ದೇಶ

ಚೆನ್ನೈನಲ್ಲಿ ಮತ್ತೊಂದು ಸ್ವಾತಿ ಪ್ರಕರಣ; ಕತ್ತು ಸೀಳಿ ಯುವತಿ ಹತ್ಯೆಗೈದ ಭಗ್ನಪ್ರೇಮಿ!

ತಮಿಳುನಾಡು ರಾಜಧಾನಿ ಚೆನ್ನೈ ನಲ್ಲಿ ಮತ್ತೊಂದು ಸ್ವಾತಿ ಪ್ರಕರಣ ಬಯಲಾಗಿದ್ದು, ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚೆನ್ನೈನಲ್ಲಿ ಮತ್ತೊಂದು ಸ್ವಾತಿ ಪ್ರಕರಣ; ಕತ್ತು ಸೀಳಿ ಯುವತಿ ಹತ್ಯೆಗೈದ ಭಗ್ನಪ್ರೇಮಿ!
ಮೃತ ಸೋನಿಯಾ ಹಾಗೂ ಬಂಧಿತ ಭಗ್ನ ಪ್ರೇಮಿ ಪ್ರಶಾಂತ್
Published On :

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ನಲ್ಲಿ ಮತ್ತೊಂದು ಸ್ವಾತಿ ಪ್ರಕರಣ ಬಯಲಾಗಿದ್ದು, ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಡೀ ತಮಿಳುನಾಡು ರಾಜ್ಯ ಮಾಜಿ ಸಿಎಂ ಜಯಲಲಿತಾ ಅವರ ಅಕಾಲಿಕ ಮರಣದಿಂದ ಶೋಕಾಚರಣೆಯಲ್ಲಿದ್ದರೆ ಇತ್ತ ಚೆನ್ನೈನಲ್ಲಿ ಭಗ್ನ ಪ್ರೇಮಿಗಳ ಅಟ್ಟಹಾಸ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. ಆರು ತಿಂಗಳ ಹಿಂದೆ ನಂಗಬಾಕ್ಕಂ ರೈಲ್ವೇ ನಿಲ್ದಾಣದಲ್ಲಿ ಟೆಕ್ಕಿ ಸ್ವಾತಿ ಹತ್ಯೆ ನಡೆದ ಮಾದರಿಯಲ್ಲೇ ಹಾಡಹಗಲೇ ಭಗ್ನ ಪ್ರೇಮಿಯೊಬ್ಬಯುವತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಯುವತಿಯನ್ನು 23 ವರ್ಷದ ಸೋನಿಯಾ ಎಂದು ಗುರುತಿಸಲಾಗಿದ್ದು, ಯುವತಿಯನ್ನು ಕೊಲೆಗೈದ ಭಗ್ನ ಪ್ರೇಮಿಯನ್ನು ಎಸ್ ಪ್ರಶಾಂತ್ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಬಸ್ ಗಾಗಿ ನೆಡುಗುಂಡ್ರಮ್ ಬಸ್ ಸ್ಟಾಪ್  ನಲ್ಲಿ ಕಾಯುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಪ್ರಶಾಂತ್, ಯುವತಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಗಲಾಟೆ ನೋಡಿದ ಸ್ಥಳೀಯರು ಸಮೀಪಕ್ಕೆ ಆಗಮಿಸಿದ್ದಾರೆ. ಈ ವೇಳೆ ತನ್ನ ಬ್ಯಾಗಿನಿಂದ ಪೆನ್ ಮಾದರಿಯಲ್ಲಿ ಚಾಕುವನ್ನು ತೆಗೆದ  ಪ್ರಶಾಂತ್ ಎಲ್ಲರ ಸಮ್ಮುಖದಲ್ಲೇ ಹಿಂದಿನಿಂದ ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸದರಾದರೂ, ಅಷ್ಟು ಹೊತ್ತಿಗಾಗಲೇ ಯುವತಿ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಗೆ ತಂದಾಗ ಯುವತಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೀರ್ ಕಂಕರಣೈ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಭಗ್ನ ಪ್ರೇಮಿ ಪ್ರಶಾಂತ್ ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸ್ ಮಾಹಿತಿಗಳ ಪ್ರಕಾರ, ಪ್ರಶಾಂತ್ ಮತ್ತು ಸೋನಿಯಾ ಇಬ್ಬರೂ ನೆಡುಗುಂಡ್ರಮ್ ಪ್ರದೇಶದ ನಿವಾಸಿಗಳಾಗಿದ್ದು, ಇಬ್ಬರೂ ಕಳೆದ ಆರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಇವರಿಬ್ಬರ ಪ್ರೀತಿಗೆ  ಪೋಷಕರ ವಿರೋಧವಿದ್ದ ಕಾರಣ ಸೋನಿಯಾ ಪ್ರಶಾಂತ್ ನನ್ನು ದೂರವಿಟ್ಟಿದ್ದಳು. ಸೋನಿಯಾಳಿಂದ ತಿರಸ್ಕೃತನಾಗಿದ್ದ ಪ್ರಶಾಂತ್ ಸಾಕಷ್ಟು ಭಾರಿ ಆಕೆಯನ್ನು ಸಂತೈಸಲು ಯತ್ನಿಸಿದ್ದಾನೆ. ಆದರೆ ಸೋನಿಯಾ ಪ್ರೀತಿಗೆ  ನಿರಾಕರಿಸಿದ್ದರಿಂದ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.