ದೇಶ

ನೋಟು ನಿಷೇಧವನ್ನು ವಿರೋಧಿಸುತ್ತಿರುವವರು ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಸಮ: ಪ್ರಧಾನಿ ಮೋದಿ

ಸಂಸತ್ತಿನ ಚಳಿಗಾಲದ ಅಧಿವೇಶನ ಕಲಾಪವನ್ನು ನೋಟು ನಿಷೇಧ ವಿಷಯದಲ್ಲಿ ವಿರೋಧ ...

ನೋಟು ನಿಷೇಧವನ್ನು ವಿರೋಧಿಸುತ್ತಿರುವವರು ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಸಮ: ಪ್ರಧಾನಿ ಮೋದಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ
Published On :
ವಾರಾಣಸಿ: ಸಂಸತ್ತಿನ ಚಳಿಗಾಲದ ಅಧಿವೇಶನ ಕಲಾಪವನ್ನು  ನೋಟು ನಿಷೇಧ ವಿಷಯದಲ್ಲಿ ವಿರೋಧ ಪಕ್ಷಗಳು ವ್ಯರ್ಥ ಮಾಡಿದವು ಎಂದು ತೀವ್ರ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಾಕಿಸ್ತಾನ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಗಡಿಯೊಳಗೆ ಪ್ರವೇಶಿಸಲು ಬಿಡುವಂತೆ ಪ್ರತಿಪಕ್ಷಗಳು ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತವೆ ಎಂದು ಆರೋಪಿಸಿದರು.
ನೋಟುಗಳ ನಿಷೇಧ ಕಾಳ ಧನಿಕರನ್ನು ಮತ್ತು ಕೆಟ್ಟ ಉದ್ದೇಶ ಹೊಂದಿರುವವರನ್ನು ಬಹಿರಂಗಪಡಿಸುತ್ತದೆ ಎಂದರು.
ಅವರಿಂದು ಉತ್ತರ ಪ್ರದೇಶದ ವಾರಾಣಸಿಯ ಬನಾರಸ್ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ  ಕಾರ್ಯಕ್ರಮದಲ್ಲಿ ಮಾತನಾಡಿ, ನೋಟು ನಿಷೇಧದ ಸಂದರ್ಭದಲ್ಲಿ ಅದರಿಂದುಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಂಡಿಲ್ಲ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಯಾವ ರಾಜಕೀಯ ಪಕ್ಷಗಳು ಮತ್ತು ನಾಯಕರು ಭ್ರಷ್ಟ ಭ್ರಷ್ಟಾಚಾರಿಗಳು ರಕ್ಷಿಸುವ ಪ್ರಯತ್ನ ಮಾಡದಿರುವುದು ಕೆಲವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂದರು.
ಆದರೆ ಸರ್ಕಾರದ ಈ ನಿರ್ಧಾರದಿಂದ ಅನೇಕ ಕಾಳ ಧನಿಕರ ಕೆಟ್ಟ ಉದ್ದೇಶಗಳು ಹೊರಗೆ ಬಂದಿರುವುದು ನನಗೆ ಸಂತಸವನ್ನುಂಟುಮಾಡಿದೆ ಎಂದು ಹೇಳಿದರು.ನಗದುರಹಿತ ಆರ್ಥಿಕತೆ ನಮ್ಮ ದೇಶದಲ್ಲಿ ಸಾಧ್ಯವಿಲ್ಲ ಎಂಬ ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ಅವರ ಆಳ್ವಿಕೆ ಸಮಯದ ನೀರಸ ಪ್ರರಿಸ್ಥಿತಿಯನ್ನು ಆಧರಿಸಿ ತಮ್ಮ  ವರದಿ ಕಾರ್ಡನ್ನೇ ಒಪ್ಪಿಕೊಳ್ಳುತ್ತಿದ್ದಾರೆಯೇ ಅಥವಾ ಈಗಿನ ದೇಶದ ಸ್ಥಿತಿ ಬಗ್ಗೆ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆಯೇ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಅವರು ಎರಡು ಬಾರಿ ಈ ದೇಶದ ಪ್ರಧಾನಿಯಾಗಿದ್ದಲ್ಲದೆ, ಹಣಕಾಸು ಮಂತ್ರಿಯೂ ಆಗಿದ್ದರು ಎಂದರು.
ಮಾಜಿ ಅರ್ಥ ಸಚಿವ ಚಿದಂಬರಂ ಅವರು, ಈ ದೇಶದಲ್ಲಿ ಆನ್ ಲೈನ್ ವಹಿವಾಟು ಸಾಧ್ಯವಿಲ್ಲ, ಏಕೆಂದರೆ ಅರ್ಧಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕರೆಂಟು ಸೌಲಭ್ಯಗಳಿಲ್ಲ, ಇನ್ನು ಕಂಪ್ಯೂಟರ್ ವ್ಯವಸ್ಥೆಗಳಿಲ್ಲ, ಹಾಗಿರುವಾಗ ಹೇಗೆ ಸಾಧ್ಯ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ಯಾರ ತಪ್ಪುಗಳನ್ನು ಅವರು ಗುರುತಿಸಿ ಹೇಳುತ್ತಿದ್ದಾರೆ? ಹಳ್ಳಿಗಳಿಗೆ ಈ ಹಿಂದೆಯೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದವರು ಯಾರು ಎಂದು ಪ್ರಶ್ನಿಸಿದರು.
ಹಳ್ಳಿಗಳಲ್ಲಿರುವ ಬಹುಪಾಲು ಜನ ಬಡವರು, ಅವಿದ್ಯಾವಂತರು, ಅವರಿಗೆ ಕಾರ್ಡುಗಳಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ, ಏಕಾಏಕಿ ಹಳ್ಳಿಯವರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಾಧ್ಯವಿಲ್ಲ, ಅಶಿಕ್ಷಿತರನ್ನು ಬ್ಲಾಕ್ ಮ್ಯಾಜಿಕ್ ಮಾಡಲು ಪ್ರಧಾನಿ ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ಹೇಳದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿಯವರನ್ನು ಕಾಶಿಯ ಮಗು ಎಂದು ಸಂಬೋಧಿಸಿದ ಮೋದಿ, ಅವರೀಗಷ್ಟೇ ಮಾತನಾಡಲು ಕಲಿಯುತ್ತಿದ್ದಾರೆ, ಅವರು ಮಾತನಾಡುವ ಮುಂಚೆ ಯೋಚನೆ ಮಾಡುವುದಿಲ್ಲ. ಅವರ ಸರ್ಕಾರ ಆಡಳಿತದಲ್ಲಿ ವಿಫಲವಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ನನಗೆ ಈ ಪವಿತ್ರ ಭೂಮಿಯ ಸಂಸದನಾಗಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.