ದೇಶ

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ, ಜನಸಭೆಯಲ್ಲಿ ಮಾತನಾಡುತ್ತೇನೆ: ಪ್ರಧಾನಿ ಮೋದಿ

ನೋಟು ನಿಷೇಧ ಕುರಿತಂತೆ ತಮ್ಮ ಪ್ರತಿಕ್ರಿಯೆ ಬಯಸಿದ್ದ ಪ್ರತಿಪಕ್ಷಗಳು ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಲೋಕಸಭೆಯಲ್ಲಿ ಅವಕಾಶ ಸಿಗದಿದ್ದರೇನು ಜನಸಭೆಯಲ್ಲಿ ಮಾತನಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ, ಜನಸಭೆಯಲ್ಲಿ ಮಾತನಾಡುತ್ತೇನೆ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published On :

ಅಹ್ಮದಾಬಾದ್: ನೋಟು ನಿಷೇಧ ಕುರಿತಂತೆ ತಮ್ಮ ಪ್ರತಿಕ್ರಿಯೆ ಬಯಸಿದ್ದ ಪ್ರತಿಪಕ್ಷಗಳು ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಲೋಕಸಭೆಯಲ್ಲಿ ಅವಕಾಶ ಸಿಗದಿದ್ದರೇನು ಜನಸಭೆಯಲ್ಲಿ ಮಾತನಾಡುತ್ತೇನೆ  ಎಂದು ಪ್ರಧಾನಿ ಮೋದಿ  ಹೇಳಿದ್ದಾರೆ.

ನೋಟು ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ಗುಜರಾತ್ ಗೆ ಆಗಮಿಸಿರುವ ಪ್ರಧಾನಿ ಮೋದಿ ಬನಾಸ್ಕಂಟಾದಲ್ಲಿ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನೋಟು ನಿಷೇಧವನ್ನು  ವಿರೋಧಿಸುತ್ತಿರುವ ಪ್ರತಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ನೋಟು ನಿಷೇಧದಿಂದ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಲಿದೆ. ಸರ್ಕಾರದ ಈ ನಿರ್ಧಾರವನ್ನು ಇಡೀ ದೇಶದ ಜನತೆ  ಸ್ವಾಗತಿಸಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪ್ರಾಮಾಣಿಕರಿಗೆ ತೊಂದರೆ ಆಗುತ್ತಿತ್ತು. ಆದರೆ ಈಗ ಕಾಳಧನಿಕರಿಗೆ ತೊಂದರೆಯಾಗುತ್ತಿದೆ. ನಮ್ಮ ಹೋರಾಟ ಭಯೋತ್ಪಾದನೆ ಹಾಗೂ ಕಾಳಧನಿಕರ ವಿರುದ್ಧವೇ ಹೊರತು  ಬಡವರ ವಿರುದ್ಧವಲ್ಲ. ಬಡವರ ಹಿತಕ್ಕಾಗಿ ನೋಟು ನಿಷೇಧ ಮಾಡಲಾಗಿದೆ ಎಂದು ಹೇಳಿದರು.

ಅಂತೆಯೇ ಸಂಸತ್ ನಲ್ಲಿ ನೋಟು ನಿಷೇಧ ಕುರಿಂತತೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ ಪ್ರಧಾನಿ ಮೋದಿ, ಚರ್ಚೆ ಮಾಡಲು ವಿಪಕ್ಷಗಳೇ ಬಿಡುತ್ತಿಲ್ಲ ಎಂದು ಆರೋಪಿಸಿದರು. "ಕಲಾಪದಲ್ಲಿ ಗದ್ದಲ ವೆಬ್ಬಿಸುವ  ಮೂಲಕ ಸುಗಮ ಕಲಾಪಕ್ಕೆ ಅಡ್ಡಿ ಮಾಡುತ್ತಿವೆ. ಹೀಗಾಗಿ ಲೋಕಸಭೆಯಲ್ಲಿ ಮಾತನಾಡಲಾಗದೇ ಜನಸಭೆಯಲ್ಲಿ ಮಾತನಾಡುತ್ತಿದ್ದೇನೆ. ಸುಗಮ ಕಲಾಪಕ್ಕೆ ಅಡ್ಡಿಯಾದ ವಿಪಕ್ಷಗಳ ವಿರುದ್ಧ ಸ್ವತಃ ರಾಷ್ಟ್ರಪತಿಗಳು ಅಸಮಾಧಾನ  ವ್ಯಕ್ತಪಡಿಸಿದ್ದಾರೆ. ನಾನು 50 ದಿನಗಳ ಕಾಲ ಸಮಯಾವಕಾಶ ಕೇಳಿದ್ದೆ. ಈಗ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಭ್ರಷ್ಟಾಚಾರ ತೊಲಗಿಸಲು ಇವೇ ಪ್ರಮುಖ ಕ್ರಮಗಳಾಗಿವೆ. ನನ್ನನ್ನು ವಿರೋಧಿಸಿ  ಪರವಾಗಿಲ್ಲ. ಆದರೆ ಬಡವರಿಗೆ ಸಹಕರಿಸಿ, ಬಡವರೂ ಕೂಡ ಡಿಜಿಟಲ್ ತಂತ್ರಜ್ಞಾನ ಕಲಿಯಲು ಅವಕಾಶ ಮಾಡಿಕೊಡಿ. ಭಾರತೀಯರು ಸ್ವಾರ್ಥಿಗಳಲ್ಲ, ಮುಂದಿನ ತಲೆಮಾರುಗಳಿಗೆ ಯೋಚಿಸುತ್ತಾರೆ ಎಂದು ಹೇಳಿದರು.

ನವೆಂಬರ್ 8ಕ್ಕೂ ಮೊದಲು 100 ಮತ್ತು 50 ರು.ನೋಟುಗಳಿಗೆ ಯಾವುದೇ ರೀತಿಯ ಬೆಲೆ ಇರಲಿಲ್ಲ. ಈಗ ನೋಡಿ ಈ ನೋಟುಗಳಿಗೆ ಎಂತಹ ಬೆಲೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕೂ ಮೊದಲು ಗುಜರಾತ್  ದೀಸಾದಲ್ಲಿ ಪ್ರಧಾನಿ ಮೋದಿ ಹಾಲಿನ ಘಟಕವನ್ನು ಉದ್ಘಾಟಿಸಿ, ಕೆಲ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.