ಒಆರ್‍ಒಪಿ ಬಿಕ್ಕಟ್ಟು ಶೀಘ್ರ ಅಂತ್ಯ
ಸಮಾನ ಹುದ್ದೆಗೆ ಸಮಾನ ಪಿಂಚಣಿ(ಒಆರ್ ಒಪಿ) ಬಿಕ್ಕಟ್ಟು ಬಹುತೇಕ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ. ಬಿಹಾರ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಒಆರ್‍ಪಿಒ ಅನುಷ್ಠಾನ ಕುರಿತ ಘೋಷಣೆ ಕೇಂದ್ರ ಸರ್ಕಾರದಿಂದ ಹೊರಬೀಳುವ ಸಾಧ್ಯತೆ ಇದೆ...

ನವದೆಹಲಿ: ಸಮಾನ ಹುದ್ದೆಗೆ ಸಮಾನ ಪಿಂಚಣಿ(ಒಆರ್ ಒಪಿ) ಬಿಕ್ಕಟ್ಟು ಬಹುತೇಕ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ. ಬಿಹಾರ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಒಆರ್‍ಪಿಒ ಅನುಷ್ಠಾನ ಕುರಿತ ಘೋಷಣೆ ಕೇಂದ್ರ ಸರ್ಕಾರದಿಂದ ಹೊರಬೀಳುವ ಸಾಧ್ಯತೆ ಇದೆ.
ಆದರೆ, ಮೂಲಗಳ ಪ್ರಕಾರ ಎರಡು ದಿನದೊಳಗೆ ಘೋಷಣೆ ಹೊರಬಿದ್ದರೂ ಅಚ್ಚರಿ ಇಲ್ಲ. ಪಿಂಚಣಿ ಪರಿಷ್ಕರಣೆ ವಿಚಾರ ಹೊರತಾಗಿ ಒಆರ್‍ಪಿಒ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಮತ್ತು ನಿವೃತ್ತ ಸೇನಾನಿಗಳ ನಡುವೆ ಬಹುತೇಕ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡಿದೆ. ಆದರೆ, ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆ ಯಾಗಬೇಕೆನ್ನುವ ನಿವೃತ್ತ ಸೇನಾನಿಗಳ ಪಟ್ಟು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಇದು ಬೊಕ್ಕಸಕ್ಕೆ ಭಾರಿ ಹೊರೆಯಾಗಬಹುದು ಎನ್ನುವ ಆಂತಕ ಸರ್ಕಾರಕ್ಕಿದೆ. ಹೀಗಾಗಿ ಐದು ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಇದಕ್ಕೆ ನಿವೃತ್ತ ಸೇನಾನಿಗಳು ಅಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಆ.15ರಂದೇ ಬಗೆಹರಿಯಬೇಕಿದ್ದ ಬಿಕ್ಕಟ್ಟು ಮತ್ತಷ್ಟು ದಿನ ಮುಂದುವರಿದಿದೆ.
ಈ ನಡುವೆ, ಸರ್ಕಾರದ ಮೇಲೆ ಹೆಚ್ಚುತ್ತಿರುವ ಒತ್ತಡ ಹಿನ್ನೆಲೆಯಲ್ಲಿ ಪಿಂಚಣಿ ಪರಿಷ್ಕರಣೆ ವಿಚಾರವಾಗಿ ಸರ್ಕಾರ ಒಂದಷ್ಟು ವಿನಾಯ್ತಿ ನೀಡಲು ಮುಂದಾಗಿದೆ. ಪ್ರಧಾನಿ ಸೂಚನೆಯಂತೆ ಪ್ರತಿಭಟನಾನಿರತರ ಮನವೊಲಿಕೆ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಗಿದೆ. ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ, ಗ್ರಾಮೀಣ ವ್ಯವಹಾರಗಳ ಸಚಿವ ಬಿರೇಂದ್ರ ಸಿಂಗ್ ಹಾಗೂ ಸಂಸದರಾದ ರಾಜೀವ್ ಚಂದ್ರಶೇಖರ್ ಮತ್ತು ಭಗತ್ ಸಿಂಗ್ ಕೋಶಿಯಾರಿ ಮಂಗಳವಾರದಿಂದ ನಾಲ್ಕು ಬಾರಿ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಮಾತುಕತೆಯ ಪ್ರಗತಿ ಧನಾತ್ಮಕವಾಗಿದೆ. ಜಂತರ್‍ಮಂತರ್‍ನಲ್ಲಿ 80 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವಹಿಸಿರುವ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ತಮ್ಮ ಪಟ್ಟು ಸಡಿಲಿಸಿದ್ದು 2 ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಿಸಿದರೆ ಸಾಕು ಎಂದಿದ್ದಾರೆ. ಒಂದು ವೇಳೆ ಸರ್ಕಾರ ಇದಕ್ಕೊಪ್ಪಿದರೆ ಎರಡು ದಿನದೊಳಗೆ ನಿವೃತ್ತ ಸೇನಾನಿಗಳ ಪಾಲಿನ ಹೋರಾಟಕ್ಕೆ ಜಯಸಿಗಬಹುದು ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಒಆರ್‍ಒಪಿ ವಿಚಾರವಾಗಿ ಸರ್ಕಾರ ಮತ್ತು ನಿವೃತ್ತ ಯೋಧರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ರಾಜೀವ್ ಚಂದ್ರಶೇಖರ್ ಅವರು ನಿರಶನ ಕೂತಿರುವವರಲ್ಲಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಮೂರು ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಿಸುವ ಪ್ರಸ್ತಾಪವನ್ನು ಒಪ್ಪುವಂತೆ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಒಆರ್‍ಒಪಿ ಪ್ರತಿಭಟನೆಗೆ ಬುಧವಾರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಊರಾದ ಪಣಜಿಯಲ್ಲೂ ಚಾಲನೆ ಸಿಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


