ದೇಶ

ಉಗ್ರಪ್ಪ ಮುಂದಿಟ್ಟು ಅಡಿ ಇಟ್ಟ ಸರ್ಕಾರ

ನಾಟಕೀಯ ಬೆಳವಣಿಗೆಗಳ ನಡುವೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪದಚ್ಯುತಿಗೆ ಸೋಮವಾರ ಕಡೆಗೂ...

ಉಗ್ರಪ್ಪ ಮುಂದಿಟ್ಟು ಅಡಿ ಇಟ್ಟ ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ- ಗೃಹ ಸಚಿವ ಜಿ ಪರಮೇಶ್ವರ್
Published On :
ಬೆಂಗಳೂರು: ನಾಟಕೀಯ ಬೆಳವಣಿಗೆಗಳ ನಡುವೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪದಚ್ಯುತಿಗೆ ಸೋಮವಾರ ಕಡೆಗೂ ಅಧಿಕೃತ ಚಾಲನೆ ದೊರೆತಿದೆ. ಇದೇ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಪದಚ್ಯುತಿಗೂ ಕಾಂಗ್ರೆಸ್ ಪ್ರಕ್ರಿಯೆ ಶುರು ಮಾಡಿದೆ. ಹೀಗಾಗಿ ಆಡಳಿತ , ಪ್ರತಿಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದಂತಾಗಿದೆ.
ಈ ನಡುವೆ, ವಿಧಾನಸಭೆಯಲ್ಲಿ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಾಣಿಸಿಕೊಂಡಿದ್ದು, ಇಡೀ ರಾಜಕೀಯ ಸಂಘರ್ಷಕ್ಕೆ ತುಪ್ಪ ಸುರಿದಂತಾಯಿತು. ಲೋಕಾಯುಕ್ತಉಪ ಲೋಕಾಯುಕ್ತ ವಿವಾದದಲ್ಲಿ ಸರ್ಕಾರ ಉಗ್ರಪ್ಪನವರ ಸದನ ಪ್ರವೇಶ ವಿಚಾರವನ್ನು ಬೇಕೆಂದೇ ಅಸ್ತ್ರವನ್ನಾಗಿ ಬಳಸಿತೇನೋ ಎಂಬಂತೆ ಭಾಸವಾಯಿತು. 
ಖುದ್ದು ಸ್ಪೀಕರ್ ಮನವಿ ಮಾಡಿದರೂ, ಸದನ ಬಿಟ್ಟು ಹೋಗಲು ಉಗ್ರಪ್ಪ ಒಪ್ಪಲಿಲ್ಲ. ಸದನ ಬಿಟ್ಟು ಹೋಗುವುದಿಲ್ಲ ಎಂಬ ಉಗ್ರಪ್ಪನವರ ಹಠ ಹಾಗೂ ಉಪ ಲೋಕಾಯುಕ್ತರ ವಿಚಾರದಲ್ಲಿ ಸರ್ಕಾರ ಮಾಡುತ್ತಿರುವ ಹಠ ಒಂದೇ ರೀತಿ ಕಂಡು ಬಂತು. 
ಲೋಕಾಯುಕ್ತ ಭಾಸ್ಕರ ರಾವ್ ಪದಚ್ಯುತಿಗೆ ಮಂಡಿಸುವ ನಿರ್ಣಯವನ್ನು ದುರ್ಬಲಗೊಳಿಸಬೇಕೆಂದೇ ಉಪಲೋಕಾಯುಕ್ತರ ಪದಚ್ಯುತಿ ವಿಚಾರವನ್ನು ಹುಟ್ಟು ಹಾಕಿದ್ದ ಕಾಂಗ್ರೆಸ್, ಸದನದಲ್ಲಿ ಉಗ್ರಪ್ಪರನ್ನು ಕೂರಿಸುವ ಮೂಲಕ ಸೋಮವಾರದ ಕಲಾಪವನ್ನು ತನಗಿಷ್ಟ ಬಂದಂತೆ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಲೋಕಾಯುಕ್ತ ಭಾಸ್ಕರ್ ರಾವ್ ಪದಚ್ಯುತಿ ಸಂಬಂಧ ಸಲ್ಲಿಸಿದ್ದ ಪ್ರಸ್ತಾಪವನ್ನು ಸೋಮವಾರ ವಿಧಾನಸಭೆ ಸ್ವೀಕರಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಕಾಂಗ್ರೆಸ್ ಉಪ ಲೋಕಾಯುಕ್ತರ ಪದಚ್ಯುತಿಗೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿತು. ಇದಕ್ಕೆ ಬೆಂಬಲವಾಗಿ 25 ಸಚಿವರ ಜತೆಗೆ 76 ಶಾಸಕರ ಸಹಿವುಳ್ಳ (ಒಟ್ಟು 103 ಸಹಿ) ಮನವಿಯನ್ನೂ ಸ್ವೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕಾಂಗ್ರೆಸ್ ಸಲ್ಲಿಸಿದೆ.
ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಲೋಕಾಯುಕ್ತ ಭಾಸ್ಕರ್ ರಾವ್ ಪದಚ್ಯುತಿಯ ಪ್ರಸ್ತಾಪ ಸದನದಲ್ಲಿ ಸ್ವೀಕೃತವಾಗುತ್ತಿದ್ದಂತೆ ಅದರ ಕ್ರೆಡಿಟ್ ಬಿಜೆಪಿ ಪಾಲಾಗುತ್ತದೆ ಎಂದು ಕಾಂಗ್ರೆಸ್ ಕೈ ಹಿಸುಕಿಕೊಂಡಿತು. ಆಗ ಎಚ್ಚೆತ್ತುಕೊಂಡ ಕಾಂಗ್ರೆಸ್‍ನ ರಮೇಶ್ ಕುಮಾರ್ ಸದನದಿಂದ ಹೊರಗೆ ತಪ್ಪು ಸಂದೇಶ ಹೊಗಬಾರದು. ನಮ್ಮದೂ ಬೆಂಬಲವಿದೆ ಎಂದು ಹೇಳತೊಡ ಗಿದಾಗ ಸಿಎಂ ಸಿದ್ದರಾಮಯ್ಯ ಪದಚ್ಯುತಿ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಂತಿಮವಾಗಿ ಅದು ಸದನದ ಸರ್ವಾನುಮತದ ನಿರ್ಣ ಯವೆಂಬ ಅಭಿಪ್ರಾಯಕ್ಕೆ ಬರಲಾಯಿತು. 
ಬಲವಂತದ ಸಹಿ: ಇದಕ್ಕೂ ಮುನ್ನ ಇಡೀ ದಿನ ಕಾಂಗ್ರೆಸ್ ವಲಯದಲ್ಲಿ ಹೈಡ್ರಾಮ ನಡೆಯಿತು. ಬೆಳಿಗ್ಗೆ ಕರೆದಿದ್ದ ಅನೌಪಚಾರಿಕ ಸಭೆ ರದ್ದುಪಡಿಸಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಯಿತು. ಉಪ ಲೋಕಾಯುಕ್ತರ ಪದಚ್ಯುತಿಗೆ ಕಾಂಗ್ರೆಸ್ ಶಾಸಕರ ಸಹಿ ಸಂಗ್ರಹ ನಡೆಯಿತು. ಇದರ ಹೊಣೆಯನ್ನು ಮುಖ್ಯ ಸಚೇತಕ ಅಶೋಕ ಪಟ್ಟಣಗೆ ವಹಿಸಲಾಗಿತ್ತು. ಪಟ್ಟಣ ಪಕ್ಷದ ಶಾಸಕರ ಸಹಿ ಪಡೆದರು. ಬಹುತೇಕರು ಒಲ್ಲದ ಮನಸ್ಸಿನಿಂದ ಸಹಿ ಹಾಕಿದರು. ವೈಯಕ್ತಿಕವಾಗಿ ಮಾತನಾಡಿಸಿ ದರೆ ಪಕ್ಷದ ಆದೇಶ ಉಲ್ಲಂಘಿಸುವಂತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿ ದರು. ಒಟ್ಟಾರೆ ಉಪ ಲೋಕಾಯುಕ್ತರ ಪದಚ್ಯುತಿ ಪ್ರಸ್ತಾವಕ್ಕೆ ಕಾಂಗ್ರೆಸ್‍ನಲ್ಲಿ ಸಾಕಷ್ಟು ವಿರೋಧವಿದೆ ಎಂಬುದು ಸ್ಪಷ್ಟ. 
