ದೇಶ

ಪಾಕ್ ಪ್ರಧಾನಿ ಜತೆ ಮಾತಾಡಿದ್ದ ದಿಲೀಪ್: ಕಾರ್ಗಿಲ್ ಯುದ್ಧದ ವೇಳೆ ಮಾತನಾಡಿಸಿದ್ದ ಪ್ರಧಾನಿ ಅಟಲ್

ಪರಿಸ್ಥಿತಿ ನಿಯಂತ್ರಿಸಲು ಬಾಲಿವುಡ್ ನಟ ದಿಲೀಪ್ ಕುಮಾರ್ ರೊಂದಿಗೆ ಮಾತನಾಡಿ ಎಂದೂ ಹೇಳಿದ್ದರು...

ಪಾಕ್ ಪ್ರಧಾನಿ ಜತೆ ಮಾತಾಡಿದ್ದ ದಿಲೀಪ್: ಕಾರ್ಗಿಲ್ ಯುದ್ಧದ ವೇಳೆ ಮಾತನಾಡಿಸಿದ್ದ ಪ್ರಧಾನಿ ಅಟಲ್
ನವಾಜ್ ಷರೀಫ್- ಅಟಲ್ ಬಿಹಾರಿ ವಾಜಪೇಯಿ- ದಿಲೀಪ್ ಕುಮಾರ್
Published On :

ಇಸ್ಲಾಮಾಬಾದ್: ``ಕಾರ್ಗಿಲ್ ಸಂಘರ್ಷ ಆರಂಭವಾದಾಗ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕರೆ ಮಾಡಿದ್ದ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ನೀವು ನಮ್ಮೊಂದಿಗೆ ತುಂಬಾ ಕೀಳಾಗಿ ವರ್ತಿಸಿದಿರಿ ಎಂದು ಆರೋಪಿಸಿದ್ದರಲ್ಲದೆ, ಪರಿಸ್ಥಿತಿ ನಿಯಂತ್ರಿಸಲು ಬಾಲಿವುಡ್ ನಟ ದಿಲೀಪ್ ಕುಮಾರ್ ರೊಂದಿಗೆ ಮಾತನಾಡಿ ಎಂದೂ ಹೇಳಿದ್ದರು.'' ಹೀಗೆಂದು ಪಾಕ್‍ನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಅವರು ತಮ್ಮ `ನೈದರ್ ಎ ಹಾಕ್, ನಾರ್ ಎ ಡವ್' ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಷರೀಫ್ ರೊಂದಿಗೆ ಕುಳಿತಿದ್ದಾಗ ಅವರ ಫೋನ್ ರಿಂಗಣಿಸಿತು. ಕರೆ ಸ್ವೀಕರಿಸಿದಾಗ ಅದು ಅಟಲ್‍ರದ್ದಾಗಿತ್ತು. ಅತ್ತ ಕಡೆಯಿಂದ ಮಾತನಾಡಿದ ಅಟಲ್‍ಜೀ, ``ನೀವು ನನ್ನನ್ನು ಲಾಹೋರ್ ಗೆ  ಕರೆದು ಅವಮಾನ ಮಾಡಿದ್ದೀರಿ.

ಅಲ್ಲಿ ಲಾಹೋರ್‍ನಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರೆ, ಇಲ್ಲಿ ಸ್ವಲ್ಪ ಸಮಯವನ್ನೂ ವ್ಯರ್ಥ ಮಾಡದೇ ಕಾರ್ಗಿಲ್ ಅನ್ನು ವಶಪಡಿಸಿಕೊಂಡಿರಿ'' ಎಂದರು. ಅಟಲ್ ಏನು ಹೇಳುತ್ತಿದ್ದಾರೆಂದೇ ಷರೀಫ್ ಗೆ ಅರ್ಥವಾಗಲಿಲ್ಲ. ಹಾಗಾಗಿ ಷರೀಫ್, ``ಈ ಬಗ್ಗೆ ನನಗೇನೂ ಮಾಹಿತಿಯಿಲ್ಲ. ಸೇನಾ ಮುಖ್ಯಸ್ಥ ಜ. ಮುಷರ್ರಫ್ ರೊಂದಿಗೆ ಮಾತನಾಡಿ ನಿಮಗೆ ಕರೆ ಮಾಡುತ್ತೇನೆ'' ಎಂದು ಹೇಳಿ ಫೋನ್ ಕಟ್ ಮಾಡಲು ಮುಂದಾದರು.

ಅಷ್ಟರಲ್ಲೇ ಅಟಲ್ ಅವರು, ``ನನ್ನ ಜತೆಯಲ್ಲಿ ಒಬ್ಬ ವ್ಯಕ್ತಿಯಿದ್ದಾರೆ. ಅವರೊಂದಿಗೆ ಮಾತನಾಡಿ'' ಎಂದು ಫೋನ್ ಅನ್ನು ದಿಲೀಪ್ ಕುಮಾರ್ ಕೈಗಿತ್ತರು. ದಿಲೀಪ್(ಯೂಸುಫ್ ಖಾನ್, ಇವರು ಮೂಲತಃ ಪೇಶಾವರದವರು)ರ ಧ್ವನಿ ಕೇಳುತ್ತಿದ್ದಂತೆ ಷರೀಫ್ ಶಾಕ್ ಆದರು. ಆಗ ಮಾತನಾಡಿದ ದಿಲೀಪ್ ಕುಮಾರ್, ``ಮೇಮ್ ಸಾಹಿಬ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಯ ಅತ್ಯುನ್ನತ ಪ್ರೋತ್ಸಾಹಕರಾದ ನೀವು ಈ ರೀತಿ ಮಾಡುತ್ತೀರೆಂದು ನಾವು ನಿರೀಕ್ಷಿಸಿಯೇ ಇರಲಿಲ್ಲ'' ಎಂದರು.

ಜತೆಗೆ, ``ಒಬ್ಬ ಭಾರತೀಯ ಮುಸ್ಲಿಮನಾಗಿ ನಾನು ಹೇಳುವುದೇನೆಂದರೆ, ಭಾರತ-ಪಾಕ್ ನಡುವೆ ಅಶಾಂತಿ ಉಂಟಾದರೆ ಮೊದಲು ಅಭದ್ರ ಸ್ಥಿತಿ ಉಂಟಾಗುವುದು ನಮಗೆ. ನಾವೆಲ್ಲರೂ ಮನೆಯಿಂದ ಹೊರಬರಲೂ ಸಾಧ್ಯವಾಗುವುದಿಲ್ಲ. ದಯವಿಟ್ಟು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಏನಾದರೂ ಮಾಡಿ'' ಎಂದೂ ಹೇಳಿದರು. ಈ ವಿಚಾರವನ್ನೂ ಕಸೂರಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.