ದೇಶ

ಪ್ರಬಲ ಭೂಕಂಪ: ಪಾಕ್ ಮತ್ತು ಅಫ್ಘಾನ್'ನಲ್ಲಿ ಸಾವಿನ ಸಂಖ್ಯೆ 311ಕ್ಕೆ ಏರಿಕೆ

ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮಂಗಳವಾರವೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೂ 311ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...

ಪ್ರಬಲ ಭೂಕಂಪ: ಪಾಕ್ ಮತ್ತು ಅಫ್ಘಾನ್'ನಲ್ಲಿ ಸಾವಿನ ಸಂಖ್ಯೆ 311ಕ್ಕೆ ಏರಿಕೆ
ಪಾಕಿಸ್ತಾನದ ಪೇಶಾವರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಚಿತ್ರ
Published On :

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮಂಗಳವಾರವೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೂ 311ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಪಾಕಿಸ್ತಾನದಲ್ಲಿ 237 ಜನರು ಸಾವನ್ನಪ್ಪಿದ್ದು, ಆಫ್ಘಾನಿಸ್ತಾನದಲ್ಲಿ 74 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 266 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಭೂಕಂಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಅಧಿಕಾರಿ ಅಮಿರ ಅಫಕ್ ಅವರು, ಘಟನಾ ಸ್ಥಳಗಳಿಗೆ ಈಗಾಗಲೇ ಭದ್ರತಾ ಸಿಬ್ಬಂದಿಗಳು ತಲುಪಿದ್ದು, ನಾಗರೀಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭೂಕಂಪದಿಂದಾಗಿ ಇದೀಗ 2000ಕ್ಕೂ ಹೆಚ್ಚು ಮಂದಿ ಮನೆಗಳನ್ನು ಕಳೆದುಕೊಂಡಿದ್ದು, ಸಂತ್ರಸ್ಥರಿಗೆ ಸರ್ಕಾರ ಇದೀಗ ವಾಸ್ತವಕ್ಕಾಗಿ ಟೆಂಟ್ ಗಳು, ಔಷಧಿಗಳು ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳನ್ನು ನೀಡಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪ ಸಂಭವಿಸಿತ್ತು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಪ್ರದೇಶದ ಹಿಂದೂಕುಷ್ ಪರ್ವತದಲ್ಲಿ ಭೂಕಂಪದ ಕೇಂದ್ರ ಬಿಂದು ಎಂದು ಹೇಳಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ಸಂಭವಿಸಿದ ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿತ್ತು.

ಇದರಂತೆ ಪೇಶಾವರದಲ್ಲೂ 260 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿತ್ತು. ಪರಿಣಾಮ ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿ, ಪಂಜಾಬ್, ಛತ್ತೀಸ್ ಘಡ, ಗುಜರಾತ್ ಹಾಗೂ ಬಹುತೇಕ ಕಡೆಗಳಲ್ಲಿ ಭೂಕಂಪನವಾಗಿರುವಂತೆ ವರದಿಗಳಾಗಿತ್ತು. ಭೂಕಂಪದ ಪರಿಣಾಮ ಪಾಕಿಸ್ತಾನದಲ್ಲದೇ, ಅಫ್ಘಾನಿಸ್ತಾನದಲ್ಲೂ ಭಾರೀ ಅನಾಹುತ ಸಂಭವಿಸಿದ್ದು, 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಭೂಕಂಪದಿಂದಾಗಿ ಕಾಲ್ತುಳಿತ ಉಂಟಾಗಿ ಹಲವು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

2015 ಎಪ್ರಿಲ್‌ ತಿಂಗಳಿನಲ್ಲಿಯೂ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪರಿಣಾಮ 9,000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಅಲ್ಲದೆ, 25,000ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಂತೆ ಉತ್ತರ ಭಾರತದಲ್ಲೂ ಕಂಪನದಿಂದಾಗಿ 130 ಜನರು ಬಲಿಯಾಗಿ 560 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.