ಪ್ರತಿಪಕ್ಷಗಳ ನಿರ್ಣಯ ಆಗಬಾರದು: ಆದರೂ ಈ ವಿಚಾರವನ್ನು ಬೆಳೆಸಿದ ಕಾಂಗ್ರೆಸ್ ನ ರಮೇಶ್‍ಕುಮಾರ್, ಲೋಕಾ ಯುಕ್ತ ಪದಚ್ಯುತಿ ಬಗ್ಗೆ ಇಡೀ ಸದನವೇ ತೀರ್ಮಾನ ಕೈಗೊಂಡಿದೆ ಎನ್ನುವ ಸಂದೇಶ ಹೋಗಬೇಕಿದೆ. ಆದ್ದರಿಂದ ಅವಸರ ಬೇಡ ಎಂದರು. ಆಗ ಸಿಟ್ಟಿಗೆದ್ದ ಜಗದೀಶ್ ಶೆಟ್ಟರ್, ಹೀಗಾಗುತ್ತದೆ ಎಂದೇ ನಾನು ನಿರ್ಣಯಕ್ಕೆ ಕಾಂಗ್ರೆಸ್ ಶಾಸಕರೂ ಸಹಿ ಮಾಡಬೇಕೆಂದು ಕೇಳಿದ್ದೆ. ಆದರೆ ನೀವು ಕೇಳಲಿಲ್ಲ ಎಂದು ಜರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಿರ್ಣಯ ಪ್ರತಿ ಪಕ್ಷದಿಂದ ಬಂದಿದೆ. ಲೋಕಾ ಯುಕ್ತರ ಪದಚ್ಯುತಿ ಸದನದ ನಿರ್ಣಯ ವಾಗಬೇಕೆನ್ನುವುದಷ್ಟೇ ಸರ್ಕಾರದ ಆಶಯ ಎಂದರು. ಇದಕ್ಕೆ ಸಮ್ಮತಿಸಿದ ಸ್ವೀಕರ್, ಈಗ ಪ್ರಸ್ತಾವವನ್ನು ಸ್ವೀಕರಿಸಲಾಗಿದೆಯೆೀ ವಿನಃ ನಿರ್ಣಯವಾಗಿಲ್ಲ. ಈ ಬಗ್ಗೆ ಕರಡು ಪ್ರಸ್ತಾಪ ಸಿದ್ಧಪಡಿಸಿ ಸದನದ ಮುಖಂಡರೊಂದಿಗೆ ಚರ್ಚಿಸಿ ನಂತರ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು. 
ಇಕ್ಕಟ್ಟಿಗೆ ಕಾಂಗ್ರೆಸ್: ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಪ್ರತಿಪಕ್ಷಗಳ ಪ್ರಸ್ತಾವವನ್ನು ಸ್ಪೀಕರ್ ಸ್ವೀಕರಿ ಸುತ್ತಿದ್ದಂತೆ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿತು. ಪ್ರತಿಪಕ್ಷಗಳ ಪ್ರಸ್ತಾವ ಸ್ವೀಕರಿಸಿದರೆ ಅದಕ್ಕೆ ಕಾಂಗ್ರೆಸ್ ವಿರೋಧವಿದೆ ಎಂಬ ವ್ಯಾಖ್ಯಾನ ಬರುತ್ತದೆ. ಹಾಗೆಂದು ಬೆಂಬಲಿಸಿದರೆ ಪ್ರತಿಪಕ್ಷಗಳ ನಿರ್ಣಯಕ್ಕೆ ಜಯವಾಗಿ ಲೋಕಾಯುಕ್ತ ರನ್ನು ಪದಚ್ಯುತಿಗೊಳಿಸಿದ ಕೀರ್ತಿ ಪ್ರತಿಪಕ್ಷಗಳ ಪಾಲಾಗುತ್ತದೆ ಎಂಬ ಗೊಂದಲ. ಆಗ ಕಾನೂನು ಸಚಿವ ಜಯಚಂದ್ರ ಹೇಗಾದರೂ ಮಾಡಿ ಮುಂದೂಡಿಸಲು ಯತ್ನಿಸಿದರು. ಆದರೆ ಸಫಲವಾಗಲಿಲ್ಲ. ಬೇರೆ ದಾರಿ ಇಲ್ಲದೆ ಪ್ರಸ್ತಾವಕ್ಕೆ ಸರ್ಕಾರದ ಬೆಂಬಲವಿದೆ ಎಂದರು. 
