ಮೋದಿ-ಒವೈಸಿ ಭೇಟಿ ವರದಿ ಅಲ್ಲಗಳೆದ ಬಿಜೆಪಿ, ಪತ್ರಿಕೆ ವಿರುದ್ಧ ಕಾನೂನು ಕ್ರಮ..!
ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಭೇಟಿ ಕುರಿತು ಖಾಸಗಿ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ಅಲ್ಲಗಳೆದಿರುವ ಬಿಜೆಪಿ ಮುಖಂಡರು, ಇದು ಪೀತ ಪತ್ರಿಕೋದ್ಯಮದ ಮಾದರಿ ಎಂದು ಕಿಡಿಕಾರಿದ್ದಾರೆ.

ನವದೆಹಲಿ: ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಭೇಟಿ ಕುರಿತು ಖಾಸಗಿ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ಅಲ್ಲಗಳೆದಿರುವ ಬಿಜೆಪಿ ಮುಖಂಡರು, ಇದು ಪೀತ ಪತ್ರಿಕೋದ್ಯಮದ ಮಾದರಿ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಜೆಡಿಯು ಪಕ್ಷ ಆರೋಪಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸಾದುದ್ದೀನ್ ಒವೈಸಿ ನಡುವೆ ಯಾವುದೇ ರೀತಿಯ ರಹಸ್ಯ ಮೈತ್ರಿಯಾಗಿಲ್ಲ. ಇದು ವಿಪಕ್ಷಗಳ ಪಿತೂರಿಯೇ ಹೊರತು ಮತ್ತೇನೂ ಅಲ್ಲ. ಪೀತ ಪತ್ರಿಕೋದ್ಯಮಕ್ಕೆ ಇದು ಸಾಕ್ಷಿಯಾಗಿದೆ. ಪತ್ರಿಕೆ ವಿರುದ್ಧ ಬಿಜೆಪಿ ಕಾನೂನು ರೀತ್ಯ ಕ್ರಮಕ್ಕೆ ಮುಂದಾಗುವುದು ಎಂದು ಬಿಜೆಪಿ ಪಕ್ಷದ ರಾಜ್ಯ ಸಭಾ ಸದಸ್ಯ ಎಂಜೆ ಅಕ್ಬರ್ ಅವರು ಹೇಳಿದ್ದಾರೆ.
ಪತ್ರಿಕಾ ವರದಿ ಕುರಿತು ಜೆಡಿಯು ಪಕ್ಷದ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಂತೆಯೇ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕ್ಬರ್ ಅವರು, ಖಾಸಗಿ ಪತ್ರಿಕೆಯ ಈ ವರದಿಗಳು ಪೀತ ಪತ್ರಿಕೋದ್ಯಮದ ಮಾದರಿಯಾಗಿದೆ. ಸುಳ್ಳು ಆಪಾದನೆ ಮಾಡುವ ಮೂಲಕ ವಿಪಕ್ಷಗಳು ಬಿಜೆಪಿ ಪಕ್ಷವನ್ನು ಹಣಿಯುವ ಯತ್ನ ಮಾಡುತ್ತಿದೆ. ವಿಷಾಧನೀಯ ವಿಚಾರವೆಂದರೆ ಇದಕ್ಕೆ ಕೆಲ ಮಾಧ್ಯಮ ಸಂಸ್ಥೆಗಳೂ ಕೂಡ ಕೈ ಜೋಡಿಸಿವೆ. ಹೀಗಾಗಿ ಪತ್ರಿಕೆ ವಿರುದ್ಧ ಬಿಜೆಪಿ ಪಕ್ಷ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ ಎಂದು ಅಕ್ಬರ್ ಹೇಳಿದ್ದಾರೆ.
ಇದಕ್ಕೂ ಮೊದಲು ಜೆಡಿಯು ಪಕ್ಷದ ಮುಖಂಡ ಕೆಸಿ ತ್ಯಾಗಿ ಅವರು ಪತ್ರಿಕಾಗೋಷ್ಠಿ ಕರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಎಂಐಎಂ ಅಧ್ಯಕ್ಷ ಪರಸ್ಪರ ಭೇಟಿಯಾಗಿ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ದೇಶದ ಜನತೆಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದರು.
ಚುನಾವಣಾ ಆಯೋಗದಿಂದ ಬಿಹಾರ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲು ಎಐಎಂಐಎಂ (All India Majlis-e-Ittehadul Muslimeen) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು ಎಂದು ಖಾಸಗಿ ಪತ್ರಿಕೆಯೊಂದು ವರದಿ ಪ್ರಕಟ ಮಾಡಿತ್ತು. ಇದರ ಬೆನ್ನಲ್ಲೇ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅಸಾದುದ್ದೀನ್ ಅವರು ಮುಸ್ಲಿಂ ಮತದಾರರು ಹೆಚ್ಚಿರುವ ಸೀಮಾಂಚಲ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನ ಸಭಾ ಚುನಾವಣೆ ಅಕ್ಟೋಬರ್ 12 ರಿಂದ ನವಂಬರ್ 5 ರ ವರೆಗೆ ನಡೆಯಲಿದ್ದು, ನವಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಬಿಜೆಪಿ ಈ ಭಾರಿ ಹೇಗಾದರೂ ಆಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹಂಬಲಿಸುತ್ತಿದ್ದರೆ. ಇತ್ತ ಆಡಳಿತಾರೂಢ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಬಿಟ್ಟುಕೊಡದೇ ಇರಲು ಆರ್ ಜೆಡಿ ಪಕ್ಷದೊಂದಿಗೆ ಮಹಾ ಮೈತ್ರಿ ಮಾಡಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


