ದೇಶ

ಬಿಹಾರ ಚುನಾವಣೆ: ಇದು ಸಿಎಂ ನಿತೀಶ್ ಪಿಎಂ ಮೋದಿ ಫೈಟ್

ಬಿಹಾರ ಚುನಾವಣೆಯೀಗ ನಾಯಕರಿಬ್ಬರ ನಡುವಿನ ಹೋರಾಟವಾಗಿ ರೂಪುಗೊಂಡಿದೆ. ಅ.12ರಂದು ಮೊದಲ ಹಂತದ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯದಲ್ಲಿ...

ಬಿಹಾರ ಚುನಾವಣೆ: ಇದು ಸಿಎಂ ನಿತೀಶ್ ಪಿಎಂ ಮೋದಿ ಫೈಟ್
ನರೇಂದ್ರ ಮೋದಿ, ನಿತೀಶ್ ಕುಮಾರ್
Published On :
ಪಟನಾ/ನವದೆಹಲಿ: ಬಿಹಾರ ಚುನಾವಣೆಯೀಗ ನಾಯಕರಿಬ್ಬರ ನಡುವಿನ ಹೋರಾಟವಾಗಿ ರೂಪುಗೊಂಡಿದೆ. ಅ.12ರಂದು ಮೊದಲ ಹಂತದ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ, ಮೂಲಸೌಲಭ್ಯ, ರಸ್ತೆ, ನೀರಿನಂಥ ಸ್ಥಳೀಯ ವಿಚಾರಗಳು ಹಂತ ಹಂತವಾಗಿ ಗೌಣವಾಗುತ್ತಿವೆ. ನಿತೀಶ್- ಮೋದಿ ಅವರೇ ಪ್ರಮುಖವಾಗುತ್ತಿದ್ದಾರೆ. 
ರಾಜ್ಯದ ಯಾವುದೇ ಮೂಲೆಗೆ ಹೋದರೂ ಜನ ಅಭ್ಯರ್ಥಿಗಳಿಗಿಂತ ನಿತೀಶ್ ಮತ್ತು ಮೋದಿ ಕುರಿತೇ ಮಾತನಾಡುತ್ತಿದ್ದಾರೆ. ನಾವು ಮೋದಿ ಅಥವಾ ನಿತೀಶ್ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆಯೇ ಹೊರತು ಇಂಥ ಅಭ್ಯರ್ಥಿಗಳನ್ನೇ ಎಂದು ಸ್ಥಳೀಯರು ಹೇಳುತ್ತಿಲ್ಲ. ಬಿಹಾರ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಪ್ರಧಾನಿ ಮೋದಿ ರಾಜ್ಯದಲ್ಲಿ ಸಾಲು ಸಾಲು ರ್ಯಾಲಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. 
ಜೆಡಿಯು- ಆರ್‍ಜೆಡಿ- ಕಾಂಗ್ರೆಸ್ ಮೈತ್ರಿಕೂಟಕ್ಕೆ ಪ್ರತಿ ರ್ಯಾಲಿಯಲ್ಲೂ ಟಾಂಗ್ ನೀಡುತ್ತಿದ್ದಾರೆ. ಆದರೆ, ನಿತೀಶ್ ಕುಮಾರ್ ಕೂಡ ಸುಮ್ಮನೆ ಕೂರುವವರಲ್ಲ. ಬಿಹಾರವನ್ನು ಮುನ್ನಡೆಸಲು ತಮಗಿಂತ ಸಮರ್ಥ ವ್ಯಕ್ತಿ ಮತ್ತೊಬ್ಬ ಇಲ್ಲ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ. ಬಿಹಾರಕ್ಕೆ ನಿತೀಶ್ ಅವರೇ ಉತ್ತಮ. ಮೋದಿ ಬಿಹಾರವನ್ನು ಮುನ್ನೆಡೆಸುವುದಿಲ್ಲವಲ್ಲ ಎಂದು ಮುಂಗೇರ್‍ನ ಅಂಗಡಿ ಮಾಲೀಕ ಭೂಮಿಕಾ ಪ್ರಸಾದ್ ಹೇಳುತ್ತಾರೆ. ಮೋದಿ ಅವರ ಎಲ್ಲ ರ್ಯಾಲಿಗಳಿಗೂ ಭಾರಿ ಜನ ಸೇರುತ್ತಾರೆ. ಮೋದಿ ಶೈಲಿಯೇ ಬೇರೆ. ಆದರೆ, ನಿತೀಶ್ ಬಿಹಾರದಲ್ಲಿ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎನ್ನುತ್ತಾರೆ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ರಮಾಕಾಂತ್ ಪಾಠಕ್. 
