ಭಾರತದಿಂದ ಅಮೆರಿಕದ ಅತ್ಯಾಧುನಿಕ ಕಣ್ಗಾವಲು ಡ್ರೋಣ್ ಖರೀದಿ..!
ಗಡಿಯಲ್ಲಿ ಆಗಾಗ ಕಾಲು ಕೆರೆಯುವ ಚೀನಾ ಮತ್ತು ಪಾಕಿಸ್ತಾನಗಳ ಮೇಲೆ ಕಣ್ಗಾವಲಿಡಲು ಭಾರತ ನಿರ್ಧರಿಸಿದ್ದು, ಇದಕ್ಕಾಗಿ ಅಮೆರಿಕದ ಅತ್ಯಾಧುನಿತ ಡ್ರೋಣ್ ಗಳನ್ನು ಖರೀದಿಸಲು ಮುಂದಾಗಿದೆ...

ನವದೆಹಲಿ: ಗಡಿಯಲ್ಲಿ ಆಗಾಗ ಕಾಲು ಕೆರೆಯುವ ಚೀನಾ ಮತ್ತು ಪಾಕಿಸ್ತಾನಗಳ ಮೇಲೆ ಕಣ್ಗಾವಲಿಡಲು ಭಾರತ ನಿರ್ಧರಿಸಿದ್ದು, ಇದಕ್ಕಾಗಿ ಅಮೆರಿಕದ ಅತ್ಯಾಧುನಿತ ಡ್ರೋಣ್ ಗಳನ್ನು ಖರೀದಿಸಲು ಮುಂದಾಗಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಅಮೆರಿಕದ ಅತ್ಯಾಧುನಿಕ ಕಣ್ಗಾವಲು ಡ್ರೋನ್ ಗಳನ್ನು ಖರೀದಿಸಲು ಮುಂದಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ. ಮಾನವ ರಹಿತ ತಂತ್ರಜ್ಞಾನ ಹೊಂದಿರುವ ಅಮೆರಿಕದ ಸುಮಾರು 40 ಪ್ರಿಡೇಟರ್ ಕಣ್ಗಾವಲು ಡ್ರೋನ್ ಗಳನ್ನು ಖರೀದಿಸಲು ಭಾರತ ಮುಂದಾಗಿದೆ. ಗಡಿಯಲ್ಲಿ ಕಣ್ಗಾವಲಿಡುವ ಸಲುವಾಗಿ ಮತ್ತು ಗಡಿಯುದ್ದಕ್ಕೂ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ಅತ್ಯಾಧುನಿಕ ಡ್ರೋನ್ ಗಳು ಭಾರತಕ್ಕೆ ಸಹಕಾರಿಯಾಗಲಿವೆ.
ಇದಲ್ಲದೆ ನಮ್ಮ ಗಡಿಯಲ್ಲಿ ಯಾವುದೇ ರೀತಿಯ ಅಪಾಯಕಾರಿ ಚಲನವಲನಗಳು ಕಂಡಬಂದರೆ ಕೂಡಲೇ ಕಾರ್ಯಪ್ರವೃತ್ತವಾಗುವ ಈ ಡ್ರೋನ್ ತನ್ನಲ್ಲಿರುವ ಕ್ಷಿಪಣಿಗಳ ಮುಖಾಂತರ ಶತ್ರುಪಾಳಯವನ್ನು ಕ್ಷಣಾರ್ಧದಲ್ಲಿ ಛಿದ್ರಗೊಳಿಸುತ್ತದೆ. ಆಗಸದಲ್ಲಿ ಸತತ 35 ಗಂಟೆಗಳ ನಿರಂತರವಾಗಿ ಹಾರಾಟ ಮಾಡಬಲ್ಲ ಸಾಮರ್ಥ್ಯವನ್ನು ಈ ಮಾದರಿಯ ಡ್ರೋನ್ ಗಳು ಹೊಂದಿದ್ದು, ಶುತ್ರಪಾಳಯದ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯಹೊಂದಿದೆ. ಇನ್ನು ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಚೀನಾ ಕಣ್ಣಿಟ್ಟಿದ್ದು, ಅದರ ಪ್ರಯತ್ನಗಳನ್ನು ವಿಫಲಗೊಳಿಸಲು ಕೂಡ ಈ ಡ್ರೋನ್ ಗಳ ಭಾರತದ ನೆರವಿಗೆ ಬರಬಲ್ಲವು. ಹೀಗಾಗಿ ಈ ಅತ್ಯಾಧುನಿಕ ಡ್ರೋನ್ ಗಳನ್ನು ಭಾರತೀಯ ನೌಕಾಪಡೆಗೆ ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮಾತಕತೆ ನಡೆಸಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ ಕಾರ್ಟರ್ ಅವರು ಶೀಘ್ರದಲ್ಲಿಯೇ ಭಾರತಕ್ಕೆ ಬರಲಿದ್ದು, ಅವರು ಬಂದ ಬಳಿಕ ಖರೀದಿ ಯೋಜನೆಯ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ಅಸಮಾಧಾನ
ಇದೇ ವೇಳೆ ಅಮೆರಿಕದ ಅತ್ಯಾಧುನಿಕ ಕಣ್ಗಾವಲು ಡ್ರೋನ್ ಖರೀದಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು, ಏಷ್ಯಾದಲ್ಲಿ ಭಾರತದ ನಡೆ ನೆರೆಯ ದೇಶಗಳ ಅಸಮಾಧಾನಕ್ಕೆ ಕಾರಣವಾಗಬಹುದು. ಒಂದು ವೇಳೆ ಭಾರತದ ಡ್ರೋನ್ ಗಳ ಗಡಿಯೊಳಗೆ ಬಂದರೆ ಖಂಡಿತಾ ಅವುಗಳನ್ನು ನಾಶ ಪಡಿಸಲಾಗುತ್ತದೆ ಎಂದು ಪಾಕಿಸ್ತಾನದ ಭದ್ರತಾ ವಿಶ್ಲೇಷಕ ಎಜಾಜ್ ಹೈದರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


