ಹಣಕ್ಕಾಗಿ ವಿಕಲಾಂಗನನ್ನು ಅಪಹರಿಸಿ ಪುನರ್ ವಿವಾಹ ಮಾಡಿಕೊಂಡ ಮಾಜಿ ಪತ್ನಿ!
ಹಣಕ್ಕಾಗಿ ವಿಕಲಾಂಗನನ್ನು ಮದುವೆಯಾದ ಹೆಣ್ಣು ಬಳಿಕ ಆತನಿಗೆ ವಿಚ್ಛೇದನ ನೀಡಿ ಮತ್ತೆ ಹಣಕ್ಕಾಗಿ ಆತನನ್ನು ಮತ್ತದೇ ಹಣಕ್ಕಾಗಿ ಅಪಹರಿಸಿ ಪುನರ್ ವಿವಾಹ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಮದ್ರಾಸ್: ಹಣಕ್ಕಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಮತ್ತೊಂದು ಉತ್ತಮ ನಿದರ್ಶನವೊಂದು ಇಲ್ಲಿದ್ದು, ಹಣಕ್ಕಾಗಿ ವಿಕಲಾಂಗನನ್ನು ಮದುವೆಯಾದ ಹೆಣ್ಣು ಬಳಿಕ ಆತನಿಗೆ ವಿಚ್ಛೇಧನ ನೀಡಿ ಮತ್ತೆ ಹಣಕ್ಕಾಗಿ ಆತನನ್ನು ಮತ್ತದೇ ಹಣಕ್ಕಾಗಿ ಅಪಹರಿಸಿ ಪುನರ್ ವಿವಾಹ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಮನೋಜ್ ರಂಜನ್ ಎಂಬ ಮಾತು ಬಾರದ ಕಿವಿಯೂ ಕೇಳದ ಶ್ರೀಮಂತ ವಿಕಲಾಂಗನನ್ನು ಪ್ರಿಯದರ್ಶಿನಿ ಎಂಬ ಯುವತಿಯೊಬ್ಬಳು ಹಣದಾಸೆಯಿಂದಾಗಿ ಮದುವೆಯಾಗಿದ್ದಾಳೆ. ಬಳಿಕ ಆತನ ಅಂಗವೈಕಲ್ಯತೆಯ ನೆಪವೊಡ್ಡಿ ಆತನಿಗೆ ವಿಚ್ಛೇದನ ನೀಡಿದ್ದಾಳೆ. ಬಳಿಕ ಆತನ ತಂದೆ ಸಾವನ್ನಪ್ಪುತ್ತಿದ್ದಂತೆಯೇ ತಂದೆಯ ಆಸ್ತಿ ಅತನಿಗೇ ದಕ್ಕುತ್ತದೆ ಎಂದು ತಿಳಿದು ಆತನನ್ನು ಅಪಹರಿಸಿ ಮತ್ತೆ ಮದುವೆಯಾಗಿ ಆತನ ಒಂದಷ್ಟು ಆಸ್ತಿಯನ್ನು ಮಾರಿದ್ದಾಳೆ. ಹೀಗಾಗಿ ಆಕೆಯಿಂದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ವಿಕಲಾಂಗ ವ್ಯಕ್ತಿಯ ಪಾಲಕರೊಬ್ಬರು ಈ ಬಗ್ಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಅಪಹರಣ ಸಂಬಂಧ ಪೊಲೀಸರಲ್ಲಿ ದೂರು ದಾಖಲಿಸಲು ಹೋದರೆ, ಪ್ರಿಯದರ್ಶಿನಿಯಿಂದ ಲಂಚ ಪಡೆದ ಪೊಲೀಸರು ತಮ್ಮ ದೂರನ್ನು ತೆಗೆದುಕೊಳ್ಳಲಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಇನ್ನು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಕಲಾಂಗ ಯುವಕನ ರಕ್ಷಣೆಗೆ ನಿಲ್ಲುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಮನೋಜ್ ರಂಜನ್ ಹುಟ್ಟಿದಾಗಿನಿಂದಲೇ ಮಾತು ಬಾರದ ಕಿವಿ ಕೇಳದ ವಿಕಲಾಂಗನಾಗಿದ್ದು, ಈತನನ್ನು ನೋಡಿಕೊಳ್ಳುವ ನೆಪದಲ್ಲಿ ಪರಿಚಯವಾದ ಪ್ರಿಯದರ್ಶಿನಿ ಎಂಬ ಯುವತಿ 2008ರ ಸೆಪ್ಟೆಂಬರ್ ನಲ್ಲಿ ಈತನನ್ನು ಮದುವೆಯಾಗಿದ್ದಾಳೆ. ಬಳಿಕ ಒಂದೆರಡು ತಿಂಗಳ ಕಾಲ ಸಂಸಾರ ನಡೆಸಿದ ಪ್ರಿಯದರ್ಶಿನಿ ಬಳಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಮದುವೆ ಸಂದರ್ಭದಲ್ಲಿ ಯುವಕ ವಿಕಲಾಂಗವನ್ನು ಮರೆಮಾಚಿ ಮದುವೆ ಮಾಡಲಾಗಿತ್ತು ಎಂದು ಆರೋಪಿಸಿದ್ದಳು. ವಿಚಾರಣೆ ಬಳಿಕ 4 ಲಕ್ಷ ರು.ಗಳ ಪರಿಹಾರದೊಂದಿಗೆ ಪ್ರಿಯದರ್ಶಿನಿ ವಿಚ್ಛೇದನ ಪಡೆದಿದ್ದಳು.