ಪಕ್ಷಗಳಿಗೆ ಸೂಚನೆ: ಬಿಹಾರ ಚುನಾವಣಾ ಪ್ರಚಾರದಲ್ಲಿ ಪರಸ್ಪರ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆ ರೀತಿಯ ಟೀಕೆಗಳಿಂದ ದೂರ ಉಳಿಯುವಂತೆ ಸೂಚಿಸಿದೆ. ಜತೆಗೆ, ಸಭ್ಯತೆಯ ಎಲ್ಲೆ ಮೀರದಂತೆ ರಾಜಕೀಯ ಮುಖಂಡರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪ್ರಚಾರದ ವೇಳೆ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳ ಶಬ್ದಪ್ರಯೋಗವನ್ನು ತೀವ್ರ ಕಳವಳ ಹಾಗೂ ಬೇಗುದಿಯಿಂದ ಪರಿಶೀಲನೆ ನಡೆಸಿದ್ದೇವೆ ಎಂದು ಚುನಾವಣಾ ಆಯೋಗ ಹೇಳಿದೆ. 
ಲಾಲು ವಿರುದ್ಧ ಟೀಕೆ: ಪ್ರಧಾನಿ ನರೇಂದ್ರ ಮೋದಿ ಆರ್‍ಜೆಡಿ ಮುಖ್ಯಸ್ಥ ಲಾಲು ಯಾದವ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸತತ ಎರಡನೇ ದಿನ ಬಿಹಾರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಜೆಡಿಯು ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆರ್‍ಜೆಡಿ ನಾಯಕ ಬಿಹಾರವನ್ನು ನಿಯಂತ್ರಿಸಲಿದ್ದಾರೆಂದು ಮೋದಿ ಎಚ್ಚರಿಸಿದರು. ಸಸರಾಮ್ ನಲ್ಲಿ ಮತ್ತು ಔರಂಗಾಬಾದ್ ನಲ್ಲಿ ಮಾತನಾಡಿದ ಪ್ರಧಾನಿ, ಲಾಲು ನೇರವಾಗಿ ಬಿಹಾರದಲ್ಲಿ ಯಾವುದೇ ಪಾತ್ರ ವಹಿಸುವುದು ಸಾಧ್ಯವಿಲ್ಲ. ಹಾಗಾಗಿ ಅವರು ಹೊರಗಿದ್ದುಕೊಂಡು ಸರ್ಕಾರವನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ. ಲಾಲು ತಮ್ಮನ್ನು ತಾವು ಬಿಗ್ ಬಾಸ್ ಎಂದು ಕರೆದುಕೊಳ್ಳುತ್ತಾರೆ. ತಮ್ಮ ತಾಳಕ್ಕೆ ಯಾರನ್ನೂ ಬೇಕಾದರೂ ಕುಣಿಸಬಹುದು ಎಂದು ಅವರು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.
ಆಯೋಗಕ್ಕೆ ದೂರು ಪ್ರಧಾನಿ ಮೋದಿ ಗುರುವಾರ ಮಾಡಿದ ಭಾಷಣದಲ್ಲಿ ಲಾಲೂ ಅವರನ್ನು 'ಶೈತಾನ್' ಎಂದಿದ್ದಕ್ಕೆ ಆರ್‍ಜೆಡಿ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಲಾಲು ಹಾಗೂ ಅವರ ಜಾತಿ ವಿರುದ್ಧ ಮೋದಿ ಹೀನಾಯ ಹಾಗೂ ಅವಮಾನಕಾರಕ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ ಅವರಿಗೆ ಮುಂದಿನ ರ್ಯಾಲಿಯಲ್ಲಿ ಮಾತನಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.