ದೇಶ

ಗೋಶಾಲೆ ನಿರ್ಮಾಣಕ್ಕೆ ಆಜಂ ಖಾನ್ ಪತ್ನಿಯಿಂದ 25 ಲಕ್ಷ ರೂ. ದೇಣಿಗೆ

ಮಥುರಾದಲ್ಲಿ ಪುರಿ ಶಂಕರಾಚಾರ್ಯ ಸ್ವಾಮಿ ಅಧೋಕ್ಷಜಾನಂದ ನಿರ್ಮಿಸುತ್ತಿರುವ ಗೋಶಾಲೆಗೆ ಆಜಂ ಖಾನ್ ಅಪಾರ ನೆರವು ನೀಡಿದ್ದಾರೆ.

ಗೋಶಾಲೆ ನಿರ್ಮಾಣಕ್ಕೆ ಆಜಂ ಖಾನ್ ಪತ್ನಿಯಿಂದ 25 ಲಕ್ಷ ರೂ. ದೇಣಿಗೆ
ಆಜಂ ಖಾನ್ ಹಾಗೂ ಅವರ ಪತ್ನಿ ತಜೀನ್ ಫಾತಿಮಾ(ಸಂಗ್ರಹ ಚಿತ್ರ)
Published On :

ಲಖನೌ: ಗೋಮಾಂಸ (ಬೀಫ್) ನಿಷೇಧ, ದಾದ್ರಿ ಪ್ರಕರಣದ ವಿವಾದ, ಉತ್ತರ ಪ್ರದೇಶ ಸಚಿವ ಆಜಂ ಖಾನ್ ಅವರು ಕೋಮುದ್ವೇಷ ಬಿತ್ತುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ನಡುವೆಯೇ, ಮಥುರಾದಲ್ಲಿ ಪುರಿ ಶಂಕರಾಚಾರ್ಯ ಸ್ವಾಮಿ ಅಧೋಕ್ಷಜಾನಂದ ನಿರ್ಮಿಸುತ್ತಿರುವ ಗೋಶಾಲೆಗೆ ಆಜಂ ಖಾನ್ ಅಪಾರ ನೆರವು ನೀಡಿದ್ದಾರೆ.
ಗೋಶಾಲೆ ನಿರ್ಮಾಣ ಶಂಕುಸ್ಥಾಪನೆಗೆ ಆಜಂ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಜಂ ಖಾನ್ ಬಗ್ಗೆ ಮಾತನಾಡಿರುವ ಪುರಿ ಶಂಕರಾಚಾರ್ಯ, ಆಜಂ ಖಾನ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಖಾನ್ ಹಾಗೂ ಅವರ ಪತ್ನಿ ಸಂಸದೆ ತಜೀನ್ ಫಾತಿಮಾ ಗೋಶಾಲೆ ನಿರ್ಮಾಣಕ್ಕಾಗಿ 25 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ತಜೀನ್ ಫಾತಿಮಾ ಅವರೊಂದಿಗೆ ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯ ಚೌಧರಿ ಮುನಾವರ್ ಸಲೀಮ್ ಕೂಡ ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂಪಾಯಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶಂಕರಾಚಾರ್ಯ ಅಧೋಕ್ಷಜಾನಂದ ಆಜಂ ಖಾನ್ ಗೆ ಒಂದು ಗೋವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ಆಜಂ ಖಾನ್ ಅವರಂತಹ ಒಳ್ಳೆಯ ಮುಸ್ಲಿಮರು ಗೋವಿನ ಬಗ್ಗೆ ಪೂಜನೀಯ ಭಾವನೆ, ಅಪಾರ ಕಾಳಜಿ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಹಿಂದೂಗಳೇ ಗೋವಿಗೆ ಅರ್ಹವಾದ ಗೌರವ ನೀಡುವುದಿಲ್ಲ ಎಂದು ಅಧೋಕ್ಷಜಾನಂದ ಹೇಳಿದ್ದಾರೆ. ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಹಣ ನೀಡಿರುವುದನ್ನು ಸ್ಪಷ್ಟಪಡಿಸಿರುವ ಚೌಧರಿ ಮುನಾವರ್ ಸಲೀಮ್, ಗೋವು ಹಾಗೂ ಗಂಗಾ ಇತಿಹಾಸ ಹಾಗೂ ಸಾಮಾಜಿಕ ಜೀವನದ ತತ್ವಗಳಿಗೆ ಪ್ರಸ್ತುತವಾಗಿದೆ. ಗೋಮಾಂಸದ ವಿಷಯದಲ್ಲಿ ಉಂಟಾಗಿದ್ದ ಕೋಮುಗಲಭೆ ಆತಂಕ ದೂರ ಮಾಡಲು ಗೋಶಾಲೆಗೆ ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ಸರ್ಕಾರದ ಪ್ರಥಮ ಸಚಿವ ಸಂಪುಟ ಸಭೆಯಲ್ಲೇ ಆಜಂ ಖಾನ್ ಗೋಹತ್ಯೆ ನಿಷೇಧ ನಿರ್ಣಯ ಕೈಗೊಳ್ಳುವುದಕ್ಕೆ ಒತ್ತಾಯಿಸಿದ್ದರು. ಅಲ್ಲದೇ ಮೀರತ್ ನಲ್ಲಿದ್ದ ಕಸಾಯಿಖಾನೆ ಸ್ಥಗಿತಗೊಳಿಸಿದ್ದರು ಎಂದು ಚೌಧರಿ ಮುನಾವರ್ ಸಲೀಮ್ ಹೇಳಿದ್ದಾರೆ. 
ಅಧೋಕ್ಷಜಾನಂದ ನಿರ್ಮಿಸುತ್ತಿರುವ ಗೋಶಾಲೆಯಲ್ಲಿ ಪ್ರಥಮ ಹಂತದಲ್ಲಿ 5 ,000 ಗೋವುಗಳಿಗೆ ಆಶ್ರಯ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಧೋಕ್ಷಜಾನಂದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋವು ಹಾಗೂ ಗೀತೆ(ಭಗವದ್ಗೀತೆ) ಎರಡನ್ನು ಮರೆತಿದೆ. ಆದರೆ ಆಜಂ ಖಾನ್ ನಂತಹ ವ್ಯಕ್ತಿಗಳು ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.