ಕಾಶ್ಮೀರ: ಧ್ವಜಾರೋಹಣ ವೇಳೆ ಕೆಳಗೆ ಬಿದ್ದ ರಾಷ್ಟ್ರಧ್ವಜ, ತನಿಖೆಗೆ ಆದೇಶ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಾಷ್ಚ್ರಧ್ವಜಕ್ಕೆ ಅಪಮಾನವಾಗಿದ್ದು, ಸಿಎಂ ಮುಫ್ತಿ ಮೆಹಬೂಬಾ ಅವರು ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡುತ್ತಿದ್ದ ವೇಳೆ ಧ್ವಜ ಕೆಳಗೆ ಬಿದ್ದಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಾಷ್ಚ್ರಧ್ವಜಕ್ಕೆ ಅಪಮಾನವಾಗಿದ್ದು, ಸಿಎಂ ಮುಫ್ತಿ ಮೆಹಬೂಬಾ ಅವರು ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡುತ್ತಿದ್ದ ವೇಳೆ ಧ್ವಜ ಕೆಳಗೆ ಬಿದ್ದಿದೆ.
ರಾಜಧಾನಿ ಶ್ರೀನಗರದ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ಮುಫ್ತಿ ಮೆಹಬೂಬಾ ಅವರು ಧ್ವಜಾರೋಹಣಕ್ಕಾಗಿ ಹಗ್ಗವನ್ನು ಹಿಡಿದು ಎಳೆಯುತ್ತಿದ್ದಂತೆಯೇ ಧ್ವಜ ಕೆಳಗೆ ಬಿದ್ದಿದೆ. ಕೂಡಲೇ ಆಗಬಹುದಾಗಿದ್ದ ಅಪಾಯವನ್ನರಿತಿದ್ದ ಮೆಹಬೂಬಾ ಅವರ ಭದ್ರತಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಧ್ವಜವನ್ನು ಹಿಡಿದುಕೊಂಡಿದ್ದಾರೆ. ಬಳಿಕ ಸಾವರಿಸಿಕೊಂಡ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಮತ್ತೆ ಸರಿಪಡಿಸಿ ಧ್ವಜಾರೋಹಣ ಮಾಡಿಸಿದ್ದಾರೆ.
ಬಳಿಕ ನಡೆದ ಭಾಷಣದಲ್ಲಿ ಸಿಎಂ ಮುಫ್ತಿ ಮೆಹಬೂಬಾ ಇತ್ತೀಚೆಗೆ ಉಗ್ರ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಶ್ರೀನಗರದಲ್ಲಿ ನಡೆದ ಹಿಂಸಾಚಾಕವನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದರು.
ರಾಜ್ಯದ ಸಿಎಂ ಪಾಲ್ಗೊಂಡಿರುವ ಕಾರ್ಯಕ್ರಮದಲ್ಲಿ ಇಂತಹ ದೊಡ್ಡ ಅಚಾತುರ್ಯವಾಗಲು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಮತ್ತೆ ಕೆಲವರು ಪ್ರಕರಣದ ಹಿಂದೆ ಕಾಣದ ಕೈಗಳ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಕೆಳಗೆ ಬಿದ್ದ ರಾಷ್ಟ್ರಧ್ವಜ ಒಮರ್ ಅಬ್ದುಲ್ಲಾ ವ್ಯಂಗ್ಯ
ಇನ್ನು ಸ್ವತಂತ್ರ್ಯ ದಿನಾಚರಣೆ ನಿಮಿತ್ತ ಶ್ರೀನಗರದಲ್ಲಿ ನಡೆದ ಆಚಾತುರ್ಯ ಸಂಬಂಧ ಟ್ವಿಟರ್ ನಲ್ಲಿ ವ್ಯಂಗ್ಯವಾಡಿರುವ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು, ರಾಷ್ಟ್ರಧ್ವಜ ಕೆಳಗೆ ಬೀಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹಬೂಬಾ ಮುಫ್ತಿ ಅವರು ಯಾರನ್ನಾದರು ಹೊಣೆಗಾರರನ್ನಾಗಿ ಮಾಡಲು ಶೋಧ ನಡೆಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