2013ರ ಡಿಸೆಂಬರ್ ನಲ್ಲಿ ಮನೋಜ್ ಅವರ ತಂದೆ ಸಾವನ್ನಪ್ಪಿದ್ದರು. ಆಗ ಅವರ ಹೆಸರಿನಲ್ಲಿದ್ದ ಅಷ್ಟೂ ಆಸ್ತಿ ಪುತ್ರನಾದ ಮನೋಜ್ ಅವರ ಹೆಸರಿಗೆ ವರ್ಗವಾಯಿತು. ಈ ವಿಚಾರ ತಿಳಿದ ಮಾಜಿ ಪತ್ನಿ ಪ್ರಿಯದರ್ಶಿನಿ ತನ್ನದೇ ವಿಕಲಾಂಗ ಆಶ್ರಮದಲ್ಲಿದ್ದ ಮನೋಜ್ ನನ್ನು ತನ್ನ ದುಷ್ಚ ಸ್ನೇಹಿತರ ಸಹಾಯದಿಂದ ಅಪಹರಿಸಿದ್ದಳು. ಅಲ್ಲದೆ ರಾತ್ರೋ ರಾತ್ರಿ ರೋಯಪುರನಲ್ಲಿರುವ ಚರ್ಚ್ ನಲ್ಲಿ ಕಾನೂನು ಬಾಹಿರವಾಗಿ ಮದುವೆ ಮಾಡಿಕೊಂಡಿದ್ದಾಳೆ. ಅಲ್ಲದೆ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಇದಾದ ಕೇವಲ 24 ಗಂಟೆಗಳ ಅವಧಿಯಲ್ಲಿ ಪ್ರಿಯದರ್ಶಿನಿ ತನ್ನ ಸ್ನೇಹಿತರ ಸಹಾಯದಿಂದ ತಿರುಮಳಿಸೈನಲ್ಲಿರುವ ಸುಮಾರು 1.67 ಕೋಟಿ ಮೌಲ್ಯದ ಆಸ್ತಿಯನ್ನು ರಾತ್ರೋ ರಾತ್ರಿ ಮಾರಾಟ ಮಾಡಿಸ ಸಂಪೂರ್ಣ ಹಣವನ್ನು ನಗದು ರೂಪದಲ್ಲಿ ಪಡೆದಿದ್ದಾಳೆ.
ಮನೋಜ್ ಅವರ ಪಾಲಕರು ಈ ವಿಚಾರ ತಿಳಿದು ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹೋಗಿದ್ದು, ಪ್ರಿಯದರ್ಶಿನಿಯಿಂದ ಲಂಚ ಪಡೆದಿದ್ದ ಪೊಲೀಸರು ದೂರು ನೀಡಲು ಬಂದಿದ್ದ ಪಾಲಕರನ್ನೇ ಬೈದು ಕಳುಹಿಸಿದ್ದಾರೆ. ಹೀಗಾಗಿ ಬೇರೆ ವಿಧಿಯಿಲ್ಲದೇ ಪಾಲಕರು ನ್ಯಾಯಾಲದ ಮೊರೆ ಹೋಗಿದ್ದಾರೆ. ಪ್ರಸ್ತುತ ಅರ್ಜಿ ಸ್ವೀಕರಿಸಿರುವ ಮದ್ರಾಸ್ ಹೈಕೋರ್ಟ್ ನ ನ್ಯಾಯಪೀಠ ವಿಕಲಾಂಗ ಯುವಕನ ರಕ್ಷಣೆಗೆ ನಿಲ್ಲುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ಪ್ರಕರಣದ ತನಿಖಾ ಜವಾಬ್ಜಾರಿಯನ್ನು ಸಿಐಡಿಗೆ ನೀಡಿ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಇದಲ್ಲದೆ ಪಾಲಕ ಆತಂಕದ ಹಿನ್ನಲೆಯಲ್ಲಿ ಪ್ರಕರಣವನ್ನು ಬೇರೊಂದು ಠಾಣೆಗೆ ವರ್ಗಾಯಿಸಿದ್ದು, ಮನೋಜ್ ನನ್ನು ಗಡಲೂರ್ ನಲ್ಲಿ ಸುರಕ್ಷಿತ ಧಾಮಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ ದುಡ್ಡಿನಾಸೆಗೆ ಜನ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


