ಮತ್ತೆ ಗಡ್ಕರಿ ಬೆನ್ನು ಹತ್ತಿದ "ಪೂರ್ತಿ ಹಗರಣ" ಭೂತ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ಮಾಲೀಕತ್ವದ ಪೂರ್ತಿ ಸಂಸ್ಥೆಯ ಹಗರಣ ಮತ್ತೆ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ನಿತಿನ್ ಗಡ್ಕರಿ...

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ಮಾಲೀಕತ್ವದ ಪೂರ್ತಿ ಸಂಸ್ಥೆಯ ಹಗರಣ ಮತ್ತೆ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ನಿತಿನ್ ಗಡ್ಕರಿ ಅವರ ರಾಜಿನಾಮೆಗೆ ಆಗ್ರಹಿಸಿದೆ.
2015ರಲ್ಲಿ ಮಹಾಲೇಖ ಪಾಲ ನೀಡಿದ್ದ ವರದಿ ಸಂಖ್ಯೆ 12ರಲ್ಲಿ ನಿತಿನ್ ಗಡ್ಕರಿ ಅವರ ಪೂರ್ತಿ ಸಕ್ಕರೆ ಕಾರ್ಖಾನೆ (Purti Sakhar Karkhana Ltd) ಸಬ್ಸಿಡಿ ಯೋಜನೆಗಳ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಇದೀಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಉಭಯ ಸದನಗಳಲ್ಲಿ ಬಿಜೆಪಿ ವಿರುದ್ಧ ಗದಾಪ್ರಹಾರಕ್ಕೆ ಮುಂದಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ಇದೇ ವಿಚಾರ ಕೋಲಾಹಲಕ್ಕೆ ಕಾರಣವಾಯಿತು. ಸತತ ಏಳು ಬಾರಿ ಸದನವನ್ನು ಮುಂದೂಡಲಾಯಿತಾದರೂ, ಪ್ರತಿಪಕ್ಷಗಳು ಮಾತ್ರ ಶಾಂತವಾಗಲೇ ಇಲ್ಲ. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಂತಾರಾಮ್ ನಾಯ್ಕ್ ಅವರು ಈ ವಿಚಾರವನ್ನು ಪ್ರಸ್ತಾಪಿಸದ ಬಳಿಕ ಇಡೀ ಸದನದಲ್ಲಿ ಕೆಲಕಾಲ ಕೋಲಾಹಲ ಉಂಟಾಯಿತು.
"2015ರಲ್ಲಿ ಮಹಾಲೇಖ ಪಾಲ ನೀಡಿದ್ದ ವರದಿ ಸಂಖ್ಯೆ 12ರಲ್ಲಿ ನಿತಿನ್ ಗಡ್ಕರಿ ಅವರ ಪೂರ್ತಿ ಸಕ್ಕರೆ ಕಾರ್ಖಾನೆ ಸರ್ಕಾರದ ಸಬ್ಸಿಡಿ ಯೋಜನೆಗಳ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಸಂಸ್ಥೆಯ ಮಾಲೀಕತ್ವದ ಕುಟುಂಬದ ಮುಖ್ಯಸ್ಥರು ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಹೀಗಾಗಿ ನಿತಿನ್ ಗಡ್ಕರಿ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ" ಎಂದು ಶಾಂತಾರಾಮ್ ನಾಯ್ಕ್ ಅವರು ಹೇಳಿದರು.
ಈ ವೇಳೆ ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಸಮರವೇರ್ಪಟ್ಟಿತು. ಕಾಂಗ್ರೆಸ್ ಸಂಸದರೆಲ್ಲರೂ ಒಟ್ಟಾಗಿ ಸದನದ ಬಾವಿಗಿಳಿದು ಬಂದು ನಿತಿನ್ ಗಡ್ಕರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇದರಿಂದ ಉಂಟಾದ ಗದ್ದಲದಿಂದಾಗಿ ಸಭಾಧ್ಯಕ್ಷ ಪಿಜೆ ಕುರಿಯನ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ನಂತರ ಕಲಾಪ ಆರಂಭವಾದಾಗ ಮತ್ತೆ ಗಲಾಟೆ ಆರಂಭವಾದ ಹಿನ್ನಲೆಯಲ್ಲಿ ಕಲಾಪವನ್ನು ಮತ್ತೆ12ಗಂಟೆಗೆ ಮತ್ತೆ ಮುಂದೂಡಿದರು. ಮಧ್ಯಾಹ್ನ ಕಲಾಪ ಆರಂಭಗೊಂಡಾಗ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರು ಸಚಿವ ನಿತಿನ್ ಗಡ್ಕರಿ ಅವರನ್ನು ಬಂಧಿಸುವಂತೆ ಘೋಷಣೆ ಕೂಗಿದರು.
ಸಚಿವ ನಿತಿನ್ ಗಡ್ಕರಿ ಪ್ರಾಯೋಜಕರಾಗಿದ್ದ ಪೂರ್ತಿ ಸಹಕಾರ ಕಾರ್ಖಾನೆ ಸಂಸ್ಥೆ 2004ರಲ್ಲಿ ಭಾರತೀಯ ಪುನರ್ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್‌ಇಡಿಎ)ದಿಂದ 84.12 ಕೋಟಿ ರೂ. ಸಾಲ ಪಡೆದಿತ್ತು. 2004ರಲ್ಲೇ ಈ ಕಾರ್ಖಾನೆ ಉದ್ಘಾಟನೆಯಾಗಬೇಕಿತ್ತಾದರೂ, ಅದು ಆರಂಭವಾಗಿದ್ದು 2007ರಲ್ಲಿ. ಈ ನಡುವೆ 2007ರಲ್ಲಿ ಕಂಪನಿಯ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಲಾಯಿತು.
ಬಳಿಕ 2009ರಲ್ಲಿ ಐಆರ್‌ಇಡಿಎ ಜೊತೆ ಚೌಕಾಸಿ ನಡೆಸಿದ ಪೂರ್ತಿ ಕಂಪನಿ, ಒಂದೇ ಬಾರಿ ಸಾಲ ಚುಕ್ತಾ ಯೋಜನೆಯಡಿ ಪೂರ್ತಿ ಕಂಪನಿಯು ತಾನು ಪಡೆದಿದ್ದ 84 ಕೋಟಿ ರೂ. ಪೈಕಿ 71.35 ಕೋಟಿ ರೂ.ಗಳನ್ನು ಮಾತ್ರ ಮರಳಿಸಲು ಒಪ್ಪಿಕೊಂಡಿತ್ತು. ಸಂಪೂರ್ಣ ಸಾಲ ಮರುಪಾವತಿ ಅಸಾಧ್ಯ ಎಂಬುದಕ್ಕೆ ಕಂಪನಿ ನೀಡಿದ್ದ ಕಾರಣ ಸೂಕ್ತವಾಗಿಲ್ಲ. ಪೂರ್ತಿ ಹಣ ವಸೂಲಿ ಮಾಡುವುದರಲ್ಲಿ ಐಆರ್‌ಇಡಿಎ ಲೋಪ ಎಸಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