ಬಿಜೆಪಿಕಾಂಗ್ರೆಸ್ ವಾಗ್ವಾದ: ಅಧಿಕಾರ ದುರ್ಬಳಕೆ ಆರೋಪದಡಿ ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿಗೆ ಜಯಚಂದ್ರ ನೇತೃತ್ವದಲ್ಲಿ ಸಭಾಧ್ಯಕ್ಷರಿಗೆ ಸಲ್ಲಿಸಿದ ಪ್ರಸ್ತಾಪ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ದಿನದ ಕಲಾಪ ಮುಗಿಯುವ ಹಂತಕ್ಕೆ ಬರುತ್ತಿದೆ ಎನ್ನುವಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಹ್ಯಾರೀಸ್, ತನ್ವೀರ್ ಸೇಠ್ ಮತ್ತಿತರರು ಸ್ವೀಕರ್‍ಗೆ 103 ಮಂದಿ ಸಹಿವುಳ್ಳ ಪ್ರಸ್ತಾವ ಸಲ್ಲಿಸಿದರು. ಇದರಿಂದ ಸಿಟ್ಟಿಗೆದ್ದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕಾಂಗ್ರೆಸ್‍ನ ನಡೆಯನ್ನು ಖಂಡಿಸಿದರು. 
ಇದು ಇಡೀ ಸಂಸ್ಥೆಯನ್ನೇ ಮುಚ್ಚಿ ಹಾಕುವ ಪ್ರಯತ್ನ. ಇದರಿಂದ ಸರ್ಕಾರ ಹೇಡಿ ಎನ್ನುವುದು ಸ್ಪಷ್ಟವಾಗಿದೆ ಎಂದು ಕೂಗಾಡಿದರು.ಆಗ ಕಾಂಗ್ರೆಸ್ ಸದಸ್ಯರು ಪ್ರತಿವಾದ ಕ್ಕೆ ಮುಂದಾದರು. ಆಕ್ರೋಶಗೊಂಡ ಬಿಜೆಪಿ ಸದಸ್ಯರು ಪ್ರತಿಭಟನೆ ಆರಂಭಿಸಿದರು. 
ಆಗ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಜಗದೀಶ್ ಶೆಟ್ಟರೆ, ನಿಮ್ಮ ಅವಧಿಯಲ್ಲಿ ಆಗಿರುವ ಲೋಕಾಯುಕ್ತ, ಉಪ ಲೋಕಾಯುಕ್ತ ಹುದ್ದೆಗಳಲ್ಲಿರುವ ಭ್ರಷ್ಟರನ್ನು ತೆಗೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು. ಆಗ ಶೆಟ್ಟರ್ ಕೂಗಾಡುತ್ತಾ ಸುಭಾಷ್ ಅಡಿ ಪ್ರಾಮಾಣಿಕರು. ಅವರ ಪದಚ್ಯುತಿ ಬೇಡ ಎಂದರು. ಆದರೆ ಸ್ವೀಕರ್ ಒಪ್ಪಲಿಲ್ಲ. ಬಿಜೆಪಿ ಸದಸ್ಯರು ಪ್ರತಿಭಟನೆ ಜೋರು ಮಾಡಿದರು. ನಂತರ ಸ್ವೀಕರ್ ಸದನದನ್ನು ಮಂಗಳವಾರಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.