಕ್ತನಾಗಿದ್ದೇನೆಂದು ಹೇಳಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಜೈಲಿನಲ್ಲಿದ್ದಾಗ ಬಿಡುಗಡೆ ದಿನ ಹತ್ತಿರ ಬರುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿತ್ತು. 4 ದಿನ ನಿದ್ದೆಯನ್ನೇ ಮಾಡಿರಲಿಲ್ಲ. ನಿನ್ನೆ ಕೂಡ ಊಟ ಸೇರಿರಲಿಲ್ಲ ಎಂದು ದತ್ ಹೇಳಿದರು.
ಇದೇ ವೇಳೆ ತಮ್ಮ ಮುಂದಿನ ಸಿನಿ ಪ್ರಯಾಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಈಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದು, ನನ್ನ ಸಮಯವನ್ನು ಕುಟುಂಬದವರೊಂದಿಗೆ ಕಳೆಯಲು ಇಚ್ಛಿಸುತ್ತೇನೆ. ನಂತರ ಮತ್ತೆ ಸಿನಿಮಾ ರಂಗದಲ್ಲಿ ತೊಡಗಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ನಾನು ಭಯೋತ್ಪಾದಕನಲ್ಲ
ನಾನು ಭಯೋತ್ಪಾದಕನ ಕಡೆಯವನಲ್ಲ. 1993ರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ನಾನು ಬಂಧನಕ್ಕೊಳಗಾದವನಲ್ಲ. ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕರಣದಲ್ಲಿ ಟಾಡಾ ಕೇಸ್ ನಲ್ಲಿ ನನ್ನನ್ನು ಬಂಧಿಸಲಾಗಿತ್ತು. ದಯವಿಟ್ಟು ನನ್ನನ್ನು ಭಯೋತ್ಪಾದಕ ಎಂದು ಬಿಂಬಿಸಬೇಡಿ ಎಂದು ಸಂಜಯ್ ದತ್ ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


