ವಿಶಾಖಪಟ್ಟಣಂನ ಭೋಗಾಪುರ ಬೀಚ್ ನಲ್ಲಿ ಬಾಲಕಿ ಅದಿತಿ ಶವ ಪತ್ತೆ..!
ಟ್ಯೂಷನ್ ನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಅದಿತಿ ದೇಹ ಭೋಗಾಪುರ ಬೀಚ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ...

ವಿಶಾಖಪಟ್ಟಣಂ: ಟ್ಯೂಷನ್ ನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಅದಿತಿ ದೇಹ ಭೋಗಾಪುರ ಬೀಚ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಭೋಗಾಪುರ ಬೀಚ್ ನ ಸ್ಥಳೀಯರು ನೀಡಿರುವ ಮಾಹಿತಿಯಂತೆ ದಿಬ್ಬಲಪಾಲೆಂ ಸನ್ ರೇ ಬೀಚ್ ಬಳಿ ಬಾಲಕಿಯೋರ್ವಳ ಶವ ಪತ್ತೆಯಾಗಿದ್ದು, ಇದು ವಾರದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಅದಿತಿಯದ್ದಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಮೋರಿಗೆ ಬಿದ್ದ ಅದಿತಿ ದೇಹ ಅಲ್ಲಿಂದ ಸಮುದ್ರ ಸೇರಿ ಬೋಗಾಪುರಂ ಬೀಚ್ ಗೆ ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪ್ರಸ್ತುತ ದೊರೆತಿರುವ ಶವದ ಮೇಲೆ ಗುಲಾಬಿ ಬಣ್ಣದ ಬಟ್ಟೆ ಇದ್ದು, ನಾಪತ್ತೆಯಾಗುವ ವೇಳೆ ಅದಿತಿ ಕೂಡ ಗುಲಾಬಿ ಬಣ್ಣದ ಬಟ್ಟೆ ಧರಿಸಿದ್ದಳು ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಾಲಕಿ ಅದಿತಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಬಂದ ಬಳಿಕ ಪ್ರಸ್ತುತ ದೊರೆತಿರುವ ಶವ ಬಾಲಕಿ ಅದಿತಿಯದ್ದೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.
ಕಳೆದ ಗುರುವಾರ ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ ಅದಿತಿ ದಿಢೀರ್ ನಾಪತ್ತೆಯಾಗಿದ್ದಳು. ಸ್ಥಳೀಯ ಪೊಲೀಸರು ಕಲೆಹಾಕಿದ ಸಿಸಿಟಿವಿ ದೃಶ್ಯಾವಳಿಯ ಮೇರೆಗೆ ಮತ್ತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬಾಲಕಿ ಅದಿತಿ ತೆರೆದ ಮೋರಿಗೆ ಬಿದ್ದಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವಿಶಾಖಪಟ್ಟಣ ಜಿಲ್ಲಾಡಳಿತ ಮತ್ತು ಆಂಧ್ರ ಪ್ರದೇಶ ಸರ್ಕಾರ ಕಾರ್ಯಾಚರಣೆ ನಡೆಸಿತ್ತು.
ವಿಶಾಖಪಟ್ಟಣಂನ ಕರಾವಳಿ ಪ್ರದೇಶದಲ್ಲಿ ಮತ್ತು ವಿಶಾಖಪಟ್ಟಣದ ರಾಜಕಾಲುವೆಗಳಲ್ಲಿ ಅದಿತಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಗಾಗಿ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ಕೂಡ ಬಳಕೆ ಮಾಡಲಾಗಿತ್ತು. ಆದರೆ ಸತತ ಒಂದು ವಾರಗಳ ಕಾರ್ಯಾಚರಣೆ ಬಳಿಕವೂ ಅದಿತಿ ದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


