ಕಪ್ಪು ಹಣ ವರದಿ ನೀಡಲು ಎಸ್ ಐಟಿಗೆ ಸುಪ್ರೀಂ ಕೋರ್ಟ್ ಸೂಚನೆ
ಕಪ್ಪು ಹಣ ತನಿಖೆ ಪ್ರಗತಿ ಕುರಿತು ಅಕ್ಟೋಬರ್ 7ರ ವೇಳೆಗೆ ವರದಿ ನೀಡುವಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ...

ನವದೆಹಲಿ: ಕಪ್ಪು ಹಣ ತನಿಖೆ ಪ್ರಗತಿ ಕುರಿತು ಅಕ್ಟೋಬರ್ 7ರ ವೇಳೆಗೆ ವರದಿ ನೀಡುವಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ವಿದೇಶಿ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ಹಿಂತರುವುದಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ನೀಡಿದ್ದ ಶಿಫಾರಸುಗಳ ಜಾರಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನೂ ಕೇಳಿದೆ. ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಮತ್ತು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕುರ್ ಮತ್ತು ಎ.ಕೆ.ಸಿಕ್ರಿ ಪೀಠ ಎಸ್‍ಐಟಿ ನೀಡಿರುವ ಶಿಫಾರಸುಗಳ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಅಟಾರ್ನಿ ಜನರಲ್ ಮಾಹಿತಿ ನೀಡಬೇಕೆಂದು ಸೂಚಿಸಿದೆ.
ಈಗ ನಡೆಯುತ್ತಿರುವ ತನಿಖೆ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ. ಅಕ್ಟೋಬರ್ ವೇಳೆಗೆ ಕೋರ್ಟ್‍ಗೆ ಸಲ್ಲಿಸಲು ಅನುಮತಿ ನೀಡಬೇಕೆಂದು ಎಸ್‍ಐಟಿ ಪರ ಹಿರಿಯ ವಕೀಲ ದುಷ್ಯಂತ್ ದಾವೆ ಪೀಠದ ಮುಂದೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಪ್ರಶಾಂತ್ ಭೂಷಣ್, ಕಳೆದ ಮೇನಲ್ಲಿ ಎಸ್‍ಐಟಿ ಸಲ್ಲಿಸಿದ್ದ ಮೂರನೆ ವರದಿಯಲ್ಲಿನ ಕೆಲವು ಅಂಶಗಳು ಬಹಿರಂಗಗೊಂಡಿವೆ.
ಪಾರ್ಟಿಸಿಪೇಟರಿ ನೋಟ್ ಗಳ ಮೂಲಕ ಷೇರುಪೇಟೆಯಲ್ಲಿ ಸುಮಾರು ರು.3 ಲಕ್ಷ ಕೋಟಿ ಹೂಡಿಕೆ ಮಾಡಿರುವ ಕುರಿತು ವರದಿ ಹೇಳಿದ್ದು ಇವು ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದರು. ವರದಿಯನ್ನು ಪರಿಶೀಲಿಸಿದ ಪೀಠ ಅಂತಹ ಯಾವುದೇ ಅಂಶಗಳು ವರದಿಯಲ್ಲಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಮೇ 2015ರಲ್ಲಿ ಸಲ್ಲಿಸಿದ್ದು ನಾವು ಪಡೆದ ಕೊನೆ ವರದಿಯಾಗಿದೆ ಎಂದಿತು.
ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ವಿದೇಶಿಯರು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ (ಸೆಬಿ)ದಲ್ಲಿ ನೋಂದಣಿ ಮಾಡಿಸದೆ ಪಾರ್ಟಿಸಿಪೇಟರಿ ನೋಟ್‍ಗಳ ಮೂಲಕ ಹೂಡಿಕೆ ಮಾಡಬಹುದು. ಇವುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ವಿತರಿಸುತ್ತವೆ. ಇವುಗಳಲ್ಲಿ ಹೂಡಿಕೆ ಮಾಡಿರುವವರ ಹೆಸರು ಮತ್ತು ಗಳಿಸಿದ ಆದಾಯ ಎಲ್ಲವೂ ಗೌಪ್ಯವಾಗಿರುತ್ತದೆ.
ಪ್ರಶಾಂತ್ ಭೂಷಣ್ ಮಧ್ಯೆ ಮಾತನಾಡಲು ಮುಂದುವರೆಸಿದಾಗ ಮಧ್ಯ ಪ್ರವೇಶಿಸಿದ ಅಟಾರ್ನಿ ಜನರಲ್, ಭೂಷಣ್ ಈ ವಿಷಯದಲ್ಲಿ ಪ್ರವೇಶಿಸುವ ಹಕ್ಕಿಲ್ಲ ಎಂದು ವಾದಿಸಿದರು. ಈ ಹಿಂದೆ ನಡೆದ ವಿಚಾರಣೆ ಸಂದರ್ಭದಲ್ಲಿ ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಈಗಿನ ಎನ್‍ಡಿಎ ಸರ್ಕಾರ ಮತ್ತು ಈ ಹಿಂದಿನ ಯುಪಿಎ ಸರ್ಕಾರ ಕಪ್ಪುಹಣವನ್ನು ಹಿಂತರಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಪೀಠದ ಮುಂದೆ ಟೀಕಿಸಿದ್ದರು. ಯುಪಿಎ ಸರ್ಕಾರಕ್ಕೆ ನಿಷ್ಠರಾದವರೇ ಎಸ್‍ಐಟಿಯಲ್ಲಿ ತುಂಬಿದ್ದಾರೆ ಎಂತಲೂ ಆರೋಪಿಸಿದ್ದರು. ಕಪ್ಪು ಹಣವನ್ನು ಹಿಂತರಬೇಕೆಂದು ಜೇಠ್ಮಲಾನಿ ಹೂಡಿದ್ದ ಮೊಕದ್ದಮೆ ಭಾಗವಾಗಿಯೇ ಸುಪ್ರೀಂ ಕೋರ್ಟ್ ಎಸ್‍ಐಟಿ ರಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


