ಮತ್ತೆ 7 ಶವಗಳ ಗುರುತು ಪತ್ತೆ, 29 ಕ್ಕೇರಿದ ಮೃತರ ಸಂಖ್ಯೆ
ಹಜ್ ಯಾತ್ರೆ ವೇಳೆ ಕಳೆದ ಗುರುವಾರ ಸೌದಿ ಅರೇಬಿಯಾದ ಮೀನಾದಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 29ಕ್ಕೇರಿದೆ...

ಮಿನಾ: ಹಜ್ ಯಾತ್ರೆ ವೇಳೆ ಕಳೆದ ಗುರುವಾರ ಸೌದಿ ಅರೇಬಿಯಾದ ಮೀನಾದಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 29ಕ್ಕೇರಿದೆ.
ಭಾನುವಾರ ಮತ್ತೆ 7 ಮೃತ ದೇಹಗಳ ಗುರುತು ಪತ್ತೆಯಾಗಿದ್ದು, ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕೃತ ಮೂಲಗಳ ಪ್ರಕಾರ ಮೆಕ್ಕಾ ದುರಂತದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ ಇದೀಗ 29ಕ್ಕೇರಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ದೊರೆತಿರುವ 7 ಮೃತ ದೇಹಗಳ ಪೈಕಿ ಐವರು ಕೇರಳ ಮೂಲದವರಾಗಿದ್ದು, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಯಾತ್ರಾರ್ಥಿಗಳನ್ನು ಗುರುತಿಸಲಾಗಿದೆ.
ಮೃತರ ಪೈಕಿ ಫಾಯಿಜ್ ಅಬ್ದುಲ್ ಮುನೀರ್ ವೀಟ್ಟಿಲ್, ಅಮೀನಾ ಬೀವಿ ಮೊಹಮದ್ ಷಾಫಿ ಮುಸಾಲಿಯಾರ್, ಅಬ್ದುಲ್ ರೆಹಮಾನ್ ಅಸಾರಿಥೋಡಿ, ಪುಟ್ಟು ವೀಟ್ಟಿಲ್ ಕುನ್ಹಿಮೊನ್ ಮತ್ತು ಮೊಯಿನುದ್ದೀನ್ ಅಬ್ದುಲ್ ಖಾದರ್ ಎಂಬುವವರು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಅನ್ವರ್ ಜನ್ಹಾ ಉತ್ತರ ಪ್ರದೇಶದವರಾಗಿದ್ದು, ಮಾನ್ಸುರುಲ್ ಹಕ್ ಜಾರ್ಖಂಡ್ ರಾಜ್ಯದವರು ಎಂದು ತಿಳಿದುಬಂದಿದೆ.
ಶನಿವಾರ ವಷ್ಟೇ ಕೇಂದ್ರ ಸರ್ಕಾರ 8 ಭಾರತೀಯ ಮೃತ ದೇಹಗಳನ್ನು ಪತ್ತೆ ಮಾಡಿತ್ತು. ಇದರ ಬೆನ್ನಲ್ಲೇ ಅಂದರೆ ಇಂದು ಮತ್ತೆ 7 ಶವಗಳ ಗುರುತು ಪತ್ತೆಯಾಗಿದ್ದು, ಮೃತ ಭಾರತೀಯರ ಸಂಖ್ಯೆ ಇದೀಗ 29ಕ್ಕೇರಿದೆ. ಮೂಲಗಳ ಪ್ರಕಾರ ಇನ್ನು ಸಾಕಷ್ಟು ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಇವುಗಳ ಪೈಕಿ ಭಾರತೀಯ ಮೃತ ದೇಹಗಳು ಇರಬಹುದು ಎಂದು ಶಂಕಿಸಲಾಗಿದೆ. ಮೃತರ ಪತ್ತೆಗಾಗಿ ವಿದೇಶಾಂಗ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7 ಕಿ.ಮೀ. ದೂರವಿರುವ ಮೀನಾದಲ್ಲಿ ಗುರುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಹಜ್ ಯಾತ್ರೆಯ ಅಂತಿಮ ಆಚರಣೆಯಾದ ಸೈತಾನನಿಗೆ ಕಲ್ಲು ಹೊಡೆಯುವ ಪ್ರಕ್ರಿಯೆ ವೇಳೆ ನೂಕುನುಗ್ಗಲು ನಡೆದಿದೆ. ಲಕ್ಷಾಂತರ ಮಂದಿ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ ಈ ಆಚರಣೆಗೆ ತೊಡಗಿದ್ದಾಗ ಕಾಲ್ತುಳಿತ ಉಂಟಾಗಿದ್ದೇ ಅವಘಡಕ್ಕೆ ಕಾರಣ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಹಜ್‍ನ ಇತಿಹಾಸದಲ್ಲೇ ನಡೆದ ಎರಡನೇ ಅತಿ ಭೀಕರ ದುರಂತವಾಗಿದೆ. 1990ರಲ್ಲಿ ನಡೆದ ಕಾಲ್ತುಳಿತಕ್ಕೆ 1,426 ಮಂದಿ ಮೃತಪಟ್ಟಿದ್ದರು. ಇದೇ ತಿಂಗಳ ಆರಂಭದಲ್ಲಿ ಬೃಹತ್ ಕ್ರೇನ್ ವೊಂದು ಮೆಕ್ಕಾ ಮಸೀದಿ ಮೇಲೆ ಕುಸಿದು ಬಿದ್ದು 107 ಮಂದಿ ಸಾವಿಗೀಡಾಗಿದ್ದರು. ಇದರ ನೆನಪು ಮಾಸುವ ಮೊದಲೇ ಈಗ ಮತ್ತೊಂದು ಭೀಕರ ದುರಂತ ನಡೆದಿದೆ.
ಕಾಲ್ತುಳಿತ ಉಂಟಾಗಿದ್ದು ಹೇಗೆ?
ಜಮಾರತ್‍ಗೆ ತೆರಳುವ 5 ಹಾದಿಗಳಲ್ಲಿ 2 ಹಾದಿಗಳನ್ನು ಮುಚ್ಚಲಾಗಿತ್ತು. ದಿಢೀರನೆ ಇಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತ ಉಂಟಾಯಿತು ಎಂದು ಇರಾನ್ ಆರೋಪಿಸಿದೆ. ಆದರೆ, ಬಸ್ ವ್ಯವಸ್ಥೆಯಿದ್ದರೂ ನಡೆದೇ ಸಾಗುತ್ತೇವೆಂದು ಯಾತ್ರಿಗಳು ಪಟ್ಟು ಹಿಡಿದು ನಡೆಯಲು ಆರಂಭಿಸಿದಾಗ ನೂಕುನುಗ್ಗಲು ಸಂಭವಿಸಿತು. ಸರ್ಕಾರದ ಸೂಚನೆ ಪಾಲಿಸದೇ ತಮ್ಮಿಷ್ಟದಂತೆ ಯಾತ್ರಿಗಳು ಚಲಿಸಲು ಶುರು ಮಾಡಿದ್ದೇ ದುರಂತಕ್ಕೆ ಕಾರಣವೆಂದು ಸೌದಿ ಆರೋಗ್ಯ ಸಚಿವ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


