ದೇಶ

ಪ್ರಧಾನಿ ಮೋದಿ ಭಾಷಣಕ್ಕೆ ಬೆಂಬಲ; ಬಲೂಚ್ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬಲೂಚಿಸ್ತಾನ ಸಮಸ್ಯೆಗಳ ಕುರಿತು ಚಕಾರ ಎತ್ತಿರುವ ಕುರಿತು ಈಗಾಗಲೇ ಅಸಮಾಧಾನಗೊಂಡಿರುವ ಪಾಕಿಸ್ತಾನ ಇದೀಗ ಮೋದಿ ಭಾಷಣಕ್ಕೆ ಬೆಂಬಲ ನೀಡಿದ ಹಿರಿಯ ಬಲೂಚಿಸ್ತಾನ ಹೋರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

ಪ್ರಧಾನಿ ಮೋದಿ ಭಾಷಣಕ್ಕೆ ಬೆಂಬಲ; ಬಲೂಚ್ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಸಂಗ್ರಹ ಚಿತ್ರ
Published On :

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬಲೂಚಿಸ್ತಾನ ಸಮಸ್ಯೆಗಳ ಕುರಿತು ಚಕಾರ ಎತ್ತಿರುವ ಕುರಿತು ಈಗಾಗಲೇ ಅಸಮಾಧಾನಗೊಂಡಿರುವ  ಪಾಕಿಸ್ತಾನ ಇದೀಗ ಮೋದಿ ಭಾಷಣಕ್ಕೆ ಬೆಂಬಲ ನೀಡಿದ ಹಿರಿಯ ಬಲೂಚಿಸ್ತಾನ ಹೋರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

ಬಲೂಚಿಸ್ತಾನ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯನ್ವಯ ಭಾರತದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಭಾಷಣವನ್ನು ಬೆಂಬಲಸಿದ್ದ  ಬಲೂಚಿಸ್ತಾನ ಮೂವರು ಹಿರಿಯ ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಪಾಕಿಸ್ತಾನ ಸರ್ಕಾರ ದಾಖಲಿಸುವಂತೆ ಆದೇಶ ನೀಡಿದೆಯಂತೆ.  ಅದರಂತೆ ಬಲೂಚಿಸ್ತಾನ ಹೋರಾಟದ ಹಿರಿಯ ನಾಯಕರಾದ ಬ್ರಹಮ್ಡಗ್ ಬುಗ್ತಿ, ಹರ್ಬಿಯರ್ ಮರ್ರಿ ಹಾಗೂ ಬನುಕ್ ಕರಿಮಾ ವಿರುದ್ಧ ದೇಶದ್ರೋಹ ಪ್ರಕರಣವೂ ಸೇರಿದಂತೆ ಐದು  ಪ್ರಕರಣಗಳನ್ನು ದಾಖಲಿಸಲಾಗಿದೆ.

ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಬಲೂಚಿಸ್ತಾನದ ಹಿರಿಯ ಹೋರಾಟಗಾರ, ಪ್ರಸ್ತುತ ಪಾಕಿಸ್ತಾನ ಸರ್ಕಾರದಿಂದ ಗಡಿಪಾರಿಗೆ ತುತ್ತಾಗಿರುವ ಮುನೀರ್ ಮೆಂಗಲ್ ಅವರು,  ಕಳೆದ 70 ವರ್ಷಗಳಿಂದಲೂ ಪಾಕಿಸ್ತಾನ ಇದನ್ನೇ ಮಾಡಿಕೊಂಡು ಬಂದಿದೆ ಎಂದು ಹೇಳಿದ್ದಾರೆ. ಪ್ಯಾರಿಸ್ ನಿಂದ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಸರ್ಕಾರಕ್ಕೆ ಇದೇನು ಹೊಸದಲ್ಲ.  ತನ್ನ ವಿರುದ್ಧ ಯಾರೇ ಮಾತನಾಡಿದರೂ ಅವರ ಹೋರಾಟದ ಧ್ವನಿಯನ್ನು ಅಡಗಿಸುವ ತಂತ್ರ ಅದಕ್ಕೆ ಚೆನ್ನಾಗಿಯೇ ತಿಳಿದಿದೆ. ಭಯೋತ್ಪಾದನೆ ಎಂಬ ಅಸ್ತ್ರವನ್ನು ಮುಂದಿಟ್ಟುಕೊಂಡು  ಬಲೂಚಿಸ್ತಾನ ಭವಿಷ್ಯವನ್ನು ಹಾಳುಮಾಡುತ್ತಿದೆ. ಇದಕ್ಕೆ ಬಲೂಚಿಸ್ತಾನ ಸರ್ಕಾರದ ಕುಮ್ಮಕ್ಕೂ ಕೂಡ ಇದೆ ಎಂದು ಕಿಡಿಕಾರಿದ್ದಾರೆ.

ಅತ್ತ ಪಾಕಿಸ್ತಾನ ಸರ್ಕಾರ ಬಲೂಚ್ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಸೂಚನೆ ನೀಡುತ್ತಿದ್ದಂತೆಯೇ ಇತ್ತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಲೂಚಿಸ್ತಾನ  ಮುಖ್ಯಮಂತ್ರಿ ಸನಾವುಲ್ಲಾ ಜೆಹ್ರಿ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಭಾರತ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ನೇರವಾಗಿ ಬಲೂಚ್  ಹೋರಾಟಗಾರರ ವಿರುದ್ಧ ಸರ್ಕಾರ ದಾಖಲಿಸಿರುವ ದೇಶದ್ರೋಹ ಪ್ರಕರಣ ಸರಿಯಾದ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.

ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಬಲೂಚಿಸ್ತಾನ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ವಿಶ್ವ ಸಮುದಾಯದ  ಗಮನ ಸೆಳೆದಿದ್ದರು. ಇದೇ ಭಾಷಣ ಸಂಬಂಧ ಬೆಂಬಲ ಸೂಚಿಸಿ ಪ್ರತಿಕ್ರಿಯೆ ನೀಡಿದ್ದ ಬಲೂಚಿಸ್ತಾನ ಹಿರಿಯ ಹೋರಾಟಗಾರ ಬ್ರಹಮ್ಡಗ್ ಬುಗ್ತಿ ಹೇಳಿದ್ದ ಮಾತುಗಳು ಇಂದಿಗೂ ಸಾಮಾಜಿಕ  ಜಾಲತಾಣದಲ್ಲಿ ಹರಿದಾಡುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.